“ಶಾಲೆಯೇ ದೇವಾಲಯ,ಶಿಕ್ಷಣವೇ ಶಕ್ತಿ.”
ಕೋವಿಡ್-19ರ ಪರಿಣಾಮವಾಗಿ ಮಕ್ಕಳು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ಎನ್ನುವ ಪರಿಸ್ಥಿತಿ ಎದುರಾದಾಗ ಮನಸ್ಸು ಮುದುಡಿತ್ತು. ಮನಸ್ಸಿಗೆ ನೆಮ್ಮದಿ ನೀಡುವ ದೇಹಕ್ಕೆ ಚೈತನ್ಯ ತುಂಬುವ ಲವಲವಿಕೆಯ ಮುದ್ದು ಮಕ್ಕಳು ಶಾಲೆಯಲ್ಲಿಲ್ಲದೇ ಶೂನ್ಯಭಾವ ಆವರಿಸಿತ್ತು. ವಿದ್ಯಾರ್ಥಿಗಳು ಯಾವುದೇ ಕಾರಣದಿಂದ ಶಿಕ್ಷಣ ಸೇತುವೆಯಿಂದ ಬೇರ್ಪಡಬಾರದು ಎಂಬ ಉದ್ದೇಶದಿಂದ, ನೆಟ್ ವರ್ಕ್ ಹೊಂದಿರುವ ವಿದ್ಯಾರ್ಥಿಗಳಿಗೆ ವ್ಯಾಟ್ಸಪ್ ಮೂಲಕ ಪಾಠ, ದೂರವಾಣಿ ಸಂಭಾಷಣೆ ಮೂಲಕ ಕಲಿಕಾ ಮಾರ್ಗದರ್ಶನ ನೀಡಿದೆವು.
502 ವಿದ್ಯಾರ್ಥಿಗಳನ್ನು ಹೊಂದಿರುವ ನಮ್ಮ ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಸುಮಾರು 30ಕ್ಕೂ ಅಧಿಕ ಜನವಸತಿ ಪ್ರದೇಶಗಳನ್ನು ವಿಂಗಡಿಸಿಕೊಂಡು,ದೇವಸ್ಥಾನ ವಠಾರ, ಪಂಚಾಯಿತಿ ಲೈಬ್ರರಿ, ಮನೆಯಂಗಳ,ಮರದ ಅಡಿಯಲ್ಲೂ, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ, ಕೋವಿಡ್ ನ್ನು ಎದುರಿಸುವ ಎಲ್ಲಾ ಸಿದ್ದತೆಯೊಂದಿಗೆ ತಮ್ಮ ಕಾಯಕವನ್ನು ಉತ್ಸಾಹದಿಂದ ನಿರ್ವಹಿಸಿರುವುದು ಹೆಮ್ಮೆಯ ವಿಷಯ .ದೂರದ ಬೆಳ್ಳಾಲ, ಮುದ್ದೆಬಿಹಾಳ, ಕೊಪ್ಪಳ ದಂತಹ ಊರಿನ ವಿದ್ಯಾರ್ಥಿಗಳನ್ನು ಕೂಡ ವ್ಯಾಟ್ಸಪ್ ಮೂಲಕ ಒಗ್ಗೂಡಿಸಿ ನಿರಂತರ ಶೈಕ್ಷಣಿಕ ಚಟುವಟಿಕೆ ಗಮನಿಸುತ್ತಿದ್ದೇವೆ.
27 ಮಕ್ಕಳ ಜವಾಬ್ದಾರಿಯನ್ನು ಹೊತ್ತ ನಾನು ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಹ, ಕೆಲವು ಮಕ್ಕಳನ್ನು ಮುಖತಃ ಭೇಟಿಯಾಗಿ ಮಾರ್ಗದರ್ಶನ ನೀಡಿದ ಕ್ಷಣ ಅವಿಸ್ಮರಣೀಯ.
ನಮ್ಮ ಶ್ರಮದ ಫಲವಾಗಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣದ ಮುಖ್ಯವಾಹಿನಿಗೆ ಬಂದು ಸ್ಪಂದಿಸುತ್ತಿರುವುದು ನಿಜಕ್ಕೂ ಖುಷಿ ನೀಡಿದೆ. ಆದಷ್ಟು ಬೇಗ ವಿದ್ಯಾರ್ಥಿಗಳು ಸುರಕ್ಷಿತವಾಗಿ ಶಾಲೆಗಳಿಗೆ ಬರುವಂತಾಗಲಿ ಎಂಬ ಆಶಯದ ನಿರೀಕ್ಷೆಯಲ್ಲಿ ನಾವಿದ್ದೇವೆ.
ವೀಣಾ ಕೆ.ವಿ.
ಸಹ- ಶಿಕ್ಷಕಿ ಸರಕಾರಿ ಪ್ರೌಢಶಾಲೆ,ಬಸ್ರೂರು
ಕುಂದಾಪುರ