Advertisement

ಚೀನ ಮೇಲಿನ ಅವಲಂಬನೆ ಹೊಸ ದಿಕ್ಕಿನಲ್ಲಿರಲಿ ಯೋಚನೆ

12:55 AM Jun 20, 2020 | Hari Prasad |

ಮಿತಿಮೀರುತ್ತಿರುವ ಚೀನದ ದುಷ್ಟತನಕ್ಕೆ ದೊಡ್ಡ ಪಾಠ ಕಲಿಸಲೇಬೇಕಾದ ಸಮಯವಿದು. ಈ ಕಾರಣಕ್ಕಾಗಿಯೇ, ಸೈನ್ಯ ಮತ್ತು ರಾಜತಾಂತ್ರಿಕ ಮಾರ್ಗವಷ್ಟೇ ಅಲ್ಲದೇ, ಆರ್ಥಿಕ ರೂಪದಲ್ಲೂ ಆ ರಾಷ್ಟ್ರಕ್ಕೆ ಪೆಟ್ಟು ನೀಡಬೇಕಾಗಿದೆ.

Advertisement

ಈ ನಿಟ್ಟಿನಲ್ಲಿ ಭಾರತ ಸರಿಯಾದ ಮಾರ್ಗದಲ್ಲೇ ಹೆಜ್ಜೆಯಿಡುತ್ತಿದೆ. ಇದರ ಹಂತವಾಗಿ, ಬಿಎಸ್‌ಎನ್‌ಎಲ್‌ 4ಜಿ ಸಾಧನಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಚೀನ ಮೂಲದ ಕಂಪನಿಗಳ ಸಲಕರಣೆಗಳನ್ನು ಬಳಸದಿರಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ.

ಅಲ್ಲದೇ, ಖಾಸಗಿ ಟೆಲಿಕಾಂ ಕಂಪನಿಗಳಿಗೂ ಚೀನ ಮೂಲದ ಕಂಪನಿಗಳ ಸಲಕರಣೆಗಳನ್ನು ಖರೀದಿಸದಂತೆ ಸೂಚಿಸಲಾಗಿದೆ. ಇದರ ನಡುವೆಯೇ, ರೈಲ್ವೆ ಇಲಾಖೆಯು ಚೀನದ ಕಂಪನಿಯೊಂದರ ಜತೆಗೆ ನಡೆದಿದ್ದ ಒಪ್ಪಂದವನ್ನೂ ರದ್ದು ಮಾಡಿದೆ. ಪೂರ್ವ ಲಡಾಖ್‌ನಲ್ಲಿ ಚೀನ ಸೈನಿಕರು ಭಾರತೀಯ ಯೋಧರನ್ನು ಹತ್ಯೆಗೈದ ಘಟನೆಯ ಬಳಿಕ, ಭಾರತದಲ್ಲಿ ಆಕ್ರೋಶ ಮಡುಗಟ್ಟಿದೆ. ದೇಶಾದ್ಯಂತ, ಚೀನ ಉತ್ಪನ್ನಗಳ ಆಮದನ್ನು ನಿಲ್ಲಿಸಬೇಕು ಎನ್ನುವ ಕೂಗೂ ಅಧಿಕವಾಗಿದೆ. ಇದು 1962ರ ಭಾರತವಲ್ಲ ಎಂದು ಚೀನಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಎದುರಾಗಿದೆ.

ಆದರೆ, ಭಾರತ ಹಾಗೂ ಚೀನ ನಡುವಿನ ವ್ಯಾಪಾರ ಸಂಬಂಧ ಎಷ್ಟು ಆಳವಾಗಿದೆಯೆಂದರೆ, ಏಕಾಏಕಿ ಎಲ್ಲವನ್ನೂ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಪ್ಲಾಸ್ಟಿಕ್‌ ಆಟಿಕೆಗಳು, ಟಿವಿ, ಫ್ರಿಜ್‌, ಮೊಬೈಲ್‌ ಫೋನ್‌ಗಳಿಂದ ಹಿಡಿದು ನ್ಯೂಕ್ಲಿಯರ್‌ ರಿಯಾಕ್ಟರ್‌ಗಳ ಉಪಕರಣಗಳವರೆಗೆ, ರಸಗೊಬ್ಬರದಿಂದ ಹಿಡಿದು, ಆ್ಯಪ್‌, ಸೋಷಿಯಲ್‌ ಮೀಡಿಯಾಗಳವರೆಗೆ ಚೀನ ತನ್ನ ಬೇರುಗಳನ್ನು ಭಾರತದಾದ್ಯಂತ ಹರಡಿದೆ. ಕಳೆದ ಎರಡು ದಶಕಗಳಿಂದ ಭಾರತ ಚೀನದ ಮೇಲೆ ವ್ಯಾಪಾರಿಕವಾಗಿ ಎಷ್ಟು ಅವಲಂಬಿತವಾಗಿಬಿಟ್ಟಿದೆ ಎನ್ನುವುದನ್ನು ಅಂಕಿಸಂಖ್ಯೆಗಳೇ ಸಾರುತ್ತವೆ.

ಕಳೆದೊಂದು ವರ್ಷದಲ್ಲಿ ಭಾರತವು ಚೀನದಿಂದ ಆಮದು ಮಾಡಿಕೊಂಡು ಸರಕು- ಸಾಮಗ್ರಿಗಳ ಪ್ರಮಾಣ 85 ಶತಕೋಟಿ ಡಾಲರ್‌ಗೂ ಅಧಿಕವಿದ್ದರೆ, ಭಾರತವು ಆ ದೇಶಕ್ಕೆ ರಫ್ತು ಮಾಡಿದ್ದು ಕೇವಲ 29 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಸಾಮಗ್ರಿಗಳನ್ನಷ್ಟೇ. ದೇಶದ ಔಷಧ ವಲಯಕ್ಕೆ ಕಚ್ಚಾ ಸಾಮಗ್ರಿಗಳ ಪೂರೈಕೆಯಲ್ಲೂ ಚೀನವೇ ಮುಂದಿದೆ. ದೇಶದ ವಿದ್ಯುತ್‌ ಯೋಜನೆಗಳಲ್ಲೂ ಚೀನದ ಸಾಮಗ್ರಿಗಳೇ ತುಂಬಿವೆ. ದೇಶದ ನಾಲ್ಕು ಪ್ರಖ್ಯಾತ ಮೊಬೈಲ್‌ ಫೋನ್‌ ಕಂಪನಿಗಳು ಚೀನ ಮೂಲದ್ದವು. ದೇಶದ ಅನೇಕ ನವೋದ್ಯಮಗಳು, ಸ್ಟಾರ್ಟ್‌ಅಪ್‌ಗಳಲ್ಲಿ ಚೀನದ ಹೂಡಿಕೆಯಿದೆ. ಈ ಬೇರುಗಳನ್ನು ಕತ್ತರಿಸಿಹಾಕುವುದು ಸುಲಭವಂತೂ ಅಲ್ಲ, ಹಾಗೆಂದೂ ಅಸಾಧ್ಯವೂ ಅಲ್ಲ.

Advertisement

ಇದನ್ನೆಲ್ಲ ಪರಿಗಣಿಸಿದಾಗ, ಒಂದು ದೇಶವಾಗಿ ಭಾರತ ಬೃಹತ್‌ ಉತ್ಪಾದನಾ ಕೇಂದ್ರವಾಗುವುದೇ ಈ ಸವಾಲಿಗೆ ಪರಿಹಾರ ಎನ್ನುವುದು ಅರ್ಥವಾಗುತ್ತದೆ. ಚೀನದ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳಬೇಕೆಂದರೆ, ದೇಶದ ಉತ್ಪಾದನಾ ವಲಯ ಅಗಾಧವಾಗಿ ಬೆಳೆಯಬೇಕು. ಈ ಕಾರಣಕ್ಕಾಗಿಯೇ, ಕೆಲ ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಆತ್ಮನಿರ್ಭರ ಭಾರತದ ಕರೆಗೆ ದೇಶವು ಕಿವಿಗೊಡಬೇಕಿದೆ.

ಭಾರತವು ಆತ್ಮನಿರ್ಭರವಾಗಬೇಕೆಂದರೆ, ಮುಖ್ಯವಾಗಿ ಉದ್ಯಮ ವಲಯದಲ್ಲಿ, ಅದರಲ್ಲೂ ಎಂಎಸ್‌ಎಂಇಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕಾದ ಅಗತ್ಯವಿದೆ. ಆತ್ಮನಿರ್ಭರವಾಗುವ ಹಾದಿಯಲ್ಲಿ ಅನೇಕ ಅಡ್ಡಿಗಳು ಎದುರಾಗುವುದು ನಿಶ್ಚಿತವಾದರೂ, ಅಡ್ಡಿಗಳನ್ನೆಲ್ಲ ಮೀರಿ ನಿಲ್ಲುವುದಕ್ಕೆ ದೃಢ ನಿಶ್ಚಯ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next