ಯಲಹಂಕ: ರೈಲು ಹಳಿಗಳಲ್ಲಿ ಬಿರುಕು ಉಂಟಾಗುವ ಮೊದಲೇ ಅದನ್ನು ಕಂಡುಹಿಡಿಯುವ ಸಾಧನವನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಅನ್ವೇಷಿಸಿದೆ.
ವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಶಾಂಕ್ ಶಂಕರ್, ದಿಲೀಪ್ ಸಾಯಿ, ಅರ್ಜುನ್ ಕಿಣಿ, ಅಖೀಲ್.ವಿ ಹಾಗೂ ಶ್ರೇಯಸ್ ದತ್ತಶಿವರಾಮ ಅವರನ್ನು ಒಳಗೊಂಡ ತಂಡ, ಪ್ರಾಧ್ಯಾಪಕ ಡಾ.ರಘುನಂದನ್ ಅವರ ಮಾರ್ಗದರ್ಶನದಲ್ಲಿ ಈ ಅನ್ವೇಷಣೆ ಮಾಡಿದೆ.
ಜತೆಗೆ ಚೆನೈನಲ್ಲಿ ನ್ಯಾಸ್ಕಾಂ (ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಪ್ಟ್ವೇರ್ ಆಂಡ್ ಸರ್ವೀಸಸ್ ಕಂಪನೀಸ್) ಹಾಗೂ ಬಾಯನ್ಸಿ ಅಯೋಜಿಸಿದ ತಂತ್ರಜ್ಞಾನ ಕ್ಷೇತ್ರದ ರಾಷ್ಟ್ರೀಯ ಸಂಶೋಧನಾ ಸ್ಪಧೇಯಲ್ಲಿ ತಂಡ ದ್ವಿತೀಯ ಬಹುಮಾನ ಪಡೆದಿದೆ.
ಕಾರ್ಯನಿರ್ವಹಣೆ ಹೇಗೆ?: ರೈಲು ಹಳಿಗಳಲ್ಲಿ ಉಂಟಾಗುವ ಬಿರುಕುಗಳಿಂದಾಗಿ ಸಂಭವಿಸುವ ರೈಲು ಅಪಘಾತಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇಂಥ ಬಿರುಕುಗಳನ್ನು ಕಂಡುಹಿಡಿಯಲು ನಿಟ್ಟೆ ಮೀನಾಕ್ಷಿ ವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಡುಹಿಡಿದಿರುವ ಸಾಧನವನ್ನು ರೈಲು ಗಾಡಿಯ ಅಡಿಯಲ್ಲಿ ಅಳವಡಿಸಬಹುದು.
ಈ ಸಾಧನ ಹಳಿಗಳ ಲೋಪಗಳನ್ನು ವೈಜ್ಞಾನಿಕವಾಗಿ ದಾಖಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ಅದೇ ಹಾದಿಯಲ್ಲಿ ಮತ್ತೂಂದು ರೈಲು ಸಾಗುವುದನ್ನು ತಪ್ಪಿಸಿ ಸೂಕ್ತ ರಿಪೇರಿಗಳನ್ನು ಮಾಡಲು ಸಾಧ್ಯವಾಗುತ್ತದೆ.
“ಇಂಥ ಮಹತ್ವದ ಹಾಗೂ ಉಪಯುಕ್ತ ಅನ್ವೇಷಣೆ ನಡೆದಿರುವುದು ದೇಶದಲ್ಲೇ ಮೊದಲು ಎಂದು ನ್ಯಾಸ್ಕಾಂನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅನ್ವೇಷಣೆಗೆ “ಪೇಟ್ರಿಯಾಟ್’ ಎಂದು ನಾಮಕರಣ ಮಾಡಿರುವ ವಿದ್ಯಾರ್ಥಿಗಳ ತಂಡ, ಪೇಟೆಂಟ್ ಪಡೆಯುವ ಕಾರ್ಯದಲ್ಲಿ ತೊಡಗಿದೆ,’ ಎಂದು ಪ್ರಾಧ್ಯಾಪಕರಾದ ಡಾ.ರಘುನಂದನ್ ತಿಳಿಸಿದ್ದಾರೆ.