Advertisement

ಅಡಿಕೆ ತೋಟ ಅಗೆದು ವಿನೂತನ ಪ್ರಯತ್ನ

11:42 AM Oct 11, 2018 | |

ಬೆಳ್ತಂಗಡಿ: ಅಡಿಕೆ ಬೆಳೆಗಾರರನ್ನು ಕಾಡುವ ಬೇರು ಹುಳ ಬಾಧೆಯಿಂದ ಮುಕ್ತಿ ಪಡೆಯಲು ಸಂಪೂರ್ಣ ತೋಟ ಅಗೆದು ಉಜಿರೆ ಸಮೀಪದ ಗುರಿಪಳ್ಳದ ಕೃಷಿಕ ರೊಬ್ಬರು ಹುಳ ಬಾಧೆ ನಿವಾರಣೆಗೆ ಪ್ರಯತ್ನ ನಡೆಸಿದ್ದಾರೆ. ಅಡಿಕೆ ಮರದ ಬುಡ ಅಗೆಯುವ ಬದಲು ತೋಟವನ್ನೇ ಅಗೆದರೆ ಶೇ. 70 ರಷ್ಟು ಹುಳ ಬಾಧೆ ನಿವಾರಿಸಬಹುದು ಎಂಬುದು ಅವರ ಅಭಿಪ್ರಾಯ.

Advertisement

ಗುರಿಪಳ್ಳದ ಕೃಷಿಕ, ಉಜಿರೆ ಎಸ್‌ ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸ. ಪ್ರಾಧ್ಯಾಪಕ ಸತ್ಯನಾರಾಯಣ ಭಟ್‌ ತೋಟ ಅಗೆದು ಹುಳ ನಾಶಪಡಿಸಿದ್ದಾರೆ. ಸೆಪ್ಟಂಬರ್‌ ಕೊನೆಯಲ್ಲಿ ಈ ರೀತಿ ಅಗೆಯುವುದರಿಂದ ಹುಳ ನಾಶಪಡಿಸ ಬಹುದು ಎನ್ನುವುದು ಅವರ ಅಭಿಪ್ರಾಯ.

6 ಇಂಚು ಕೆಳಗೆ ಇಳಿಯುತ್ತವೆ
ಹುಲ್ಲಿನ ಬೇರು ತಿನ್ನುತ್ತಾ ಬೆಳೆಯುವ ಹುಳಗಳು ಸೆಪ್ಟಂಬರ್‌ ತಿಂಗಳಲ್ಲಿ ಸುಮಾರು 4ರಿಂದ 6 ಇಂಚು ಕೆಳಗೆ ಇಳಿಯುತ್ತವೆ. ಮುಖ್ಯವಾಗಿ ನೀರು ಇಳಿದಂತೆ ಇವುಗಳು ಕೂಡಾ ಗಿಡದ ಬುಡದಲ್ಲಿ ಇಳಿಯುತ್ತವೆ. ಹುಲ್ಲಿನ ಬೇರನ್ನು ತಿನ್ನುತ್ತಾ ಅನಂತರ ಅಡಿಕೆ ಬೇರು ತಿಂದುಕೊಂಡು ಕಾಂಡದ ಬಳಿಗೆ ಹೋಗುತ್ತಾ ಮರದ ಬೇರಿನ ಜಾಲವನ್ನೇ ಮುಗಿಸಿ ಬಿಡುತ್ತವೆ. ತೋಟ ಅಗೆವ ವಿಧಾನದಲ್ಲಿ ಹುಳಗಳನ್ನು ಹೆಕ್ಕಿ ಕೊಲ್ಲಬೇಕಾಗುತ್ತದೆ.

ಸುಮಾರು 1 ಎಕ್ರೆ ತೋಟವನ್ನು 7 ಜನ ಸರಿಯಾಗಿ ಕೆಲಸ ನಿರ್ವಹಿಸಿದರೆ 2 ದಿನಗಳಲ್ಲಿ ಅಗೆಯುವ ಕೆಲಸ ಮಾಡಬಹುದಾಗಿದೆ. ಕೃಷಿ ಇಲಾಖೆಯ ಕ್ಲೋರೋಪೆರಿಫಾಸ್‌ ಅನ್ನು ನಾಲ್ಕು ವರ್ಷಗಳಿಂದ ಹಾಕಲಾಗಿದ್ದರೂ ದೊಡ್ಡ ಪರಿಣಾಮಕಾರಿಯಾದಂತೆ ಕಾಣುತ್ತಿಲ್ಲ. ಅನಂತರ ಎಮಿಡಾ ಕ್ಲೋಪಿಡ್‌ ಕೀಟನಾಶಕ ವನ್ನು ಹುಳದ ಮೊಟ್ಟೆ ಹಾಗೂ ಚಿಕ್ಕ ಹುಳಗಳನ್ನು ನಾಶ ಪಡಿಸಲು ಇಡೀ ತೋಟಕ್ಕೆ ಕಳೆದ ಬಾರಿ ಹಾಕಲಾಗಿದ್ದರೂ ಹೆಚ್ಚಿನ ಪ್ರಯೋಜನ ಕಂಡಂತಿಲ್ಲ ಎನ್ನುತ್ತಾರೆ ಸತ್ಯನಾರಾಯಣ ಭಟ್‌. ಈ ಬಾರಿ ಸುಮಾರು ಅರ್ಧ ಎಕ್ರೆ ತೋಟಕ್ಕೆ ಒಂದು ಫೀಟಿನಷ್ಟು ಹೊಸ ಮಣ್ಣನ್ನು ಹಾಕಿದ ಪರಿಣಾಮದಿಂದ ಈ ಭಾಗದಲ್ಲಿ ಬೇರುಹುಳದ ಬಾಧೆ ಇಲ್ಲ. ಈ ಪ್ರಯೋಗವೂ ಖಂಡಿತ ಪರಿಣಾಮಕಾರಿಯಾಗಬಹುದು. ಕಲ್ಲು ಮಿಶ್ರಿತ ಕೆಂಪು ಮಣ್ಣಲ್ಲಿ ಹುಳ ಮೊಟ್ಟೆ ಇಟ್ಟರೂ ಇದರ ಚಲನೆಗೆ ಕಷ್ಟ ಆಗುವುದರ ಪರಿಣಾಮದಿಂದ ಉಳಿಯುವುದಿಲ್ಲ. ನಮ್ಮ ತಾಲೂಕಿನಲ್ಲಿ ಗದ್ದೆಗೆ ಮಣ್ಣು ತುಂಬಿಸಿ ತೋಟ ಮಾಡುವುದೇ ಸೂಕ್ತ ಎನ್ನುತ್ತಾರೆ ಇವರು.

ಸಚ್ಛತೆ ಅಗತ್ಯ 
ತೋಟ ಸಚ್ಛವಾಗಿಟ್ಟು ಗಿಡದ ಬುಡದಲ್ಲಿ ನೀರು ನಿಲ್ಲದಂತೆ ಮತ್ತು ನೀರು ಸಲೀಸಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಕಳೆ ತೆಗೆಯುವುದರಿಂದಲೂ ಬೇರುಹುಳ ನಿಯಂತ್ರಿಸಬಹುದಾಗಿದೆ. ಮೊಟ್ಟೆ, ಮರಿ ಹುಳಗಳು ಕಂಡುಬಂದಲ್ಲಿ ನಾಶಪಡಿಸಬೇಕು. ಕಹಿ ಬೇವಿನ ಹಿಂಡಿ ಬಳಸುವುದರಿಂದಲೂ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ಪರಾವಲಂಬನ ಜೀವಿಗಳನ್ನು ಬಳಸಿ ಈ ಹುಳಗಳನ್ನು ಕೊಲ್ಲುವ ಪ್ರಯೋಗ ನಮ್ಮಲ್ಲಿ ಫಲಕಾರಿ ಆಗಿಲ್ಲ. ಕಾರಣ ಏನೆಂದರೆ ಲ್ಯಾಬ್‌ ವಾತಾವರಣಕ್ಕೂ ತೋಟಕ್ಕೂ ಇರುವ ವ್ಯತ್ಯಾಸ ಇರಬಹುದು ಎನ್ನಬಹುದು. ವಿಜ್ಞಾನಿಗಳು ಇದು ಸುಲಭ ಎಂದು ಹೇಳಿದರೂ ಕೆಲವು ಸಾವಿರ ರೂ. ದಂಡ ಎನ್ನುತ್ತಾರೆ ಸತ್ಯನಾರಾಯಣ ಭಟ್‌.

Advertisement

ಬೇರುಹುಳ ಕಡಿಮೆ ಆಗಿದೆ
ಬೇರುಹುಳದ ಅನುಭವ ನಮಗೆ ಹೊಸದು. ತೋಟದಲ್ಲಿ ಸುಮಾರು 100 ಅಡಿಕೆ ಮರಗಳು ಸಪೂರವಾದ ಅನಂತರವೇ ಇದು ಬೇರುಹುಳದ ಪರಿಣಾಮ ಎಂದು ಅರಿವಾಯಿತು. ಈ ಬಗ್ಗೆ ಸುಳ್ಯದ ರಮೇಶ್‌ ದೇಲಂಪಾಡಿ ಅವರ ಸಲಹೆಯಂತೆ ತೋಟ ಅಗೆದರೆ ನಿಯಂತ್ರಣ ಸಾಧ್ಯ ಎಂದು ಗೊತ್ತಾಯಿತು. ಶೇ. 60ರಿಂದ 70 ಹುಳಗಳು ಕೊಲ್ಲಲು ಸಿಗುತ್ತಿದ್ದು, ಕಳೆದ 2 ವರ್ಷದಿಂದ ಸ್ವಲ್ಪಮಟ್ಟಿಗೆ ನಿಯಂತ್ರಣ ಸಾಧ್ಯವಾಗಿದೆ. 500 ಗಿಡ ಈಗಾಗಲೇ ಹೋಗಿದ್ದು, ತೆಂಗು ನೆಡಲಾಗಿದೆ. ಹೊಸದಾಗಿ ಬೇರುಹುಳ ಹರಡುವುದು ಕಡಿಮೆ ಆಗಿದೆ. ಈ ಪ್ರಯತ್ನ ಇತರ ತಾಲೂಕಿನಲ್ಲಿದೆ.
– ಸತ್ಯನಾರಾಯಣ ಭಟ್‌ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next