Advertisement

ವಿಶ್ವ ಕೊಂಕಣಿ ಕೇಂದ್ರ ನಿರ್ಮಿಸಿದ ನೂತನ ವೃತ್ತ ಇಂದು ಉದ್ಘಾಟನೆ

09:30 AM Mar 29, 2018 | Karthik A |

ಮಂಗಳೂರು: ಕೀರ್ತಿಶೇಷ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರ ಹಿರಿತನದಲ್ಲಿ ನಗರದ ಪಡೀಲ್‌ ಜಂಕ್ಷನ್‌ ಅನ್ನು ಶ್ರೀನಿವಾಸ ವೃತ್ತವನ್ನಾಗಿ ಮಾರ್ಪಡಿಸಲಾಗಿದೆ. ಆಧುನಿಕ ಮಂಗಳೂರು ನಗರ ನಿರ್ಮಾತೃ ದಿ| ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತ’ದ ಉದ್ಘಾಟನೆ ಮಾ. 29ರಂದು ಸಂಜೆ 5 ಗಂಟೆಗೆ ನೆರವೇರಲಿದೆ. ನಿಟ್ಟೆ ವಿ.ವಿ. ಕುಲಾ ಧಿಪತಿ ಎನ್‌. ವಿನಯ ಹೆಗ್ಡೆ ಅವರು ಉದ್ಘಾಟಿಸುವರು. ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕ ಜೆ.ಆರ್‌. ಲೋಬೊ ಅವರು ದಿ| ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತದ ನಾಮಫಲಕ ಅನಾವರಣ ಮಾಡುವರು. ಮೇಯರ್‌ ಭಾಸ್ಕರ್‌ ಕೆ. ಅಧ್ಯಕ್ಷತೆ ವಹಿಸುವರು. ಸ್ಥಳೀಯ ಕಾರ್ಪೊರೇಟರ್‌ ಬಿ. ಪ್ರಕಾಶ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು.

Advertisement

ಉದಾರ ಹೃದಯಿ
ದಾನಶೀಲತೆ ಅವರ ಗುಣವಿಶೇಷಗಳಲ್ಲಿ ಒಂದು. ವಿದ್ಯಾರ್ಥಿಯಾಗಿದ್ದಾಗ ತನ್ನ ಪಾಲಕರಿಂದ ಪಾಕೆಟ್‌
ಮನಿಯಾಗಿ ಸಿಗುತ್ತಿದ್ದ ಎರಡು ರೂ.ಗಳ ಒಂದು ರೂಪಾಯಿಯನ್ನು ಶಾಲೆ ಬಳಿ ಇರುತ್ತಿದ್ದ ಅಂಧ ಭಿಕ್ಷುಕನಿಗೆ ನೀಡುತ್ತಿದ್ದರು. ಭಿಕ್ಷಾ ಪಾತ್ರೆಗೆ ನಾಣ್ಯ ಬಿದ್ದಾಗ ಸದ್ದಿನಿಂದ ಆತನ ಮುಖ ಅರಳುವುದನ್ನು ಕಂಡು ಸಂತೋಷಪಡುತ್ತಿದ್ದರು. ಮುಂದೆ ರಾಷ್ಟ್ರ ಮಟ್ಟದ ನಾಯಕನ ಸ್ಥಾನಕ್ಕೆ ಏರಿದಾಗಲೂ ಅವರು ತನ್ನೊಡನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದವರಲ್ಲಿ ಆರ್ಥಿಕ ಅಡಚಣೆಯಲ್ಲಿದ್ದ ಹಲವರಿಗೆ ಪ್ರತೀ ತಿಂಗಳು ತಪ್ಪದೆ ತನಗೆ ಸಿಗುತ್ತಿದ್ದ ಲೋಕಸಭಾ ಸದಸ್ಯರ ಗೌರವಧನದಿಂದ ಹಣ ಕಳುಹಿಸಿಕೊಡುತ್ತಿದ್ದರು. ಇದು ಸ್ವಾತಂತ್ರ್ಯ ಸೇನಾನಿ ದಿ| ಎಸ್‌. ಎಸ್‌. ಕಿಲ್ಲೆ ಮುಂತಾದವರು ಬರೆದಿಟ್ಟ ದಿನಚರಿಯಲ್ಲಿ ಉಲ್ಲೇಖವಾಗಿದೆ.

ಮಂಗಳೂರಿನಿಂದ ದಿಲ್ಲಿಗೆ ತಲುಪಿದ ಮಲ್ಯ ಅವರು ಮಹಾತ್ಮಾ ಗಾಂಧಿ, ಪಂ| ನೆಹರೂ, ಸುಭಾಸ್‌ಚಂದ್ರ ಬೋಸ್‌, ಚಕ್ರವರ್ತಿ ರಾಜಗೋಪಾಲಾಚಾರಿ, ರಂಗನಾಥ ದಿವಾಕರ ಮುಂತಾದವರ ಸಂಪರ್ಕಕ್ಕೆ ಬಂದರು. ಮಂಗಳೂರಿನವರೇ ಆಗಿದ್ದ ಕೊಂಕಣಿ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಲ್ಯ ಅವರಿಗೆ ತನ್ನ ವರ್ಚಸ್ಸಿನ ನೆರವನ್ನಿತ್ತರು. ಇದರಿಂದ 1946ರಲ್ಲಿ ಪ್ರಾರಂಭವಾದ ಸಂವಿಧಾನ ಸಭೆಯಲ್ಲಿ ಮಲ್ಯ ಅವರಿಗೆ ಸ್ಥಾನವೂ ಸಿಕ್ಕಿತು.

ಜಿಲ್ಲೆಗಾಗಿ ತೇಯ್ದ ಬದುಕು 1951ರಲ್ಲಿ ಪ್ರಥಮ ಚುನಾವಣೆಯ ಸಿದ್ಧತೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದ ಪ್ರಧಾನಿ ನೆಹರೂ ಅವರು ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮತ್ತು ಶ್ರೀನಿವಾಸ ಮಲ್ಯ ಅವರನ್ನು ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿಗಳನ್ನಾಗಿ ನೇಮಿಸಿದರು. ಇದು ತನ್ನ ಚಾಕಚಕ್ಯತೆ ಮತ್ತು ಚಾಣಾಕ್ಷತನಗಳನ್ನು ದೇಶದ ಮುಂದಿಡಲು ಮಲ್ಯ ಅವರಿಗೆ ಸಹಕಾರಿಯಾಯಿತು. 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಚಂಡ ಬಹುಮತದಿಂದ ಆರಿಸಿ ಬಂತು. ಸರಕಾರ ಸೇರಲು ಒಪ್ಪದ ಮಲ್ಯ ಅವರು, ಕಾಂಗ್ರೆಸ್‌ ಸಂಸದೀಯ ಪಕ್ಷದಲ್ಲಿ ಮುಖ್ಯ ಸಚೇತಕರಾಗಿ ಆಯ್ಕೆಗೊಂಡರ‌ು. ಇದು ಮಲ್ಯರಿಗೆ ತನ್ನ ಜಿಲ್ಲೆಯನ್ನು ದೇಶದ ಭೂಪಟದಲ್ಲಿ ಗುರುತಿಸಲು ಒದಗಿದ ಸುವರ್ಣಾವಕಾಶ. 

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿದ್ದಾಗ ಕಾರ್ನಾಡು ಸದಾಶಿವ ರಾಯರ ಹಾಗೂ ಸಹ ಕಾರ್ಯಕರ್ತರ ಜತೆಗೂಡಿ ಪಕ್ಷದ ಬೆಳವಣಿಗೆಗಾಗಿ ಓಡಾಡಿದ್ದರು. ಮಂಗಳೂರು ಆಕಾಶವಾಣಿ, ಮಂಗಳೂರು ವಿಮಾನ ನಿಲ್ದಾಣ, ರೈಲು ಸಂಪರ್ಕ, ಸುರತ್ಕಲ್‌ನಲ್ಲಿ ಈಗ ಎನ್‌ಐಟಿಕೆ ಆಗಿರುವ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್‌ ಕಾಲೇಜು, ನವ ಮಂಗಳೂರು ಬಂದರು ಸೇರಿದಂತೆ ಪ್ರಮುಖ ಉದ್ದಿಮೆ – ಸಂಸ್ಥೆಗಳು ಹಾಗೂ ಸಾರ್ವಜನಿಕ ಸೇವೆಗಳನ್ನು ಮಂಗಳೂರಿಗೆ ತರುವಲ್ಲಿ ಶ್ರೀನಿವಾಸ ಮಲ್ಯ ಅವರ ದೂರದೃಷ್ಟಿ ಮತ್ತು ಆ ನಿಟ್ಟಿನಲ್ಲಿ ಅವರು ವಹಿಸಿದ್ದ ಶ್ರಮ ಶ್ಲಾಘನೀಯ. ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಕೆಲವೇ ರಾಜ್ಯಗಳ ರಾಜಧಾನಿಗಳಲ್ಲಿ ಮಾತ್ರ ಆಕಾಶವಾಣಿ ಕೇಂದ್ರಗಳಿದ್ದವು. ಆದರೆ ಮಂಗಳೂರಿನಲ್ಲಿ ಮಲ್ಯ ಅವರ ಯೋಜನೆಯಂತೆ ಪ್ರತ್ಯೇಕ ಆಕಾಶವಾಣಿ ನಿಲಯ ಪ್ರಾರಂಭವಾಯಿತು. ದೇಶದಲ್ಲಿ ಬೆರಳೆಣಿಕೆಯಷ್ಟು ವಿಮಾನ ನಿಲ್ದಾಣಗಳಿದ್ದ ಆ ಕಾಲದಲ್ಲಿಯೇ ಮಲ್ಯ ಅವರ ಆಶಯದಂತೆ ಮಂಗಳೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೊಂಡಿತು.

Advertisement

1960ರಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ಕೇಂದ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ದೇಶದಲ್ಲಿ ಉನ್ನತ ತಾಂತ್ರಿಕ ಶಿಕ್ಷಣ ನೀಡುವುದಕ್ಕಾಗಿ ನಾಲ್ಕು ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ (ರೀಜನಲ್‌) ಎಂಜಿನಿಯರಿಂಗ್‌ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆಗ ಮಲ್ಯರು ತನ್ನ ಆಪ್ತರಾದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಳಿ ತೆರಳಿ ಒಂದು ಆರ್‌ಇಸಿಯನ್ನು ಮಂಗಳೂರಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದರು. ಅದರಂತೆ ಸುರತ್ಕಲ್‌ನಲ್ಲಿ ಕೆಆರ್‌ಇಸಿ ಕಟ್ಟಡ ನಿರ್ಮಾಣಗೊಂಡು ಶಾಸ್ತ್ರಿ ಅವರಿಂದಲೇ ಉದ್ಘಾಟನೆಗೊಂಡಿತು.

ನಿಸ್ವಾರ್ಥ ಸೇವೆ
ಮಲ್ಯ ಅವರು ತಮ್ಮ ಜೀವಿತ ಕಾಲದಲ್ಲಿ ತನಗಾಗಿ ಅಥವಾ ಕುಟುಂಬದವರಿಗಾಗಲೀ ಆಸ್ತಿ, ಪಾಸ್ತಿಗಳನ್ನು ಮಾಡಿಟ್ಟವರಲ್ಲ. ತಾನು ಸಾಯುವಾಗ ತನ್ನ ಮಡದಿ, ಬಂಟ್ವಾಳ ಮೂಲದ ಇಂದಿರಾ ಮಲ್ಯ ಅವರಿಗಾಗಿ ಒಂದು ಮನೆಯನ್ನೂ ಮಾಡಿಟ್ಟವರಲ್ಲ. ಕೆನರಾ ಬ್ಯಾಂಕ್‌, ಸಿಪಿಸಿ ಮುಂತಾದ ಕಂಪೆನಿಗಳಲ್ಲಿ ಅವರ ಶೇರುಗಳು ಇದ್ದವು ಅಷ್ಟೇ. ಇದರ ಹೊರತಾಗಿ ಹರಿಪದವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಸರಕಾರದಿಂದ ಸಿಕ್ಕಿದ 10 ಎಕರೆ ಜಾಗ- ಇದಿಷ್ಟು ಅವರ ಆಸ್ತಿ.

1965ರ ಡಿ. 19ರಂದು ದಿಲ್ಲಿಯಿಂದ ಬೆಂಗಳೂರಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ಹೊರಟ ಮಲ್ಯರಿಗೆ ಹಾದಿಯಲ್ಲಿಯೇ ಹೃದಯಾಘಾತವಾಯಿತು, ಅವರು ಇಹವನ್ನು ತ್ಯಜಿಸಿದರು. ಅವರ ಅತ್ಯಂತ ಆಪ್ತಮಿತ್ರ ಮತ್ತು ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಅವರು ಮಲ್ಯ ಅವರ ಪಾರ್ಥಿವ ಶರೀರವನ್ನು ತನ್ನ ವಿಶೇಷ ವಿಮಾನದಲ್ಲಿ ಮಲ್ಯರೇ ಕಾರಣರಾಗಿ ನಿರ್ಮಾಣಗೊಂಡಿದ್ದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟರು. ಮರುದಿನ ಜಿಲ್ಲೆಯಾದ್ಯಂತ ನೂತನ ದಕ್ಷಿಣ ಕನ್ನಡ ನಿರ್ಮಾತೃವಿನ ಗೌರವಾರ್ಥ ಹರತಾಳ ಆಚರಿಸಲಾಗಿತ್ತು.

ಯು. ಶ್ರೀನಿವಾಸ ಮಲ್ಯ: ಸಾಧಕ ಸಾರ್ಥಕ ವ್ಯಕ್ತಿತ್ವ 
ಆಧುನಿಕ ಮಂಗಳೂರು/ ದ.ಕ. ಜಿಲ್ಲೆಯ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಹುಟ್ಟಿದ್ದು 1902ರಲ್ಲಿ. ಮಂಗಳೂರಿನ ನಾಮಾಂಕಿತ ‘ಉಳ್ಳಾಲ ಮಲ್ಯ’ ವ್ಯಾಪಾರಸ್ಥರ ಕುಟುಂಬದಲ್ಲಿ ಅವರ ಜನನವಾಯಿತು. 1920ರಲ್ಲಿ ಮಂಗಳೂರಿಗೆ ಕಾರ್ನಾಡು ಸದಾಶಿವ ರಾಯರ ಆಹ್ವಾನದ ಮೇರೆಗೆ ಬಂದ ಮಹಾತ್ಮಾ ಗಾಂ ಧಿ ಅವರ ಭಾಷಣದಿಂದ ಪ್ರಭಾವಿತರಾಗಿ ಹದಿಹರೆಯದಲ್ಲೇ ಮನೆತನದ ಶ್ರೀಮಂತಿಕೆ, ವಿದ್ಯಾಭ್ಯಾಸ, ಕಾಲೇಜು ಶಿಕ್ಷಣಕ್ಕೆ ತಿಲಾಂಜಲಿಯನ್ನಿತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಲು ಅಣಿಯಾದವರು. ತರುಣ ಶ್ರೀನಿವಾಸ ಮಲ್ಯ ದೇಶದ ಮತ್ತು ಸಮಾಜ ಸೇವೆಗಳಿಗೆ ತನ್ನನ್ನು ಅರ್ಪಿಸಿಕೊಂಡು ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಖಾದಿ ಪ್ರಚಾರ, ಹರಿಜನರಿಗೆ ದೇಗುಲ ಪ್ರವೇಶದಂತಹ ರಚನಾತ್ಮಕ ಕಾರ್ಯಗಳಲ್ಲಿ ಭಾಗಿಯಾಗುವ ನಿರ್ಧಾರಕ್ಕೆ ಬಂದರು. ಮಂಗಳೂರು ರಥಬೀದಿಯಲ್ಲಿ ಖಾದಿ ಭಂಡಾರ ಪ್ರಾರಂಭಿಸುವಂತೆ ಹಾಗೂ ಗುರುಪುರ ಮುಕುಂದ ಪ್ರಭು ಅವರನ್ನು ಅದರ ಮುಖ್ಯಸ್ಥರಾಗಲು ಒಪ್ಪಿಸಿದವರು. ಬ್ರಿಟಿಷರಿಂದ “ಇಪ್ಪತ್ತನೇ ಶತಮಾನದ ನರಿ’ (ಟ್ವೆಂಟಿಯತ್‌ ಸೆಂಚುರಿ ಫಾಕ್ಸ್‌) ಎಂದು ಕರೆಯಲ್ಪಡುತ್ತಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಅವರೇ ತನ್ನ ವೈಯಕ್ತಿಕ ಮತ್ತು ರಾಜಕೀಯ ಬದುಕಿನಲ್ಲಿ ಮಲ್ಯ ಅವರು ಉರುಳಿಸುತ್ತಿದ್ದ ದಾಳಗಳನ್ನು ಗಮನಿಸಿ ಅವರನ್ನು ‘ಮೋಸ್ಟ್‌ ಡೇಂಜರಸ್‌ ಮ್ಯಾನ್‌’ ಎಂದು ಸಂಬೋಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next