Advertisement

ರಾಜಕೀಯಕ್ಕಾಗಿಯೇ ಎನ್‌ಇಪಿ ಬಗ್ಗೆ ವಿರೋಧ ಬೇಡ

10:09 PM Sep 24, 2021 | Team Udayavani |

ಹಳೇ ತಲೆಮಾರುಗಳು ಕಳೆದು ಹೊಸ ತಲೆಮಾರುಗಳು ಬರುತ್ತಿದ್ದಂತೆ ಬದಲಾವಣೆಯಾಗಲೇಬೇಕು. ಹಿಂದೆ ಓದುತ್ತಿದ್ದ ವಿಷಯವನ್ನೇ ಈಗಲೂ ಓದಲು ಸಾಧ್ಯವಿಲ್ಲ. ಪರಿಸ್ಥಿತಿಗೆ ಮತ್ತು ಆಸಕ್ತಿಗೆ ತಕ್ಕಂತೆ ವಿದ್ಯಾಭ್ಯಾಸದ ವಿಷಯವೂ ಬದಲಾಗಬೇಕು. ಈ ನಿಟ್ಟಿನಲ್ಲಿಯೇ ಕೇಂದ್ರ ಸರಕಾರ ಹೊಸದಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಹೆಚ್ಚು ವಿವರಣೆ ಸದ್ಯದ ಮಟ್ಟಿಗೆ ಅಗತ್ಯವೇನಲ್ಲ. ಈಗಾಗಲೇ ಈ ಬಗ್ಗೆ ಹಲವಾರು ಚರ್ಚೆಗಳು ಆಗಿವೆ. ಸುಮಾರು ಒಂದೂವರೆ ವರ್ಷದ ಹಿಂದೆಯೇ ರಾಷ್ಟ್ರೀಯ ನೀತಿ ಬಗ್ಗೆ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಸದ್ಯ ಚರ್ಚೆ ಇರುವುದು ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಈ ನೀತಿ ಜಾರಿಯಾಗುತ್ತಿರುವ ಬಗ್ಗೆ.

ಇಡೀ ದೇಶದಲ್ಲೇ ಮೊದಲಿಗೆ ರಾಷ್ಟ್ರೀಯ ನೀತಿ ಜಾರಿ ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಪದವಿ ಕಾಲೇಜುಗಳಲ್ಲಿ ಎನ್‌ಇಪಿ ಅಡಿಯಲ್ಲಿ ಪಠ್ಯಕ್ರಮ ಮತ್ತು ಕೋರ್ಸ್‌ಗಳನ್ನು ಪರಿಚಯ ಮಾಡುತ್ತಿದೆ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ, ರಾಜ್ಯ ಸರಕಾರ ತೀರಾ ಅವಸರದಲ್ಲಿ ಎನ್‌ಇಪಿ ಜಾರಿ ಮಾಡುತ್ತಿದೆ. ಹೊಸ ನೀತಿ ಜಾರಿಗೂ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಅದರಲ್ಲೂ ವಿಪಕ್ಷಗಳ ನಾಯಕರ ಜತೆ ಒಂದು ಚರ್ಚೆ ನಡೆಸಬಹುದಿತ್ತು. ಇದನ್ನು ಬಿಟ್ಟು ಏಕಾಏಕಿ ಜಾರಿ ಮಾಡುತ್ತಿದೆ ಎಂಬ ಆರೋಪವೂ ಇದೆ.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿಧಾನಪರಿಷತ್‌ನಲ್ಲಿ ಗುರುವಾರ ಸಾಕಷ್ಟು ಚರ್ಚೆ ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ್‌ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಶುಕ್ರವಾರ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಬಂದಿದ್ದು, ಕಾಂಗ್ರೆಸ್‌ ಸದಸ್ಯರು ನೇರವಾಗಿಯೇ ಇದನ್ನು ನಾಗ್ಪುರ ಮತ್ತು ಆರ್‌ಎಸ್‌ಎಸ್‌ ಶಿಕ್ಷಣ ನೀತಿ ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಗದ್ದಲವೂ ಆಗಿದೆ. ಕಡೆಗೆ ಗದ್ದಲ ಹೆಚ್ಚಾದಾಗ ಅನಿವಾರ್ಯವಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿಕೆ ಮಾಡಿದ್ದಾರೆ.

ಆದರೆ ಕಡೇ ದಿನ ಎನ್‌ಇಪಿ ಬಗ್ಗೆ ರಾಜಕೀಯ ಬದಿಗಿಟ್ಟು ಆಡಳಿತ ಮತ್ತು ವಿಪಕ್ಷಗಳು ಕುಳಿತು ವಿಸ್ತೃತವಾಗಿ ಚರ್ಚೆ ನಡೆಸಬಹುದಿತ್ತು. ಇನ್ನೂ ಚರ್ಚೆಗೆ ಅವಕಾಶ ಬೇಕು ಎಂದಾದಲ್ಲಿ ಇನ್ನೊಂದಿಷ್ಟು ದಿನ ಅಧಿವೇಶನವನ್ನು ವಿಸ್ತರಣೆ ಮಾಡಬಹುದಿತ್ತು. ಈ ಮೂಲಕವಾದರೂ, ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಬಗ್ಗೆ ಸದನದಲ್ಲೇ ಚರ್ಚಿಸಬಹುದಿತ್ತು.

Advertisement

ಪ್ರಸ್ತುತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಗತ್ಯವಿದೆ. ನಾವು ಇನ್ನೂ ಹಳೇ ಸಂಪ್ರದಾಯದಂತೆಯೇ ವಿದ್ಯಾಭ್ಯಾಸ ಮುಂದುವರಿಸಿಕೊಂಡು ಬಂದಿದ್ದೇವೆ. ಪದವಿ ಶಿಕ್ಷಣ ಮುಗಿಸಿದ ಅನಂತರ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳಲ್ಲಿ ಇನ್ನೂ ಇದೆ. ಹೀಗಾಗಿ, ಉದ್ಯೋಗ ಕೇಂದ್ರಿತವಾಗಿ ಹೊಸ ಪಠ್ಯಕ್ರಮ ಬರುತ್ತಿರುವುದು ಸ್ವಾಗತಾರ್ಹವೇ. ಹೀಗಾಗಿ ವಿಪಕ್ಷಗಳು ರಾಜಕೀಯಕ್ಕಾಗಿಯೇ ವಿರೋಧ ಮಾಡುವುದನ್ನು ಬಿಟ್ಟು ಎನ್‌ಇಪಿಯಲ್ಲಿರುವ ಸಂಗತಿಗಳ ಬಗ್ಗೆ ಗಮನಹರಿಸಬೇಕು. ಸರಕಾರವೂ ತನ್ನ ಪಟ್ಟು ಬಿಟ್ಟು ವಿಪಕ್ಷಗಳೊಂದಿಗೆ ಕುಳಿತು ಈ ಬಗ್ಗೆ ಚರ್ಚೆ ನಡೆಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next