Advertisement

Sandalwood; ರಿಲೀಸ್‌ ಭರಾಟೆಯಲ್ಲಿ ಮಂಕಾಗುತ್ತಿರುವ ಹೊಸಬರು

12:33 PM Feb 23, 2024 | Team Udayavani |

ವಾರಕ್ಕೆ 12 ಸಿನಿಮಾ ರಿಲೀಸ್‌ ಆದ್ರೆ ಯಾರ್‌ ನೋಡ್ತಾರೆ…’ -ಕಳೆದ ವಾರ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಗುಂಪೊಂದು ಹೀಗೆ ಮಾತನಾಡುತ್ತಿತ್ತು. ಅದಕ್ಕೆ ಕಾರಣ ಆ ವಾರ (ಫೆ.16) ಬರೋಬ್ಬರಿ 12 ಚಿತ್ರಗಳು ತೆರೆಕಂಡಿದ್ದವು. ಇದು ಆ ವಾರವೊಂದರ ಕಥೆಯಲ್ಲ, ವಾರ ವಾರ ಕನ್ನಡದಲ್ಲಿ ಇತ್ತೀಚೆಗೆ ಏಳು-ಎಂಟು, ಒಂಭತ್ತು… ಹೀಗೆ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇವೆ. ಇಷ್ಟೊಂದು ಸಿನಿಮಾಗಳು ಯಾವುದೇ ಪ್ಲ್ರಾನ್‌ ಇಲ್ಲದೇ ಬಿಡುಗಡೆಯಾದರೆ ಇದರಿಂದ ನಿರ್ಮಾಪಕನಿಗೆ ಏನಾದರೂ ಲಾಭವಾಗುತ್ತಾ? ನಿರ್ದೇಶಕನ ಶ್ರಮ, ಕನಸಿಗೊಂದು ಸಾರ್ಥಕತೆ ಸಿಗುತ್ತಾ? ಎಂಬ ಪ್ರಶ್ನೆ ಅನೇಕರದು.

Advertisement

ಹೌದು, ಸದ್ಯ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯನ್ನು ನೋಡಿದಾಗ “ಅನ್ನದಾತ’ ಎಂದು ಕರೆಸಿಕೊಳ್ಳುವ ನಿರ್ಮಾಪಕನಿಗ ತನ್ನ ಸಿನಿಮಾ ರಿಲೀಸ್‌ ಮಾಡಲು ಒಂದು ಸೂಕ್ತ ಪೂರ್ವತಯಾರಿ ಇಲ್ವಾ? ಸುತ್ತಮುತ್ತಲಿನವರ ಮಾತು ಕೇಳಿ ಕಷ್ಟಪಟ್ಟು ಸಾಕಿ ಬೆಳೆಸಿದ “ಸಿನಿಮಾ’ ಎಂಬ ತನ್ನ ಕೂಸನ್ನು  ಬೀದಿಪಾಲು ಮಾಡುತ್ತಿದ್ದಾನಾ? ಎಂಬ ಪ್ರಶ್ನೆ ಬಾರದೇ ಇರದು.

ಸ್ಕ್ರಿಪ್ಟ್ ಹಂತದ ಜೋಶ್‌ ರಿಲೀಸ್‌ ವೇಳೆ ಇರಲ್ಲ..

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದರೆ ಅದರಲ್ಲಿ 180ಕ್ಕೂ ಹೆಚ್ಚು ಚಿತ್ರಗಳು ಹೊಸಬರದ್ದೇ ಆಗಿರುತ್ತದೆ. ಆದರೆ, ಈ ಹೊಸಬರು ಬಿಡುಗಡೆ ಹಂತಕ್ಕೆ ಬರುವಾಗ ಮಾತ್ರ ಆರಂಭದ ಜೋಶ್‌ ಕಳೆದುಕೊಂಡಿರುತ್ತಾರೆ. ಒಮ್ಮೆ ಸಿನಿಮಾ ರಿಲೀಸ್‌ ಮಾಡಿ, ಕೈ ತೊಳೆದುಕೊಂಡರೆ ಸಾಕು ಎಂಬ ಭಾವಕ್ಕೆ ಅನೇಕರು ಬಂದಿರುತ್ತಾರೆ. ಆಗ ಸ್ಕ್ರಿಪ್ಟ್ ಹಂತದ ಜೋಶ್‌, ಚಿತ್ರೀಕರಣದ ವೇಳೆ ಮಾಡಿಕೊಳ್ಳುವ ಪ್ಲ್ರಾನ್‌ ಸಿನಿಮಾ ಬಿಡುಗಡೆ ವೇಳೆ ನಿರ್ಮಾಪಕನಿಗೆ ಯಾಕೆ ಇರಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಆರ್ಥಿಕ ಸಂಕಷ್ಟ ಹಾಗೂ ಹೊಸಬರ ಸಿನಿಮಾವನ್ನು ನೋಡುವ ದೃಷ್ಟಿ. ಸಿನಿಮಾ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆಯಿಂದ ಸಾಲ-ಸೋಲ ಮಾಡಿಯಾದರೂ ನಿರ್ಮಾಪಕ ಸಿನಿಮಾವನ್ನು ಆತನ ಶಕ್ತಿಯಾನುಸಾರ ಚೆನ್ನಾಗಿಯೇ ಕಟ್ಟಿಕೊಟ್ಟಿರುತ್ತಾನೆ. ನಿರ್ದೇಶಕನ ಕಲ್ಪನೆಗೆ ಸಾಥ್‌ ನೀಡಲು ಪ್ರಯತ್ನಿಸಿರುತ್ತಾನೆ. ಆದರೆ, ಅಂತಿಮವಾಗಿ ಸಿನಿಮಾ ಬಿಝಿನೆಸ್‌ ಮಾತುಕತೆ ಎಂದು ಬರುವಾಗ ಮೊದಲು ಕುಗ್ಗಿ ಬಿಡೋದೇ ನಿರ್ಮಾಪಕ.

ಬಿಝಿನೆಸ್‌ ಮಾತುಕತೆಯಲ್ಲೇ ಕುಗ್ಗುವ ನಿರ್ಮಾಪಕ

Advertisement

ಇವತ್ತು ವಾರಕ್ಕೆ ಏಳೆಂಟು ಸಿನಿಮಾಗಳು ಯಾವುದೇ ಪ್ಲಾನ್‌ ಇಲ್ಲದೇ ಬರಲು ಹೊಸಬರ ಸಿನಿಮಾಗಳಿಗೆ ಬಿಝಿನೆಸ್‌ ಆಗದೇ ಇರುವುದು ಕೂಡಾ ಒಂದು. ಹೌದು, ಇವತ್ತು ಸಿನಿಮಾ ಬಿಝಿನೆಸ್‌ ಮಾಡುವುದು ಸುಲಭದ ಮಾತಲ್ಲ. ಸ್ಟಾರ್‌ ಗಳ ಸಿನಿಮಾಗಳೇನೋ ಆರಂಭದಲ್ಲಿ ಸೇಫ್ ಆಗಿ ಬಿಡುತ್ತವೆ. ಆದರೆ, ಹೊಸಬರ ಸಿನಿಮಾಗಳು ಆಡಿಯೋ, ಸ್ಯಾಟಲೈಟ್‌, ಓಟಿಟಿ, ವಿತರಣಾ ಹಕ್ಕು… ಹೀಗೆ ಪ್ರತಿಯೊಂದರಲ್ಲೂ ಪರದಾಡುವಂತಹ ಪರಿಸ್ಥಿತಿ ಇದೆ. ಅನೇಕರು “ಸಿನಿಮಾ ರಿಲೀಸ್‌ ಮಾಡಿ, ಚೆನ್ನಾಗಿ ಆದ್ರೆ ನೋಡೋಣ…’ ಎಂಬ “ಭರವಸೆ’ ನೀಡುತ್ತಾರೆ. ಇತ್ತ ಹೊಲ ಮಾರಿಯೋ, ಕಷ್ಟಪಟ್ಟು ಮಾಡಿದ ಸೈಟ್‌ ಅಡಮಾನವಿಟ್ಟೋ, ಬಡ್ಡಿಗೋ ದುಡ್ಡು ತಂದು ಸಿನಿಮಾ ಮಾಡಿದ ನಿರ್ಮಾಪಕ ಅರ್ಧ ಕುಗ್ಗಿ ಹೋಗಿರುತ್ತಾನೆ. ಒಮ್ಮೆ ಸಿನಿಮಾ ರಿಲೀಸ್‌ ಮಾಡಿ ಕೈ ತೊಳೆದುಕೊಳ್ಳುವ ಎಂಬ ಮನಸ್ಥಿತಿ ಬಂದಿರುತ್ತಾನೆ. ಅದೇ ಕಾರಣದಿಂದ ಸರಿಯಾದ ಪ್ಲ್ರಾನ್‌ ಇಲ್ಲದೇ ಸಿನಿಮಾ ಬಿಡುಗಡೆಯಾಗುತ್ತದೆ. ಅದಕ್ಕೆ ಪೂರಕವಾಗಿ ಕೆಲವು ವಿತರಕರು ಕೂಡಾ ಸರಿಯಾದ ಮಾರ್ಗದರ್ಶನ ನೀಡುವುದಿಲ್ಲ ಎಂಬ ಬೇಸರ ಕೂಡಾ ಸಿನಿಮಾ ಮಂದಿಯದ್ದು.

ಪ್ರಚಾರ ಅಂದ್ರೆ ಪೋಸ್ಟರ್‌!

ಸಾಮಾನ್ಯವಾಗಿ ಒಂದು ಸಿನಿಮಾದ ಪ್ರಚಾರಕ್ಕೆ ಕನಿಷ್ಠ ಒಂದು ತಿಂಗಳಾದರೂ ಬೇಕು. ಈ ಒಂದು ತಿಂಗಳಲ್ಲಿ ಇಡೀ ತಂಡ ಬೇರೆ ಬೇರೆ ರೀತಿಯ, ವಿಭಿನ್ನ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡಿದರೆ ಒಂದು ಹಂತಕ್ಕೆ ಸಿನಿಮಾದ ಹೆಸರು ಪ್ರೇಕ್ಷಕರಿಗೆ ತಿಳಿಯಬಹುದು. ಆದರೆ, ಇವತ್ತು ಅದೆಷ್ಟೋ ಸಿನಿಮಾಗಳು ಒಂದು ವಾರದ ಮುಂಚೆ ಡೇಟ್‌ ಅನೌನ್ಸ್‌ ಮಾಡಿ ಮುಂದಿನ ವಾರ ಬಿಡುಗಡೆಯೇ ಆಗಿರುತ್ತವೆ. ಹೀಗಿದ್ದಾಗ ಸಿನಿಮಾ ಜನರಿಗೆ ತಲುಪಲು ಹೇಗೆ ಸಾಧ್ಯ. ಕಾಲ ಬದಲಾಗಿದೆ, ಆಯ್ಕೆಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಪ್ರಚಾರ ಭರಾಟೆ ಕೂಡಾ ವಿಭಿನ್ನವಾಗಿರಬೇಕು.

ಆದರೆ, ಇವತ್ತಿಗೂ ಅದೆಷ್ಟೋ ಚಿತ್ರತಂಡಗಳ ಪ್ರಚಾರ ಎಂದರೆ ಟೀಸರ್‌, ಟ್ರೇಲರ್‌ ರಿಲೀಸ್‌ ಮಾಡಿ, ಒಂದಷ್ಟು ಕಡೆ ಪೋಸ್ಟರ್‌ ಅಂಟಿಸಿ ಬಿಟ್ಟರೆ ಸಾಕು ಎನ್ನುವಂತಿದೆ. ಆದರೆ, ಸಿನಿಮಾ ಮಾರುಕಟ್ಟೆ ವತ್ತು ಬೇರೆಯದ್ದೇ ರೀತಿಯ ಪ್ರಚಾರ ಬಯಸುತ್ತಿದೆ. ಯಾರ ಧ್ವನಿ ಜೋರಾಗಿ ಇರುತ್ತದೆ, ಯಾರು ಆಕರ್ಷಕವಾಗಿ “ಗ್ರಾಹಕ’ರನ್ನು ಸೆಳೆಯು ತ್ತಾರೋ, ಅವರತ್ತ ನೋಟ ಹರಿಯುತ್ತದೆ.

ಆದರೆ, ಸಮಯ ಹಾಗೂ ಆರ್ಥಿಕ ಸಮಸ್ಯೆಯಿಂದ ನಿರ್ಮಾಪಕ ಎಲ್ಲವನ್ನೂ “ಸೀಮಿತ’ಗೊಳಿಸುತ್ತಿರುವುದು ಸುಳ್ಳಲ್ಲ. ಒಂದು ವಾರ ಅಥವಾ ಒಂದು ತಿಂಗಳು ಸಿನಿಮಾ ಬಿಡುಗಡೆ ಮುಂದಕ್ಕೆ ಹೋದರೆ ಮತ್ತೆ ಅವಕಾಶವೇ ಇಲ್ಲ ಎಂದು ನಂಬಿಸುವ ಮಂದಿ ಕೂಡಾ ಇವತ್ತು ಕೆಲವು ಸಿನಿಮಾಗಳ ಸೋಲಿಗೆ ಕಾರಣವಾಗುತ್ತಿದ್ದಾರೆ.

ಸಿನಿಮಾ ಮಾತನಾಡಲು ಅವಕಾಶವೇ ಸಿಗುತ್ತಿಲ್ಲ…

ಸಿನಿಮಾ ಮಾತನಾಡಬೇಕು, ನಾವು ಮಾತನಾಡಬಾರದು ಎಂಬ ಹೇಳಿಕೆಗಳು ಪತ್ರಿಕಾಗೋಷ್ಠಿಯಲ್ಲಿ ಕೇಳಿಬರುತ್ತವೆ. ಆದರೆ, ಯಾವುದೇ ಒಂದು ಸಿನಿಮಾ ತನ್ನ ಕಂಟೆಂಟ್‌ನಿಂದ ಸುದ್ದಿಯಾಗಬೇಕಾದರೆ ಕನಿಷ್ಠ ಒಂದು ವಾರವಾದರೂ ಬೇಕು. ಜನರ ಬಾಯಿ ಮಾತಿನ ಪ್ರಚಾರವೇ ಇವತ್ತು ಪವರ್‌ಫ‌ುಲ್‌. ಆದರೆ, ಇನ್ನೇನು ಸಿನಿಮಾ ಉಸಿರಾಡುತ್ತಿದೆ ಎನ್ನುವಷ್ಟರಲ್ಲಿ ಚಿತ್ರಮಂದಿರದಿಂದ ಆ ಸಿನಿಮಾ ಮಾಯವಾಗಿರುತ್ತವೆ ಅಥವಾ ಇನ್ಯಾವುದೋ ಶೋ ಸಿಕ್ಕಿರುತ್ತದೆ. ಹೀಗಿರುವಾಗ ಸಿನಿಮಾ ಮಾತನಾಡಲು ಅವಕಾಶ ಎಲ್ಲಿದೆ? ಇದಕ್ಕೆ ಕಾರಣ ಮತ್ತದೇ ವಾರ ವಾರ ಬಿಡುಗಡೆಯಾಗುತ್ತಿರುವ ಸಾಲು ಸಾಲು ಸಿನಿಮಾಗಳು.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next