Advertisement

ತಿರುಚಿದರೆ ಸ್ತಬ್ಧಗೊಳ್ಳುವ ಹೊಸ ಮತಯಂತ್ರ ಖರೀದಿಗೆ ಚಿಂತನೆ

01:04 PM Apr 03, 2017 | Karthik A |

ಹೊಸದಿಲ್ಲಿ/ ಭೋಪಾಲ್‌: ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಇವಿಎಂಗಳನ್ನು ಖರೀದಿಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ತಿರುಚಲು ಅಥವಾ ಬದಲಾಯಿಸಲು ಯತ್ನಿಸಿದೊಡನೆ ಕೆಲಸ ಮಾಡುವುದನ್ನೇ ನಿಲ್ಲಿಸುವಂಥ ಹೊಸ ರೀತಿಯ ‘ಎಂ3- ಮಾದರಿಯ ಇವಿಎಂ’ಗಳನ್ನು ಖರೀದಿಸಲಾಗುವುದು ಎಂದು ಆಯೋಗ ತಿಳಿಸಿದೆ. ಪಂಚರಾಜ್ಯ ಚುನಾವಣೆ ವೇಳೆ ಮತಯಂತ್ರಗಳ ಒಳಗೆ ಕೈಯಾಡಿಸಲಾಗಿದೆ ಎಂಬ ಆರೋಪ ಕೇಳಿಬಂದ ಬಳಿಕ, ಶನಿವಾರವಷ್ಟೇ ಮಧ್ಯಪ್ರದೇಶದ ಭಿಂಡ್‌ನ‌ಲ್ಲೂ ಯಾವುದೇ ಗುಂಡಿ ಒತ್ತಿದರೂ ಮತ ಬಿಜೆಪಿಗೇ ಹೋಗಿರುವ ಘಟನೆ ವರದಿಯಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆಯೋಗವು ಹೊಸ ಇವಿಎಂ ಖರೀದಿಗೆ ಮುಂದಾಗಿದೆ.

Advertisement

ಹೇಗಿರುತ್ತೆ ಈ ಇವಿಎಂ?: ಹೊಸ ಯಂತ್ರಗಳ ಖರೀದಿಗೆ ಸುಮಾರು 1,940 ಕೋಟಿ ರೂ. ವೆಚ್ಚವಾಗಲಿದ್ದು, 2018ರ ವೇಳೆಗೆ ಇವುಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವಾಲಯ ಮಾಹಿತಿ ನೀಡಿದೆ. ಎಂ3- ಟೈಪ್‌ ಇವಿಎಂಗಳಲ್ಲಿ ಯಂತ್ರಗಳ ಸಾಚಾತನವನ್ನು ದೃಢೀಕರಿಸುವ ವ್ಯವಸ್ಥೆಯಿರುತ್ತದೆ. ಪರಮಾಣು ಇಂಧನ ಪಿಎಸ್‌ಯು ಇಸಿಐಎಲ್‌ ಅಥವಾ ರಕ್ಷಣಾ ಪಿಎಸ್‌ಯು ಆಗಿರುವ ಬಿಇಎಲ್‌ ಕಂಪೆನಿಗಳು ತಯಾರಿಸಿದ ಇವಿಎಂಗಳು ಮಾತ್ರವೇ ಇತರ ಇವಿಎಂಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯ. ಹಾಗಾಗಿ, ಬೇರೆ ಯಾವುದೇ ಕಂಪೆನಿಯ ಇವಿಎಂಗಳನ್ನೂ ಇಲ್ಲಿ ಬಳಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಆಪ್‌ – ಆಯೋಗ ವಾಗ್ಯುದ್ಧ
ಇನ್ನೊಂದೆಡೆ, ಇವಿಎಂ ಅಕ್ರಮಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷ ಮತ್ತು ಚುನಾವಣಾ ಆಯೋಗದ ನಡುವೆ ವಾಕ್ಸಮರ ಆರಂಭವಾಗಿದೆ. ‘ಪಂಜಾಬ್‌ ಚುನಾವಣೆ ವೇಳೆ ಇವಿಎಂ ಅನ್ನು ತಿರುಚಿದ್ದರಿಂದಲೇ ಆಪ್‌ ಸೋಲಬೇಕಾಯಿತು. ಹೀಗಾಗಿ, ಫ‌ಲಿತಾಂಶವನ್ನು ಮತ ದೃಢೀಕರಣ ಪತ್ರಗಳೊಂದಿಗೆ ಹೋಲಿಕೆ ಮಾಡಿ ನೋಡಿ ಎಂದು ನಾವು ಪಂಜಾಬ್‌ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಅವರು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಇದು ಅವರ ಪಕ್ಷಪಾತೀಯ ಧೋರಣೆಯನ್ನು ತೋರಿಸುತ್ತದೆ’ ಎಂದು ಆಪ್‌ ಆರೋಪಿಸಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಆಯೋಗ, ‘ನಿಮಗೆ ಅಷ್ಟೊಂದು ಅನುಮಾನ ಇದ್ದರೆ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ. ಪಂಜಾಬ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದ್ದರೂ ಸೋತಿದ್ದೇಕೆ ಎಂಬುದನ್ನು ನೀವು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಿ. ಅದರ ಬದಲು ನಿಮ್ಮ ಸೋಲಿನ ಹೊಣೆಯನ್ನು ಇವಿಎಂ ಮೇಲೆ ಹೊರಿಸಬೇಡಿ’ ಎಂದಿದೆ.

ಇದಕ್ಕೆ ತಿರುಗೇಟು ನೀಡಿರುವ ಆಮ್‌ ಆದ್ಮಿ ಪಕ್ಷ, ‘ಇವಿಎಂ ತಿರುಚಿರುವ ವಿಚಾರಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವ ಬದಲು ಚುನಾವಣಾ ಆಯೋಗವು ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ. ಭಿಂಡಿಯಲ್ಲಿ ನಡೆದ ಘಟನೆಯು ಚುನಾವಣಾ ಆಯೋಗದ ನಿಷ್ಪಕ್ಷಪಾತದ ಕುರಿತ ಲಕ್ಷಾಂತರ ಮತದಾರರ ನಂಬಿಕೆಯನ್ನೇ ಪ್ರಶ್ನಿಸುವಂತೆ ಮಾಡಿದೆ’ ಎಂದು ಹೇಳಿದೆ.

ಮತಗಳೆಲ್ಲ ಕಮಲಕ್ಕೆ; ಭಿಂಡ್‌ ಡಿಎಂ, ಎಸ್ಪಿ ಎತ್ತಂಗಡಿ
ಇವಿಎಂ ಡೆಮೋ ವೇಳೆ ಯಾವುದೇ ಗುಂಡಿ ಒತ್ತಿದರೂ ಮತಗಳು ಬಿಜೆಪಿಗೇ ಬೀಳುತ್ತಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಭಿಂಡ್‌ನ‌ ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿ ಮಧ್ಯಪ್ರದೇಶ ಸರಕಾರ ರವಿವಾರ ಆದೇಶ ಹೊರಡಿಸಿದೆ. ಜತೆಗೆ, 19 ಮಂದಿಯ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆ. ಎ.9ರಂದು ಭಿಂಡ್‌ನ‌ ಅಟೇರ್‌ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಈ ಕುರಿತು ವರದಿ ನೀಡುವಂತೆ ಭಿಂಡ್‌ನ‌ 21 ಅಧಿಕಾರಿಗಳಿಗೂ ಚುನಾವಣಾ ಆಯೋಗ ಸೂಚಿಸಿತ್ತು.

Advertisement

ಪಂಜಾಬ್‌ನಲ್ಲಿ ನಾವು ಸೋತೆವು. ಉತ್ತರಪ್ರದೇಶದಲ್ಲಿ ಎಸ್ಪಿ ಸೋತಿತು. ಎರಡೂ ರಾಜ್ಯಗಳಲ್ಲೂ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲೇ ಇವಿಎಂಗಳಿದ್ದವು. ನಮಗೆ ಚುನಾವಣಾ ಆಯೋಗದ ಮೇಲೆ ಸಂಪೂರ್ಣ ನಂಬಿಕೆಯಿದೆ.
– ಭೂಪೇಂದ್ರ ಯಾದವ್‌, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next