ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಹೆಚ್ಚಿ ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಕೌಶಲ್ಯಪೂರ್ಣ ಪದವೀಧರರನ್ನು ಸೃಷ್ಟಿಸುವ ಸಲುವಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಮ್ಯಾಂಚೆಸ್ಟರ್ ದೇಶದ ಸಲ್ಫೋಡ್ ವಿಶ್ವವಿದ್ಯಾಲಯವು ಹೊಸ ಒಡಂಬಡಿಕೆ ಮಾಡಿಕೊಂಡಿದೆ. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಸೆಲ್ಫೋಡ್ ವಿವಿ ಕುಲಪತಿ ಪ್ರೊ.ಹೆಲನ ಮಾರ್ಷಲ್ಲ ಶೈಕ್ಷಣಿಕ ಮತ್ತು ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕಿದರು.
ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ನಮ್ಮ ಸಮಾಜವು ಜ್ಞಾನಾರ್ಜನೆಗೆ ಅತಿ ಪ್ರಾಮುಖ್ಯತೆ ನೀಡುತ್ತದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ಕಾಗಿ ಹೊಸ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಇದರಿಂದ ಶೈಕ್ಷಣಿಕ ಕ್ಷೇತ್ರದ ಹೊಸ ಸಂಶೋಧನೆಗಳಿಗೆ ಸೆಲ್ಫೋಡ್ ವಿವಿಯ ಸಹಕಾರ ಸಿಗಲಿದೆ. ಉನ್ನತ ಶಿಕ್ಷಣದ ಅಭಿವೃದ್ಧಿಗೆ ಅಲ್ಲಿ ಕೈಗೊಂಡಿರುವ ಹೊಸ ಪ್ರಕಲ್ಪಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಈ ಒಪ್ಪಂದ ಅನುವಾಗಲಿದೆ ಎಂದು ವಿವರ ನೀಡಿದರು.
ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಎಸ್.ವಿ.ರಂಗನಾಥ್ ಮಾತನಾಡಿ, ಬೆಂಗಳೂರು ದೇಶದಲ್ಲೇ ಸಂಶೋಧನಾ ಹಬ್ ಆಗಿ ಬೆಳೆಯುತ್ತಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಡುತ್ತಿವೆ. ಐಐಎಸ್ಸಿ, ಐಐಎಂ, ರಾಷ್ಟ್ರೀಯ ಕಾನೂನು ಶಾಲೆ ಮಾತ್ರವಲ್ಲದೆ ಅನೇಕರ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಹ್ಯಾಕಾಶ ಆಧಾರಿತ ಶೇ.65ರಷ್ಟು, ಮಾಹಿತಿ ತಂತ್ರಜ್ಞಾನ ಆಧಾರಿತ ಶೇ.50ರಷ್ಟು ಮತ್ತು ಬಯೊ ತಂತ್ರಜ್ಞಾನ ಆಧಾರಿತ ಶೇ.30ರಷ್ಟು ಸಂಶೋಧನೆಗಳು ಬೆಂಗಳೂರಿನಲ್ಲೇ ನಡೆಯುತ್ತಿವೆ.
ಇಷ್ಟು ಮಾತ್ರವಲ್ಲದೆ, 500 ಪ್ರತಿಷ್ಠಿತ ಕಂಪೆನಿಗಳಲ್ಲಿ 130 ಕಂಪೆನಿಗಳ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ. ಹೀಗೆ ಬೆಂಗಳೂರು ಸಂಶೋಧನೆಗೆ ಬೇಕಾದ ವಾತಾವರಣ ಹೊಂದಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಿಂದ ಇದು ಸಾಧ್ಯವಾಗಿದೆ ಎಂದರು. ಗ್ರೇಟರ್ ಮ್ಯಾಂಚೇಸ್ಟರ್ ಮೇಯರ್ ಆ್ಯಂಡಿ ಬುರ್ನಹಮ್, ವಿವಿಯ ಸಮಕುಲಪತಿ ಜೊ.ಪುರ್ವೇಸ್, ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಹಕ ನಿರ್ದೇಶಕ ಪ್ರೊ.ಎಸ್.ಎ.ಕೋರಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ಮೊದಲಾದವರು ಇದ್ದರು.
ಒಪ್ಪಂದವೇನು?: ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಸೆಲ್ಫೋರ್ಡ್ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ಜಂಟಿ ಸಂಶೋಧನೆ, ಕೈಗಾರಿಕೆಗಳಿಗೆ ಪೂರಕವಾದ ಮತ್ತು ಉದ್ಯಮಶೀಲತೆಯ ಕುರಿತಾದ ಕಾರ್ಯಯೋಜನೆ ಸಿದ್ಧಪಡಿಸುವುದು, ಉಪನ್ಯಾಸಕ ಮತ್ತು ಪ್ರಾಧ್ಯಾಪಕರ ವಿನಿಯಮ ಮತ್ತು ಹೊಸ ಅವಕಾಶ ಸೃಷ್ಟಿ, ವಿದ್ಯಾರ್ಥಿ ವಿನಿಯಮ ಕಾರ್ಯಕ್ರಮ, ಉನ್ನತ ಶಿಕ್ಷಣದ ಸಿಬ್ಬಂದಿ ವರ್ಗಕ್ಕೆ ತರಬೇತಿ ಮತ್ತು ಉನ್ನತ ಸಂಶೋಧನೆಗೆ ಅವಕಾಶ, ಸೆಲ್ಫೋಡ್ ಅಧ್ಯಯನ ಪ್ರಚಾರ ಮತ್ತು ಜಂಟಿಯಾಗಿ ಪಠ್ಯಕ್ರಮದ ಅಭಿವೃದ್ಧಿಗೆ ಸಹಿ ಮಾಡಲಾಗಿದೆ. ಇದರ ಜತೆಗೆ ಸ್ಮಾರ್ಟ್ ಮತ್ತು ಭವಿಷ್ಯದ ನಗರಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಶೋಧನೆ, ಆರೋಗ್ಯ, ಬಯೋ ಮತ್ತು ಬಯೋ ವಿಜ್ಞಾನ, ಅನ್ವಯಿಕ ಉತ್ಪಾದನಾ ಕ್ಷೇತ್ರ ಮತ್ತು ರೊಬೊಟಿಕ್ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲು ಒಪ್ಪಂದಕ್ಕೆ ಸಹಿ ಮಾಡಲಾಗಿದೆ.