Advertisement

ಬಿ.ಸಿ.ರೋಡಿಗೆ ಹೊಸ ಬಸ್‌ ನಿಲ್ದಾಣ, ವಾಣಿಜ್ಯ ಸಂಕೀರ್ಣ

12:18 PM Mar 15, 2018 | Team Udayavani |

ಬಂಟ್ವಾಳ: ಆಧುನಿಕ ಬಿ.ಸಿ. ರೋಡಿನಲ್ಲಿ ಜನಸಾಮಾನ್ಯರಿಗೆ ತನ್ನೊಡಲ ಸೇವೆ ಸಲ್ಲಿಸುತ್ತಲೇ ವಾರ್ಧಕ್ಯ ತಲುಪಿದ ಜೋಡುಮಾರ್ಗ ತಾಲೂಕು ಬೋರ್ಡ್‌ ನಾಮಾಂಕಿತ ಕಟ್ಟಡ ಧರೆಗುರುಳಿದೆ. ಎರಡು ದಶಕಗಳ ಹಿಂದಿನ ಬೇಡಿಕೆ, ಕನಸು ಅನುಷ್ಠಾನಕ್ಕೆ ಸಿದ್ಧವಾಗಿದ್ದು, 20 ಕೋಟಿ ರೂ. ವೆಚ್ಚದಲ್ಲಿ ನೂತನ ಬಸ್‌ ನಿಲ್ದಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ.

Advertisement

ಸುಮಾರು 94 ವರ್ಷಗಳ ಹಿಂದೆ ಪ್ರಸ್ತುತ ಇರುವ ಶ್ರೀ ರಕ್ತೇಶ್ವರೀ ದೇವಸ್ಥಾನದ ಎದುರಿಗೆ ಬಂಟ್ವಾಳ ಮತ್ತು ಪಾಣೆಮಂಗಳೂರು ನಗರ ಸಂಪರ್ಕಿಸುವ ರಸ್ತೆ ವಿಭಾಗವಾಗುತ್ತಿತ್ತು. ಈ ಸ್ಥಳಕ್ಕೆ ಜೋಡುಮಾರ್ಗ ಎಂದು ಜನರು ಕರೆಯುತ್ತಿದ್ದರು. ಈ ಸ್ಥಳದಲ್ಲಿ ಹಳೆಯ ತಾಲೂಕು ಬೋರ್ಡ್‌ ಕಟ್ಟಡ ಖಾಸಗಿ ನೆಲೆಯಲ್ಲಿ ನಿರ್ಮಾಣವಾಗಿತ್ತು. ಬಳಿಕ ಅದನ್ನು ಸರಕಾರದ ಕಚೇರಿಗಳ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು.

ಐತಿಹಾಸಿಕ ಕಟ್ಟಡ
ಅಂದಿನ ತಾಲೂಕು ಬೋರ್ಡ್‌ ಕಟ್ಟಡಕ್ಕೆ ಆಗಿನ ಸಿಎಂ ಎಸ್‌. ನಿಜ ಲಿಂಗಪ್ಪ 1962ರ ಅ. 13ರಂದು ಶಂಕು ಸ್ಥಾಪನೆ ಮಾಡಿದ್ದರು. ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದ ಕೆ.ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ 1964ರ ಮೇ 19ರಂದು ನೂತನ ಕಟ್ಟಡವನ್ನು ಸಂಸದೀಯ ಕಾರ್ಯದರ್ಶಿ ದೊಡ್ಡತಮ್ಮಯ್ಯ ಉದ್ಘಾಟಿಸಿದ್ದರು.

ಬಂಟ್ವಾಳ ತಾ| ಅಭಿವೃದ್ಧಿ ಮಂಡಳಿ ಸುಪರ್ದಿ ಯಲ್ಲಿ ಬಿ.ಸಿ. ರೋಡ್‌ನ‌ ಮಹಾತ್ಮ ಗಾಂಧಿ ಜನ್ಮಶತಾಬ್ದ ಭವನ ಕಟ್ಟಡಕ್ಕೆ 1970ರಲ್ಲಿ ಆಹಾರ ಸಚಿವ ವಿಟ್ಠಲದಾಸ ಶೆಟ್ಟಿ ಶಿಲಾನ್ಯಾಸ ಮಾಡಿದ್ದರು. ಆಗಿನ ಎಂಎಲ್‌ಎ ಕೆ. ಲೀಲಾವತಿ ರೈ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಸರಕಾರದ ಸಹಕಾರ ಸಚಿವ ಎ. ಶಂಕರ ಆಳ್ವ 1978ರ ಜೂ. 11ರಂದು ಕಟ್ಟಡ ಉದ್ಘಾಟಿಸಿದ್ದರು. ಶಾಸಕ ಬಿ.ವಿ. ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು.

ಒಂದು ಕಾಲದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದರೆ ಭೇಟಿ ನೀಡುತ್ತಿದ್ದ, ಜಿಲ್ಲಾಧಿಕಾರಿ, ಸಚಿವರು, ಸಂಸದರು ಇತ್ತೀಚಿನವರೆಗೂ ಮೊಕ್ಕಾಂ ಹೂಡುತ್ತಿದ್ದ ಶತಮಾನದ ಅಂಚಿನ ಕಟ್ಟಡವನ್ನು ಈಗ ಕೆಡವಲಾಗಿದೆ.

Advertisement

ಇತಿಹಾಸ ಸೇರಿದ ಸ್ಮಾರಕ ಭವನ
ಹಳೆಯ ತಾಲೂಕು ಬೋರ್ಡ್‌ ಕಟ್ಟಡದಲ್ಲಿ ಮಹಾತ್ಮ ಗಾಂಧಿ ಜನ್ಮಶತಾಬ್ದ ಸ್ಮಾರಕ ಭವನ ಇತಿಹಾಸದ ಪುಟಕ್ಕೆ ಸೇರಿದೆ. ಪಾಣೆಮಂಗಳೂರು ಹೋಬಳಿ ನಾಡ ಕಚೇರಿ, ಸಮಾಜ ಕಲ್ಯಾಣ, ಆಹಾರ ಪೂರೈಕೆ, ಸಾಮಾಜಿಕ ಅರಣ್ಯ, ಗ್ರಾಮ ಕರಣಿಕರ ಕಚೇರಿ, ತಾಲೂಕು ಚುನಾವಣೆ ಶಾಖೆ, ಬಂಟ್ವಾಳ ಪ್ರಸ್‌ ಕ್ಲಬ್‌ ಇಲ್ಲಿ ಕಾರ್ಯ ನಿರ್ವಹಿಸಿದ್ದವು.

ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಕೆ.ಎಂ. ಇಬ್ರಾಹಿಂ ಈ ಮೂವರು ಶಾಸಕರು, ಸಚಿವ ಬಿ. ನಾಗರಾಜ ಶೆಟ್ಟಿ ಇದೇ ಕಟ್ಟಡದಲ್ಲಿ ತಮ್ಮ ಸೇವಾ ಅವಧಿಯನ್ನು ಪೂರೈಸಿದ್ದರು. ಹಾಲಿ ಸಚಿವ ಬಿ. ರಮಾನಾಥ ರೈ ಅವರೂ ಇದೇ ಕಟ್ಟಡದಲ್ಲಿ ನಡೆಯುತ್ತಿದ್ದ ಸಭೆ-ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು.

ತಾ| ಬೋರ್ಡ್‌ ಸಭೆ, ಬಿ.ಸಿ. ರೋಡ್‌ನ‌ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆ, ಸಣ್ಣಪುಟ್ಟ ಸಭೆ, ಸಮಾರಂಭ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಸಹಿತ ಪ್ರಮುಖ ಅಧಿಕಾರಿಗಳ ಭೇಟಿ, ರಾಜಕೀಯ ಸಭೆಗಳು, ಸಾಹಿತ್ಯ ಸಮಾಲೋಚನೆಗಳು ಹೀಗೆ ಬಂಟ್ವಾಳ ತಾಲೂಕಿನ ಸಮಗ್ರ ಬೆಳವಣಿಗೆಯಲ್ಲಿ ಸ್ಮಾರಕ ಭವನ ಪ್ರಮುಖ ಕೊಂಡಿಯಾಗಿತ್ತೆಂಬುದು ಉಲ್ಲೇಖನೀಯ.

ವರ್ಷಗಳು ಉರುಳಿದಂತೆ ಎಲ್ಲ ಕಚೇರಿ, ಸಂಘ-ಸಂಸ್ಥೆಗಳು ತಮ್ಮದೇ ಮಿನಿ ಹಾಲ್‌ಗ‌ಳನ್ನು ರೂಪಿಸಿಕೊಂಡ ಮೇಲೆ ಇಲ್ಲಿ ಚಟುವಟಿಕೆಗಳು ಕ್ಷೀಣಿಸತೊಡಗಿದವು. ಕೆಲವು ವರ್ಷಗಳಿಂದ ಈ ಹಾಲ್‌ನಲ್ಲಿ ಆಧಾರ್‌ ನೋಂದಣಿ ಆರಂಭಿಸಿದ ಮೇಲೆ ಇಲ್ಲಿನ ಕುರ್ಚಿ-ಮೇಜುಗಳು, ಮೈಕುಗಳಲ್ಲಿ ಸ್ವಾಗತ, ವಂದನೆಗಳ ಸದ್ದು ಅಡಗಿಹೋಯಿತು.

ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡಿನಲ್ಲಿ ಮಿನಿ ವಿಧಾನ ಸೌಧ ಅಸ್ತಿತ್ವಕ್ಕೆ ಬರುತ್ತಲೇ ಏರು ಪ್ರಾಯದ ಕಟ್ಟಡದಲ್ಲಿ ಜನಸಂಪರ್ಕದ ವ್ಯವಹಾರ ನಿಲುಗಡೆಯಾಗಿ ಅಂತ್ಯೋದಯಕ್ಕೆ ಸಿದ್ಧಗೊಂಡಿತ್ತು.

2019ರಲ್ಲಿ ಬಸ್‌ ನಿಲಾಣ ಸೇವೆಗೆ ಲಭ್ಯ 
ಹಳೆಯ ತಾ.ಪಂ. ಕಟ್ಟಡ ಎಂಬ ನಾಮಾಂಕಿತ ಪಡೆದ ಬಳಿಕ ವ್ಯವಹಾರ ಕುಂಠಿತವಾಗಿ ಅಂತಿಮವಾಗಿ ನೆಲಸಮಗೊಂಡ ಸ್ಥಳದಲ್ಲಿ ಖಾಸಗಿ ಮತ್ತು ಸರಕಾರ ಸಹಭಾಗಿತ್ವದ 20 ಕೋಟಿ ರೂ. ವೆಚ್ಚದ ವಾಣಿಜ್ಯ ಸಂಕೀರ್ಣ, ಖಾಸಗಿ ಬಸ್‌ ನಿಲ್ದಾಣ ನಿರ್ಮಾಣ ಆಗಲಿದೆ. ತರಾತುರಿಯಲ್ಲಿ ಕೆಲಸ ಆದರೆ 2019ರ ಆಸುಪಾಸಿನಲ್ಲಿ ಬಂಟ್ವಾಳದ ಜನತೆಗೆ ರಾ. ಹೆದ್ದಾರಿ ಅಂಚಿನಲ್ಲಿ ಇತಿಹಾಸ ಮರೆಯಲಾಗದ ಮಾದರಿ ಸೌಕರ್ಯದ ಬಸ್‌ ನಿಲ್ದಾಣ ಲಭ್ಯವಾಗುವುದು.

ರಾಜಾ ಬಂಟ್ವಾಳ 

Advertisement

Udayavani is now on Telegram. Click here to join our channel and stay updated with the latest news.

Next