ಸುಳ್ಯ : ಇಂದು ಹಲವಾರು ಕಾರಣಗಳಿಂದ ಮಣ್ಣು, ಗಾಳಿ, ನೀರು ಇವೇ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ತೀವ್ರ ಮಾಲಿನ್ಯಕ್ಕೆ ಒಳಗಾಗಿವೆ. ಜಲಚರಗಳಿಗೆ, ಮನುಷ್ಯರಿಗೆ, ಪ್ರಾಣಿ-ಪಕ್ಷಿ- ಸಸ್ಯ ಸಂಕುಲಕ್ಕೆ, ಒಟ್ಟಾರೆಯಾಗಿ ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತಿದೆ. ಇದಕ್ಕೆ ಭಾಗಶಃ ಪರಿಹಾರವೆಂಬಂತೆ ಸುಳ್ಯ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಇ ಆ್ಯಂಡ್ ಸಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಮಾನಸ ಎಂ., ಮಧುಶ್ರೀ ಎನ್.ಎಚ್., ಧನ್ಯಾ ಬಿ.ಆರ್. ಮತ್ತು ದಿವ್ಯಾ ಎಚ್. ಎಸ್. ಆ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಾಜೆಕ್ಟ್ ವರ್ಕ್ ಕೈಗೊಂಡು ಯಶಸ್ವಿಯಾಗಿದ್ದಾರೆ.
Advertisement
ಈ ಸ್ವಯಂ ನಿಯಂತ್ರಿತ ವ್ಯವಸ್ಥೆಯು ಕಲುಷಿತ ನೀರಿನಲ್ಲಿ ಅಡಕವಾಗಿರುವ ಘನರೂಪದ ತ್ಯಾಜ್ಯಾಂಶ, ನೀರಿನ ಪಿ.ಎಚ್. ಮಟ್ಟ (ಆಮ್ಲ ಅಥವಾ ಪ್ರತ್ಯಾಮ್ಲದ ಪ್ರಮಾಣ), ನೀರಿನ ಉಷ್ಣತೆ ಮತ್ತು ವಿದ್ಯುತ್ ಸಂವಹನ ಸಾಮರ್ಥ್ಯವನ್ನು ವಿವಿಧ ಸೆನ್ಸರ್‌ಗಳಿಂದ ಗ್ರಹಿಸಿ, ಪಡೆದ ವಿದ್ಯುತ್ ಸಂಕೇತಗಳನ್ನು ಸಂಸ್ಕರಿಸಿ, ಪರಿಷ್ಕರಿಸಿ ದೊರೆತ ದತ್ತಾಂಶಗಳನ್ನು ಕಲುಷಿತ ನೀರಿನ ಗುಣಮಟ್ಟ ಪರಿವೀಕ್ಷಣಾ ಕೇಂದ್ರಕ್ಕೆ ಜಿ.ಎಸ್.ಎಂ. ಜಾಲದ ಮೂಲಕ ಎಸ್.ಎಂ.ಎಸ್. ಕಳುಹಿಸುತ್ತದೆ. ಈ ದತ್ತಾಂಶಗಳನ್ನು ಆ ಕೇಂದ್ರದಲ್ಲಿರುವ ಮೈಕ್ರೋಕಂಟ್ರೋಲರ್ ಸ್ವೀಕರಿಸಿ, ಅದರಂತೆ ಕಲುಷಿತ ನೀರಿನ ಗುಣಮಟ್ಟವನ್ನು ಸುರಕ್ಷತಾ ಮಟ್ಟಕ್ಕೆ ಏರಿಸಲು ಬೇಕಾದ ನಿರ್ದೇಶನಗಳನ್ನು ಆ ಕೇಂದ್ರದಿಂದ ಎಸ್.ಎಂ.ಎಸ್. ಮೂಲಕ ಈ ಸ್ವಯಂ ನಿಯಂತ್ರಿತ/ಚಾಲಿತ ವ್ಯವಸ್ಥೆಗೆ ಕಳುಹಿಸಿಕೊಡುತ್ತದೆ. ಅದರಂತೆ ಈ ವ್ಯವಸ್ಥೆಯು ಕಾರ್ಯ ನಿರ್ವಹಿಸಿ, ಕಲುಷಿತ ನೀರಿನ ಹಾನಿಯ ಪ್ರಮಾಣವನ್ನು ತಗ್ಗಿಸುತ್ತದೆ. ವಿದ್ಯಾರ್ಥಿನಿಯರ ಈ ಪ್ರಾಜೆಕ್ಟ್ ವರ್ಕ್‌ಗೆ ಇ ಆ್ಯಂಡ್ ಸಿ ವಿಭಾಗದ ಪ್ರಾಧ್ಯಾಪಕಿ ಇಂದುಮುಖೀ ಅವರು ಮಾರ್ಗದರ್ಶನ ನೀಡಿದ್ದರು.