ಮೂಡಿಗೆರೆ: ತಾ.ಪಂ. ಅಧ್ಯಕ್ಷ ರತನ್ ಅವರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇನೆ. ಚಿಕ್ಕಂದಿನಲ್ಲಿ ತುಂಟಾಟಿಕೆ ಹೆಚ್ಚಿಗೆ ಇತ್ತು. ಅದರೆ, ತಾ.ಪಂ. ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರದಲ್ಲಿ ಆತನ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದಿದೆ. ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಮುತು ವರ್ಜಿಯಿಂದ ಕೆಲಸ ಮಾಡುವ ಮಟ್ಟಕ್ಕೆ ಬೆಳೆದಿದ್ದಾನೆ. ಇದರ ಪ್ರತಿಫಲವಾಗಿ ಅಭಿವೃದ್ಧಿ ಕಾರ್ಯದಲ್ಲಿ ಮೂಡಿಗೆರೆ ತಾಪಂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಚಿವ ಸಿಟಿ.ರವಿ ಹೇಳಿದರು.
ತಾಲೂಕು ಪಂಚಾಯತಿ ನೂತನ ಕಟ್ಟಡ, ದೀನ್ ದಯಾಳ್ ಉಪಾಧ್ಯಾಯ್ ಸಭಾ ಭವನ, ಪೂರ್ಣಚಂದ್ರ ತೇಜಸ್ವಿ ಸಭಾಂಗಣದ ಊಟದ ಹಾಲ್ ಹಾಗೂ ಜನರೇಟರ್ ಕೊಠಡಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದ್ದು, ಎಲ್ಲರೂ ಶಕ್ತಿಮೀರಿ ಕೆಲಸ ಮಾಡಬೇಕೆಂದರು. ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಉದ್ಘಾಟಿಸಿದರು. ದೀನ ದಯಾಳ್ ಉಪಾಧ್ಯಾಯ್ ಸಭಾಭವನವನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ, ಪೂರ್ಣ ಚಂದ್ರ ತೇಜಸ್ವಿ ಸಭಾಂಗಣದ ಊಟದ ಹಾಲ್ ಅನ್ನು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜನರೇಟರ್ ಕೊಠಡಿಯನ್ನು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು, ಯಾವುದೇ ಕೆಲಸ ಮಾಡಬೇಕೆಂದರೂ ಇಚ್ಛಾಶಕ್ತಿ ಬಹಳ ಮುಖ್ಯ. ಇದನ್ನು ತಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉತ್ತಮವಾಗಿ ಮಾಡಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷ ತಾಪಂ ಅಧಿ ಕಾರ ವಹಿಸಿಕೊಂಡಿದ್ದಾಗ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಇಂದು ಉತ್ತಮವಾಗಿ ಕಟ್ಟಡ ಮೂಡಿಬಂದಿದ್ದು, ಸಾರ್ವಜನಿಕರ ಹಾಗೂ ತಾಲೂಕಿನಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ತಾಪಂ ಕಾರ್ಯಗಳ ಬಗ್ಗೆ ಕಿರು ಮಾಹಿತಿ ನೀಡಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ವಿ.ಪ. ಸದಸ್ಯ ಎಂ.ಕೆ ಪ್ರಾಣೇಶ್ ಅವರುಗಳು ಮಾತನಾಡಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ತಾ.ಪಂ. ಉಪಾಧ್ಯಕ್ಷೆ ಪ್ರಮೀಳಾ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಜಿ.ಪಂ. ಸದಸ್ಯ ಕೆ.ಆರ್ .ಪ್ರಭಾಕರ್ ಸೇರಿದಂತೆ ತಾ.ಪಂ., ಜಿ.ಪಂ. ಸದಸ್ಯರು, ತಾಲೂಕಿನ 29 ಗ್ರಾಪಂಗಳ ಸದಸ್ಯರು ಭಾಗವಹಿಸಿದ್ದರು.