Advertisement

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

01:53 AM Jan 22, 2022 | Team Udayavani |

ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉರಿಬಿಸಿಲಿನಲ್ಲಿ ಒಣಗಿಕೊಂಡು ಪಾಠ ಕೇಳಬೇಕಾದ ದಯನೀಯ ಸ್ಥಿತಿಯ ಕುರಿತಂತೆ ಉದಯವಾಣಿ ಪ್ರಕಟಿಸಿದ ವರದಿಯನ್ನಾಧರಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪೋಷಿತ ಸದಾಸ್ಮಿತಾ ಪ್ರತಿಷ್ಠಾನವು ಹೊಸ ಕೊಠಡಿ ಒದಗಿಸಲು ಮುಂದಾಗಿದೆ.

Advertisement

“ಬಿಸಿಲಲ್ಲೇ ಪಾಠ ಕೇಳಬೇಕಿದೆ ಮಣಿಕ್ಕರ ಶಾಲೆಯ ಮಕ್ಕಳು’ ಶೀರ್ಷಿಕೆ ಯಲ್ಲಿ ಉದಯವಾಣಿ ಜ. 15ರಂದು ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು ಶಾಲೆಯನ್ನು ಸಂಪರ್ಕಿಸಿದ್ದಲ್ಲದೆ, ಪತ್ರಿಕಾ ವರದಿಯನ್ನು ಡಿ.ವಿ. ಸದಾನಂದ ಗೌಡರ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಗೌಡರು ಪ್ರತಿಷ್ಠಾನದ ಮೂಲಕ 4ರಿಂದ 5 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಿಸಲು ಮುಂದಡಿ ಇಟ್ಟಿದ್ದಾರೆ.

ಸದಾನಂದ ಗೌಡರ ನೆರವಿನಿಂದ ಕೊಠಡಿ ನಿರ್ಮಾಣಗೊಳ್ಳಲಿರುವ ಬಗ್ಗೆ ಅಶೋಕ್‌ ಕುಮಾರ್‌ ರೈ ಮಾಹಿತಿ ನೀಡಿದ್ದಾರೆ. ಶಾಲೆ ವತಿಯಿಂದ ಸರಕಾರದ ಅನುದಾನ ಅಥವಾ ಟ್ರಸ್ಟ್‌ನಿಂದ ನೆರವು ನೀಡುವಂತೆ ಮನವಿ ಮಾಡಿದ್ದೆವು.
-ವಿಶಾಲಾಕ್ಷಿ,
ಮುಖ್ಯ ಶಿಕ್ಷಕಿ, ಮಣಿಕ್ಕರ ಶಾಲೆ

ಮಣಿಕ್ಕರ ಶಾಲೆಯ ಮಕ್ಕಳು ಬಿಸಿಲಿನಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ “ಉದಯವಾಣಿ’ಯ ಮೂಲಕ ಗಮನಕ್ಕೆ ಬಂತು. ಸದಾಸ್ಮಿತಾ ಪ್ರತಿಷ್ಠಾನದ ಮೂಲಕ ಹೊಸ ಕೊಠಡಿ ನಿರ್ಮಿಸಲಿದ್ದೇವೆ. 10 ದಿನಗಳಲ್ಲಿ ರೂಪರೇಖೆ ಸಿದ್ಧಗೊಳ್ಳಲಿದೆ.
– ಡಿ.ವಿ. ಸದಾನಂದ ಗೌಡ, ಸದಾಸ್ಮಿತಾ ಪ್ರತಿಷ್ಠಾನದ ಪೋಷಕರು

Advertisement

Udayavani is now on Telegram. Click here to join our channel and stay updated with the latest news.

Next