ಬೆಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತರುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ರಾಜ್ಯ ಸರಕಾರವು ಅಷ್ಟೇ ಉತ್ಸಾಹ ಮತ್ತು ಬದ್ಧತೆಯಿಂದ ಅನುಷ್ಠಾನಕ್ಕೆ ತರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರದ ಸೇವಾ ಸದನದಲ್ಲಿ ಬುಧವಾರ ಆಯೋಜಿಸಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ದೈಹಿಕ ಶಿಕ್ಷಣ, ಡಿಜಿಟಲ್ ಮತ್ತು ಹಣಕಾಸು ಜಾಗೃತಿ ಕಲಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯಗೊಳಿಸಲಾಗಿದೆ. ಉಳಿದ ವಿಷಯಗಳ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಎನ್‌ಇಪಿ ಜಾರಿಯಲ್ಲಿ ರಾಜ್ಯವು ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜದ ನಿಜವಾದ ಅಗತ್ಯಗಳೇನು ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು ಹೆಜ್ಜೆಯಿರಿಸುವ ಕೆಲಸ ನಡೆಯುತ್ತಿದೆ. ಎನ್‌ಇಪಿಯಲ್ಲಿ ನಮ್ಮತನಕ್ಕೆ ಒತ್ತು ಕೊಡಲಾಗಿದ್ದು ಹಲವು ದಶಕಗಳಿಂದ ಎದುರು ನೋಡುತ್ತಿದ್ದಂತಹ ಪರಿವರ್ತನೆ ಬರುತ್ತಿದೆ ಎಂದು ತಿಳಿಸಿದರು.
ಮಲ್ಲೇಶ್ವರಂ ಕ್ಷೇತ್ರ ಸಾಂಸ್ಕೃತಿಕ ಸಿರಿವಂತಿಕೆಗೆ ಹೆಸರುವಾಸಿ ಆಗಿದೆ. ಈ ಹಿನ್ನೆಲೆಯಲ್ಲಿ ಮೂಲ ಮಲ್ಲೇಶ್ವರ ಸೃಷ್ಟಿಸುವುದೇ ನಮ್ಮೆಲ್ಲರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಲಾವಿದರು ತೊಡಗಿಕೊಂಡಿರುವುದು ಸಂತಸದ ವಿಚಾರ ಎಂದರು.