Advertisement

State ಮಾನವ ಹಕ್ಕು ಆಯೋಗ: ನ್ಯಾ| ಎಲ್‌. ನಾರಾಯಣ ಸ್ವಾಮಿ ಅಧ್ಯಕ್ಷ

07:55 PM Nov 27, 2023 | Team Udayavani |

ಬೆಂಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೂತನ ಸಾರಥಿ ಸಿಕ್ಕಿದ್ದು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Advertisement

ಇದರ ಜೊತೆಗೆಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್‌.ಕೆ. ವಂಟಿಗೋಡಿ ಅವರನ್ನು ಆಯೋಗದ ನ್ಯಾಯಾಂಗ ಸದಸ್ಯರನ್ನಾಗಿ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಟಿ.ಶ್ಯಾಂ ಭಟ್‌ ಅವರನ್ನು ಆಡಳಿತಾತ್ಮಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಳೆದ 10 ತಿಂಗಳಿಂದ ಆಯೋಗ ಖಾಲಿ ಇತ್ತು. ಈ ವರ್ಷ ಫೆಬ್ರವರಿಯಲ್ಲಿ ಹಿಂದಿನ ಆಯೋಗದಲ್ಲಿ ಸದಸ್ಯರಾಗಿದ್ದ ಕೆ.ಬಿ. ಚಂಗಪ್ಪ, ಆರ್‌.ಕೆ. ದತ್ತಾ ನಿವೃತ್ತರಾಗಿದ್ದರು, ಅದೇ ರೀತಿ ಮಾರ್ಚ್‌ನಲ್ಲಿ ಅಧ್ಯಕ್ಷರಾಗಿದ್ದ ನ್ಯಾ.ಡಿ.ಎಚ್‌.ವಘೇಲಾ ಅವರ ಅವಧಿ ಮುಗಿದಿತ್ತು.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯೋಗಕ್ಕೆ ಹೊಸ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ನಂತರ ಪ್ರತಿಪಕ್ಷ ನಾಯಕನ ಆಯ್ಕೆ ಆಗದ ಕಾರಣಕ್ಕೆ ನೇಮಕಾತಿ ಇನ್ನಷ್ಟು ವಿಳಂಬವಾಗಿತ್ತು.ಇದೀಗ ಪೂರ್ಣ ಪ್ರಮಾಣದ ಆಯೋಗ ರಚನೆ ಆದಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರಾದ ನ್ಯಾಯಮೂರ್ತಿ ಲಿಂಗಪ್ಪ ನಾರಾಯಣಸ್ವಾಮಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿದರು.

Advertisement

2009ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಸುದೀರ್ಘ‌ 10 ವರ್ಷಗಳ ಕಾಲ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಇವರು 2019ರ ಜ.17ರಿಂದ ಮೇ 9ರವರೆಗೆ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯಭಾರ ನಿರ್ವಹಿಸಿದರು.

ಬಳಿಕ 2019ರ ಅ.6ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, 2021ರ ಜೂನ್‌ ತಿಂಗಳಲ್ಲಿ ನಿವೃತ್ತಿ ಹೊಂದಿದರು. ಇದೀಗ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.

ಸದಸ್ಯರಾಗಿ ನೇಮಕಗೊಂಡಿರುವ ಎಸ್‌.ಕೆ. ವಂಟಿಗೋಡಿ ಅವರು ಮೈಸೂರು ಜಿಲ್ಲಾ ನ್ಯಾಯಾಧೀಶರಾಗಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನೊಬ್ಬ ಸದಸ್ಯ ನಿವೃತ್ತ ಐಎಎಸ್‌ ಅಧಿಕಾರಿ ಡಾ. ಟಿ. ಶ್ಯಾಂ ಭಟ್‌ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next