ಧಾರವಾಡ: ರಾಜ್ಯದ ಸಾವಿನ ಹೆದ್ದಾರಿ ಎಂದೆ ಕುಖ್ಯಾತಿ ಪಡೆದ ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆ ಮತ್ತೆ ಸುದ್ದಿಯಾಗಿದೆ. ಅಧಿಕಾರ ವಹಿಸಿಕೊಳ್ಳಲು ವಿಜಯಪುರಕ್ಕೆ ಕುಟುಂಬ ಸಮೇತ ಹೊರಟಿದ್ದ ಐಎಎಸ್ ಅಧಿಕಾರಿಯಿದ್ದ ಕಾರೊಂದು ಪಲ್ಟಿಯಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಅವರ ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಪ್ರವಿಣ ಕುಮಾರ ಕಾರಿನಲ್ಲಿದ್ದವರು. ಬೆಳಗಿನ ಜಾವ 5.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಎಲ್ಲರನ್ನೂ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ನೀರಿಗೆ ಹಾರಿದ ಹುಲಿಗೆ ಎಲ್ಲರೂ ಫಿದಾ!-ವಿಡಿಯೋ ವೈರಲ್
ದಾವಣಗೆರೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಿಜಯಮಹಾಂತೇಶ ದಾನಮ್ಮನವರ ಅವರ ವರ್ಗಾವಣೆ ಆದೇಶ ನಿನ್ನೆಯಷ್ಟೇ ಬಂದಿತ್ತು. ವಿಜಯಪುರ ಜಿಲ್ಲಾಧಿಕಾರಿಯಾಗಲು ಹೊರಟಿದ್ದ ಸಮಯದಲ್ಲಿಯೇ ಈ ದುರ್ಘಟನೆ ನಡೆದಿದೆ.
ಯರಿಕೊಪ್ಪ ಕ್ರಾಸ್ ಬಳಿಯಲ್ಲಿ ಎದುರಿಗೆ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.