Advertisement

ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರ ನಿಮ್ಮದಾಗಿರಲಿ

07:32 AM Jan 07, 2019 | |

ಹೊಸ ವರ್ಷಕ್ಕೆ ಹೊಸ ನಿರೀಕ್ಷೆಗಳಿರುವುದು ಸಹಜ. ನಮ್ಮ ವಾರ್ಷಿಕ ಬಜೆಟ್‌ ಕೂಡ ಇದಕ್ಕೆ ಹೊಂದಾಣಿಕೆಯಾಗಬೇಕು. ಗತಿಸಿ ಹೋದ ವರ್ಷದ ನಷ್ಟಗಳನ್ನು ಅಂದಾಜಿಸಿ ಅವುಗಳು ಪುನರಾವರ್ತನೆಯಾಗದಂತೆ ಸ್ಪಷ್ಟ ಯೋಜನೆ ರೂಪುಗೊಳಿಸುವುದು ಅತೀ ಅಗತ್ಯ.

Advertisement

ಹೊಸ ವರ್ಷದ ಸಡಗರ ಇನ್ನೂ ಕಮ್ಮಿ ಆಗಿಲ್ಲ. 2018ರ ಖುಷಿಯ ಕ್ಷಣಗಳನ್ನು ಮನದಲ್ಲಿಟ್ಟು, ಕಹಿ ಘಟನೆಗಳನ್ನು ಮರೆತು ಹೊಸ ನಿರೀಕ್ಷೆಯೊಂದಿಗೆ 2019ಕ್ಕೆ ಸಾಗುವ ಸಮಯವಿದು. ಈ ವರ್ಷ ಉತ್ತಮ ದಿನಗಳು ಎದುರಾಗಲಿ ಎಂಬ ಕಳಕಳಿಯಿಂದ ಪ್ರತೀ ಮನಸು ತವಕಿಸುತ್ತಿದೆ. ಆರ್ಥಿಕ ಚಟುವಟಿಕೆಗಳು ಈ ವರ್ಷವಾದರೂ ಸ್ವಲ್ಪ ನೆಟ್ಟಗಾಗಲಿ ಎಂಬ ಕೋರಿಕೆಯೊಂದಿಗೆ ಕೆಲವರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ವರ್ಷ ಪ್ರಾರಂಭದಲ್ಲಿಯೇ ಮುಂದಿನ ವರ್ಷದ ಆರ್ಥಿಕ ಲೆಕ್ಕಾಚಾರದ ಬಗ್ಗೆ ಲೆಕ್ಕ ಹಾಕಿಕೊಂಡು ಹಣ ಹೊಂದಿಸುವುದು ಸುಲಭ. ಈ ವರ್ಷ ವಾಹನ ಖರೀದಿ ಬಗ್ಗೆ, ಮನೆ ನಿರ್ಮಾಣ, ಮದುವೆ ಸೇರಿದಂತೆ ಶುಭ ಸಮಾರಂಭ ನಡೆಯುವ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಲೆಕ್ಕಾಚಾರ ತಯಾರಿಸಿದರೆ ಈ ವರ್ಷ ಆರಾಮವಾಗಿ ಕಳೆಯಲು ಅವಕಾಶ ಸಿಗಬಹುದು.

ಅಲ್ಪಾವಧಿಗಾಗಿ ಹೂಡಿಕೆ
ವರ್ಷದ ಅನಂತರ ಕುಟುಂಬದೊಂದಿಗೆ ಭಾರತ ದೇಶ ಪ್ರವಾಸ ಅಥವಾ ವಿದೇಶ ಸಂಚಾರ. ಮೂರು ವರ್ಷಗಳ ಅನಂತರ ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವುದು. ಎರಡು ವರ್ಷಗಳ ಅನಂತರ ಹೊಸ ವಾಹನ ಖರೀದಿಸುವುದು. ಕೆಲ ವರ್ಷಗಳಲ್ಲಿ ಮನೆಯ ನವೀಕರಣ. ಇನ್ನಿತರ ಯಾವುದೇ ಅಲ್ಪಾವಧಿಯ ಯೋಜನೆ. ಅಲ್ಪಾವಧಿ ಹೂಡಿಕೆಯ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುವ ಸಾಧ್ಯತೆ ಇರುತ್ತದೆ. ಆದರೂ ಮೂರು ವರ್ಷದೊಳಗಿನ ಹೂಡಿಕೆ ಯೋಜನೆಗಳನ್ನು ಅಲ್ಪಾವಧಿ ಹೂಡಿಕೆ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಆಟೋ ಸ್ವೀಪ್‌ ಅಕೌಂಟ್
ಸಾಮಾನ್ಯ ಉಳಿತಾಯ ಖಾತೆ ಬಿಟ್ಟರೆ ಹಣ ಹೂಡಿಕೆ ಮಾಡಲು ಆಟೋ ಸ್ವೀಪ್‌ ಉಳಿತಾಯ ಬ್ಯಾಂಕ್‌ ಖಾತೆ ಅತಿ ಸುರಕ್ಷಿತವಾಗಿದೆ. ನಿಮ್ಮ ಅಕೌಂಟಿನಲ್ಲಿರುವ ಹೆಚ್ಚುವರಿ ಹಣಕ್ಕೆ ಹೆಚ್ಚಿನ ದರದ ಬಡ್ಡಿಯನ್ನು ಈ ಅಕೌಂಟಿನಿಂದ ಪಡೆಯಬಹುದು. ಸುಮಾರು ಶೇ.9 ರವರೆಗೂ ಬಡ್ಡಿಯನ್ನು ಸ್ವೀಪ್‌ ಅಕೌಂಟ್ನಿಂದ ಲಭಿಸುವ ಸಾಧ್ಯತೆ ಇದೆ.

Advertisement

ಆರ್‌ಡಿ ಯೋಜನೆ
ಸುರಕ್ಷಿತ ಹಾಗೂ ವಿಶ್ವಾಸಾರ್ಹ ಹೂಡಿಕೆ ಯೋಜನೆಯ ಹುಡುಕಾಟದಲ್ಲಿರುವವರಿಗೆ ಮರುಕಳಿಸುವ ಠೇವಣಿ ಯೋಜನೆ ಉತ್ತಮ. ರಿಕರಿಂಗ್‌ ಡಿಪಾಸಿಟ್ ಅಥವಾ ಆರ್‌ಡಿ ಎಂದು ಜನಪ್ರಿಯವಾಗಿರುವ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣ ಉಳಿತಾಯ ಮಾಡುತ್ತ ಹೋಗುವಿರಿ. 6 ತಿಂಗಳಿಂದ 10 ವರ್ಷದ ಅವಧಿಯವರೆಗೆ ಹಣ ಹೂಡಿಕೆ ಮಾಡುತ್ತ ಹೋಗಬಹುದು. ಯಾವುದೇ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ಆರ್‌ಡಿ ಖಾತೆ ಆರಂಭಿಸಬಹುದು. ಆರ್‌ಡಿ ಮೇಲೆ ಸಿಗುವ ಬಡ್ಡಿಗೆ ತೆರಿಗೆ ಕಟ್ಟಬೇಕು.

ಕಾರ್ಯಯೋಜನೆ ರೂಪಿಸಿ
ಯಾವ ಸಮಯದಲ್ಲಿ ಯಾವ ಹೆಜ್ಜೆ ಇಡಬೇಕು? ಹಾಗೂ ಅದಕ್ಕೆ ಹಣದ ಮೂಲ ಎಲ್ಲಿಂದ? ಅದರ ನಿಭಾವಣೆ ಹೇಗೆ? ಈ ಎಲ್ಲ ಸಂಗತಿಗಳನ್ನು ಮೊದಲೇ ಲೆಕ್ಕ ಹಾಕಿದರೆ ಸುಲಭ. ಇದು ವರ್ಷದ ಲೆಕ್ಕವಾದರೆ, ತಿಂಗಳಿಗೊಂದು ಇಂತಹ ಪ್ಲ್ಯಾನ್‌ಗಳು ರೆಡಿ ಮಾಡಿದರೆ ಮತ್ತಷ್ಟು ಸುಲಭ. ಒಂದು ತಿಂಗಳಿನಲ್ಲಿ ಮಾಡಬೇಕಾದ ಕೆಲಸ ಏನು ಹಾಗೂ ಇದಕ್ಕೆ ಮಾಡಬೇಕಾದ ಕಾರ್ಯವೇನು ಎಂಬ ಯೋಜನೆ ತಯಾರಿಸಿದರೆ ಎಲ್ಲವೂ ಸಾಂಗವಾಗಿ ನಡೆಯಲಿದೆ.

ಕಡಿಮೆ ಅವಧಿಯ ನಿಶ್ಚಿತ ಠೇವಣಿ
ಎಫ್ ಡಿ ಎಂದು ಕರೆಯಲಾಗುವ ನಿಶ್ಚಿತ ಅವಧಿಯ ಠೇವಣಿ ಯೋಜನೆಗಳು ಭಾರತೀಯರಿಗೆ ಅಚ್ಚುಮೆಚ್ಚು. ಈ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಹಣ ಹೂಡಿಕೆಯ ಕಾಲಾವಧಿಯ ಅನುಸಾರ ಶೇ. 6 ರಿಂದ 9 ರವರೆಗೆ ಬಡ್ಡಿ ಗಳಿಸಬಹುದು. ದೇಶದ ಯಾವುದೇ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ ಶಾಖೆಗಳಲ್ಲಿ ಎಫ್ಡಿ ಖಾತೆ ತೆರೆಯಬಹುದು. ಈ ನಿಶ್ಚಿತ ಠೇವಣಿಗೆ ಸಿಗುವ ಬಡ್ಡಿಯ ಮೇಲೆ ಸರಕಾರಕ್ಕೆ ತೆರಿಗೆ ನೀಡಬೇಕಾಗುತ್ತದೆ.

ಸ್ಪಷ್ಟ ಲೆಕ್ಕಾಚಾರ ಇರಲಿ
ಹಣ ಉಳಿತಾಯ ಮಾಡಲು ಅನುಸರಿಸಬೇಕಾದ ಮೊದಲ ಮಾರ್ಗ ಯೋಜನೆ ರೂಪಿಸುವುದು. ಪ್ರತೀನಿತ್ಯ, ವಾರ, ತಿಂಗಳಿಗೆ ಅನುಸಾರವಾಗಿ ಖರ್ಚು ವೆಚ್ಚದ ಲೆಕ್ಕ ಮೊದಲೇ ತಯಾರಿಸಬೇಕು. ದಿನಸಿ ಹಾಗೂ ಇತರ ಸಾಮಗ್ರಿಗಳಿಗೆ ಎಷ್ಟು ಖರ್ಚು ಮಾಡಬೇಕು? ಎಂಬ ಸಹಜ ಲೆಕ್ಕಾಚಾರ ಕೂಡ ನಮ್ಮಲ್ಲಿದ್ದರೆ ಬಜೆಟ್‌ ವ್ಯವಸ್ಥೆಯನ್ನು ನಿಭಾಯಿಸಬಹುದು. ಇದಕ್ಕಾಗಿ ಪ್ರತೀ ದಿನ ಬಜೆಟ್‌ ಪ್ಲ್ಯಾನ್‌ ರೆಡಿ ಮಾಡುವುದು ಬೆಸ್ಟ್‌. ಕಾಗದದಲ್ಲಿ, ಮನಿ ಪಾಕೆಟ್‌ನಲ್ಲಿ ಅಥವಾ ಮೊಬೈಲ್‌ ಗೂಗಲ್‌ ಡಾಕ್ಸ್‌ನಲ್ಲಿ ದೈನಂದಿನ ಯೋಜನೆಯ ಬಗ್ಗೆ ಪಟ್ಟಿ ಮಾಡಿಟ್ಟರೆ ಉತ್ತಮ. ಇನ್ನು ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಇನ್ನೂ ಹಲವು ರೀತಿಯ ಯೋಜನೆಯನ್ನು ಈ ವರ್ಷ ದಲ್ಲಿ ಕೈಗೊಳ್ಳಬಹುದು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next