ಹಾಸನ: ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿದ್ದ ಹಾಸನ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಈಗ ಹೊಸದಾಗಿ ಆರಂಭವಾಗಿರುವ ಹಾಸನ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟಿವೆ. ಮೂರು ತಿಂಗಳ ಹಿಂದೆಯಷ್ಟೇ ಉದಯವಾದ ಹಾಸನ ವಿಶ್ವವಿದ್ಯಾನಿಲಯವು ಈಗ ಶೈಕ್ಷಣಿಕ ಅಭಿವೃದ್ಧಿ ಮತ್ತು ಕಾಂಪಸ್ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಲ್ಲಿ ನಿರತವಾಗಿದೆ. ಬೆಂ
ಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಬೆಂಗಳೂರು ಕಡೆಗೆ ಹಾಸನ ದಿಂದ 5 ಕಿ.ಮೀ.ದೂರದಲ್ಲಿ 33 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಆರಂಭವಾಗಿತ್ತು. ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ನ 70 ಎಕರೆ ಪ್ರದೇಶದಲ್ಲಿಯೇ ಈಗ ಹಾಸನ ವಿಶ್ವವಿದ್ಯಾನಿಲಯವು ಆರಂಭವಾಗಿದೆ.
ಹೊಸ ವಿಶ್ವ ವಿದ್ಯಾನಿಲಯವು ಈಗ ಜಿಲ್ಲೆಯ ಪದವಿ ಕಾಲೇಜುಗಳ ಸಂಯೋಜನೆ, ಪ್ರವೇಶಾತಿಯನ್ನು ಆರಂಭಿಸಿದೆ. ಹಾಸನ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಹಾಸನ ಜಿಲ್ಲೆಯ ಎಲ್ಲ 57 ಪದವಿ ಕಾಲೇಜುಗಳೂ ಒಳಪಡುತ್ತವೆ. ಈ ವರ್ಷದಿಂದ ಪ್ರಥಮ ವರ್ಷದ ಪದವಿ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಹಾಸನ ವಿಶ್ವವಿದ್ಯಾನಿಲಯವೇ ಪ್ರದವಿ ಪ್ರದಾನ ಮಾಡಲಿದೆ.
ಹೊಸ ಕೋರ್ಸ್‌ಗಳ ಆರಂಭ: ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಈಗಾಗಲೇ ವಾಣಿಜ್ಯಶಾಸ್ತ್ರ, ಸಸ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಕನ್ನಡ, ಇಂಗ್ಲಿಷ್ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬೋಧನೆ ನಡೆಯುತ್ತಿದೆ. ಈಗಿರುವ ಎಂಟು ಕೋರ್ಸ್‌ಗಳ ಜೊತೆಗೆ ಈ ವರ್ಷದಿಂದಲೇ 6 ಹೊಸ ಕೋರ್ಸ್ ಆರಂಭಿ ಸಲು ಹಾಸನ ವಿಶ್ವವಿದ್ಯಾನಿ ಲಯ ಸಜ್ಜಾಗುತ್ತಿದೆ.
Related Articles
ಎಂಬಿಎ, ಎಂಎಸ್‌ಡಬ್ಲೂ, ಗಣಕ ವಿಜ್ಞಾನ (ಎಂ.ಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್ )ಭೌತ ಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿ ಸಲು ಸರ್ಕಾರಕ್ಕೆ ಪ್ರಸ್ತಾವನೆ ಯನ್ನು ಸಲ್ಲಿಸಿದ್ದು, ಮಂಜೂರಾತಿಯ ವಿಶ್ವಾಸದಲ್ಲಿದೆ.
ವಿವಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ: ವಿಶ್ವ ವಿದ್ಯಾನಿಲಯವು ಈ ವರ್ಷದಿಂದ 6 ಹೊಸ ಕೋರ್ಸ್ ಗಳ ನ್ನು ಆರಂಭಿಸುವುದರಿಂದ ಒಟ್ಟು 14 ಸ್ನಾತಕೋತ್ತರ ಪದವಿ ವಿಭಾಗಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಹೊಸದಾಗಿ ಶೈಕ್ಷಣಿಕ ಸಮುತ್ಛಯ (ಅಕಾಡೆಮಿಕ್ ಬ್ಲಾಕ್) ನಿರ್ಮಾಣವಾಗಬೇಕಾಗುತ್ತದೆ. ಜೊತೆಗೆ ಕೇಂದ್ರೀಯ ಉಪಕರಣ ವಿಭಾಗದ ನಿರ್ಮಾಣವೂ ಆಗಬೇಕಾಗಿದೆ. ಇನ್ನು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಸ್ನಾತಕೋತ್ತರ ಹಾಸ್ಟೆಲ್‌ಗಳು, ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣವೂ ಆಗಬೇಕಾಗಿದೆ. ಇದಕ್ಕೆಲ್ಲ ಅನುದಾನ ಕೋರಿ ವಿಶ್ವವಿದ್ಯಾನಿಲಯವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಸರ್ಕಾರದ 2023- 24ನೇ ಸಾಲಿನ ಬಜೆಟ್ ನಲ್ಲಿ ಅನುದಾನ ಘೋಷಣೆಯ ನಿರೀಕ್ಷೆಯಲ್ಲಿದೆ.
ಹೇಮಗಂಗೋತ್ರಿಗೆ ಮೂಲ ಸೌಕರ್ಯ ಕೊರತೆ: 33 ವರ್ಷಗಳ ಹಿಂದೆ ಹೇಮಗಂಗೋತ್ರಿ ಆರಂಭವಾದರೂ ಮೂಲ ಸೌಕರ್ಯದ ಕೊರತೆಯಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ಸೌಲಭ್ಯವಿಲ್ಲ. ಹೇಮ ಗಂಗೋತ್ರಿಗೆ ಪ್ರವೇಶ ಪಡೆದಿರುವ ಸುಮಾರು 300 ವಿದ್ಯಾರ್ಥಿಗಳಲ್ಲಿ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದಲೇ ಬರುತ್ತಾರೆ. ಅವರಿಗೆಲ್ಲ ಹಾಸ್ಟೆಲ್ ಸೌಲಭ್ಯವಿಲ್ಲ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಕೆಲವು ವಿದ್ಯಾರ್ಥಿಗಳು, ಮತ್ತೆ ಕೆಲವು ವಿದ್ಯಾರ್ಥಿಗಳು ಪ್ರತಿದಿನ ಬಸ್‌ನಲ್ಲಿ ತರಗತಿಗೆ ಬಂದು ಹೋಗುತ್ತಾರೆ. ಈಗ ಪುರುಷರಿಗೆ ಹಾಗೂ ಮಹಿಳೆಯರಿಗೆ ಒಂದೊಂದು ಹಾಸ್ಟೆಲ್ ಇವೆ. ಅವು ಅರಣ್ಯಕ್ಕೆ ಹೊಂದಿಕೊಂಡಂತಿರುವುದರಿಂದ ಮಹಿಳಾ ವಿದ್ಯಾರ್ಥಿಗಳು ಹಾಸ್ಟೆಲ್ ಸೇರಲು ಇಚ್ಛಿಸುತ್ತಿಲ್ಲ. ಬೇಡಿಕೆಗೆ ತಕ್ಕಷ್ಟು ಪುರುಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲ. ಹೇಮಗಂಗೋತ್ರಿ ಕ್ಯಾಂಪಸ್‌ನಲ್ಲಿ ಸ್ವತಂತ್ರ ವಿವಿಗೆ ಪೂರಕವಾದ ಸೌಲಭ್ಯಗಳಿಲ್ಲ. ಹೊಸ ಕ್ಯಾಂಪಸ್ ಸುಂದರ ಹಾಗೂ ಆಕರ್ಷಕವಾಗಿ ರೂಪುಗೊಳ್ಳಬೇಕಾಗಿದೆ. ಅದಕ್ಕೆ ಪೂರಕವಾಗಿ ಅಲ್ಲಿ ರಸ್ತೆಗಳ ನಿರ್ಮಾಣ, ನೀರು ಪೂರೈಕೆ, ಹಸಿರೀಕರಣ ರೂಪುಗೊಳ್ಳಬೇಕಾಗಿದೆ. ಇದಕ್ಕೆಲ್ಲ ಸಾಕಷ್ಟು ಅನುದಾನದ ಅಗತ್ಯವಿದೆ.
-ಎನ್. ನಂಜುಂಡೇಗೌಡ