Advertisement

ಮೇಲ್ಮನೆಗೆ ಹೊಸ ಕ್ಯಾಂಟೀನ್‌, ಡಿಸ್ಪೆನ್ಸರಿ, ಸಭಾ ಕೊಠಡಿ

07:05 AM Feb 06, 2018 | |

ಬೆಂಗಳೂರು:ವಿಧಾನ ಪರಿಷತ್‌ ಮೊಗಸಾಲೆಗೆ ಹೊಂದಿಕೊಂಡಂತಿದ್ದ ಕ್ಯಾಂಟೀನ್‌ ಜಾಗದಲ್ಲಿ ಡಿಸ್ಪೆನ್ಸರಿ ಆರಂಭವಾಗಿದೆ.

Advertisement

ವಿಧಾನಸೌಧದಲ್ಲಿ ಡಿಸ್ಪೆನ್ಸರಿ ಸೇವೆಯಿದ್ದರೂ ಅದು ಪರಿಷತ್‌ ಸಭಾಂಗಣದಿಂದ ತುಸು ದೂರದಲ್ಲಿದೆ. ಹೀಗಾಗಿ, ಸದಸ್ಯರ ಆರೋಗ್ಯದಲ್ಲಿ ಏರುಪೇರು ಉಂಟಾದರೆ ತುರ್ತು ಚಿಕಿತ್ಸೆಗೆ ತುಸು ತೊಂದರೆಯಾಗುತ್ತಿತ್ತು. ಈ ಹಿಂದೆ ಸದಸ್ಯರಾಗಿದ್ದ ವಿಮಲಾಗೌಡ ಅವರು ಅಸ್ವಸ್ಥಗೊಂಡಾಗ ಹೊರಗಿನಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ಸಭಾಂಗಣದ ಸಮೀಪದಲ್ಲೇ ಡಿಸ್ಪೆನ್ಸರಿ ಆರಂಭವಾಗಿರುವುದಕ್ಕೆ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಡಿಸ್ಪೆನ್ಸರಿಯಲ್ಲಿ ತಲಾ ಒಬ್ಬ ಪುರುಷ, ಮಹಿಳಾ ವೈದ್ಯರು, ನಾಲ್ವರು ಶುಶ್ರೂಷಕಿಯರು, ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ರಕ್ತದೊತ್ತಡ, ಮಧುಮೇಹ ತಪಾಸಣೆ, ಪ್ರಥಮ ಚಿಕಿತ್ಸೆ ಜತೆಗೆ ಸಾಮಾನ್ಯ ಸಮಸ್ಯೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ.

ತುರ್ತು ಸಂದರ್ಭದಲ್ಲಿ ಸದಸ್ಯರಿಗೆ ತ್ವರಿತ ಚಿಕಿತ್ಸೆಗೆ ಅನುಕೂಲವಾಗುವಂತೆ ಡಿಸ್ಪೆನ್ಸರಿಯನ್ನು ಸಭಾಂಗಣದ ಸಮೀಪದಲ್ಲೇ ತೆರೆಯಲಾಗಿದೆ ಎಂದು ಪರಿಷತ್‌ ಕಾರ್ಯದರ್ಶಿ ಕೆ.ಆರ್‌.ಮಹಾಲಕ್ಷ್ಮೀ ತಿಳಿಸಿದ್ದಾರೆ. 

ನೂತನ ಸಭಾ ಕೊಠಡಿ
ಬಹು ದಿನಗಳ ಬೇಡಿಕೆಯಂತೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಿಗೆ ಪರಿಷತ್‌ ಸಭಾಂಗಣಕ್ಕೆ ಹೊಂದಿಕೊಂಡಂತೆ ಸಭಾ ಕೊಠಡಿ ರೂಪುಗೊಂಡಿದೆ. ಸಭಾಂಗಣದಿಂದ ಪ್ರತಿಪಕ್ಷ ನಾಯಕರ ಕಚೇರಿ ದೂರವಿರುವುದರಿಂದ ಕಲಾಪ ಸಂದರ್ಭದಲ್ಲಿ ತುರ್ತು ಸಭೆ, ಸುದ್ದಿಗೋಷ್ಠಿ ನಡೆಸಲು ತೊಂದರೆಯಾಗುತ್ತಿದ್ದ ಕಾರಣ ಸಭಾಂಗಣದ ಸಮೀಪದಲ್ಲೇ ಕೊಠಡಿ ನಿರ್ಮಿಸಿಕೊಡಲಾಗಿದೆ. ಸೋಮವಾರ ವಿಶೇಷ ಪೂಜೆ, ಪುನಸ್ಕಾರ ನೆರವೇರಿದ ಬಳಿಕ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಕಚೇರಿ ಪ್ರವೇಶಿಸಿದರು.

ಹೊಸ ಕ್ಯಾಂಟೀನ್‌
ಪರಿಷತ್‌ ಸಭಾಂಗಣದ ಬಳಿಯ ಕ್ಯಾಂಟೀನ್‌ ಜಾಗದಲ್ಲಿ ಡಿಸ್ಪೆನ್ಸರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೊದಲ ಮಹಡಿಯಲ್ಲಿ ಶೌಚಾಲಯವಿದ್ದ ಜಾಗದಲ್ಲಿ ಕ್ಯಾಂಟೀನ್‌ ಆರಂಭಿಸಲಾಗಿದೆ. ಝಗಮಗಿಸುವ ವಿದ್ಯುತ್‌ ದೀಪಗಳು, ಹೊಸ ಟೇಬಲ್‌- ಕುರ್ಚಿ, ಆಕರ್ಷಕ ಒಳವಿನ್ಯಾಸದೊಂದಿಗೆ ಕ್ಯಾಂಟೀನ್‌ ಕಂಗೊಳಿಸುತ್ತಿದೆ. ಶೌಚಾಲಯವಿದ್ದ ಜಾಗವನ್ನು ಕ್ಯಾಂಟೀನ್‌ ಆಗಿ ಪರಿವರ್ತಿಸಿರುವುದಕ್ಕೆ ಕೆಲವರು ಅಪಸ್ವರ ವ್ಯಕ್ತಪಡಿಸಿದ್ದಾರೆ. ಜತೆಗೆ ಸಭಾಂಗಣಕ್ಕೆ ದೂರದಲ್ಲಿರುವುದರಿಂದ ಯಾರು ಬೇಕಾದರೂ ಕ್ಯಾಂಟೀನ್‌ ಬಳಸುವಂತಾಗಿದ್ದು, ಸದಸ್ಯರ ಖಾಸಗಿತನಕ್ಕೆ ಚ್ಯುತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next