Advertisement

ಟಿಕೆಟ್‌ ಕಾಯ್ದಿರಿಸಲು ನೂತನ ಕಟ್ಟಡ 

09:56 AM Oct 12, 2018 | |

ಮಹಾನಗರ: ನಗರದ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿರುವ ಮುಂಗಡ ರೈಲ್ವೇ ಟಿಕೆಟ್‌ ಕಾಯ್ದಿರಿಸುವ (ರಿಸರ್ವೇಶನ್‌ ಟಿಕೆಟ್‌ ಕೌಂಟರ್‌)ಕೇಂದ್ರ ಶೀಘ್ರದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ರೈಲು ನಿಲ್ದಾಣ ಮಾರ್ಗದಲ್ಲಿರುವ ಕೆಲವು ಹಳೆಯ ಕಟ್ಟಡಗಳನ್ನು ಇದಕ್ಕಾಗಿ ತೆರವು ಮಾಡಲಾಗುತ್ತಿದ್ದು, ಸುಮಾರು 2 ಕೋ.ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ.

Advertisement

ಈಗ ನಗರದ ಸೆಂಟ್ರಲ್‌ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಲಭಾಗದ ಎಸ್ಕಲೇಟರ್‌ ಇರುವ ಸ್ಥಳದಲ್ಲಿ (ಆರ್‌ ಎಂಎಸ್‌ ಕೇಂದ್ರದ ಸಮೀಪ) ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಕೇಂದ್ರ ಕಾರ್ಯಾಚರಿಸುತ್ತಿದೆ. ಆದರೆ ಅಲ್ಲಿ ಪಾರ್ಕಿಂಗ್‌ ಸಹಿತ ಇತರ ವ್ಯವಸ್ಥೆಗಳಿಗೆ ಪೂರಕ ಸ್ಥಳದ ಕೊರತೆಯ ಕಾರಣದಿಂದ ಈ ಕೇಂದ್ರವನ್ನು ಸ್ಥಳಾಂತರಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ನೂತನ ಕಟ್ಟಡವು ರೈಲು ನಿಲ್ದಾಣ ಸಮೀಪದ ಶ್ರೀ ಮುತ್ತಪ್ಪನ್‌ ದೇವಸ್ಥಾನದ ಮುಂಭಾಗ (ರೈಲ್ವೇ ಸ್ಟೇಷನ್‌ ಮಾರ್ಗದ ಸಹಾಯಕ ಕಾರ್ಮಿಕ ಆಯುಕ್ತರ ಕಾರ್ಯಾಲಯದ ಹತ್ತಿರ) ನಿರ್ಮಾಣವಾಗಲಿದೆ. ನೆಲ ಅಂತಸ್ತು ಹಾಗೂ ಎರಡು ಅಂತಸ್ತು ಸೇರಿದಂತೆ ಒಟ್ಟು ಮೂರು ಅಂತಸ್ತುಗಳ ಕಟ್ಟಡ ಇದಾಗಲಿದೆ.

ಇದರಲ್ಲಿ ಒಂದು ಮಹಡಿಯನ್ನು ಪೂರ್ಣವಾಗಿ ರಿಸರ್ವೆಶನ್‌ ಕೇಂದ್ರಕ್ಕಾಗಿ ಬಳಸಲಾಗುತ್ತದೆ. ಸುಮಾರು 6ರಿಂದ 10ರಷ್ಟು ಕೌಂಟರ್‌ ಅನ್ನು ಇದರಲ್ಲಿ ತೆರೆಯುವ ಬಗ್ಗೆ ನಿರ್ಧರಿಸಲಾಗಿದೆ. ಇನ್ನೊಂದು ಕೌಂಟರ್‌ನಲ್ಲಿ ಟಿಕೆಟ್‌ ತಪಾಸಣೆಗಾರರಿಗೆ (ಟಿ.ಟಿ.) ವಿಶ್ರಾಂತಿ ಕೊಠಡಿ ನಿರ್ಮಾಣವಾಗಲಿದೆ.

ಹಳೆಯ ಕಟ್ಟಡಗಳಿಗೆ ಮುಕ್ತಿ
ಸುಮಾರು 100 ವರ್ಷಗಳ ಹಿಂದೆ ಸ್ಥಾಪನೆಯಾದ ನಗರದ ಸೆಂಟ್ರಲ್‌ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳೇ ಕಾಣಸಿಗುತ್ತಿವೆ. ಶ್ರೀ ಮುತ್ತಪ್ಪನ್‌ ದೇವಸ್ಥಾನದ ಮುಂಭಾಗ ಹಳೆಯ ಹಲವು ಕಟ್ಟಡಗಳಿವೆ. ಅದರಲ್ಲೂ ಸಿಮೆಂಟ್‌ ಶೀಟ್‌ ಗಳ ಕೆಲವು ಕಟ್ಟಡಗಳು ಇಲ್ಲಿದ್ದು ಅದನ್ನು ನೂತನ ಕೇಂದ್ರ ನಿರ್ಮಾಣದ ಹಿನ್ನೆಲೆಯಲ್ಲಿ ತೆರವು ಮಾಡಲಾಗುತ್ತದೆ. ಈಗಾಗಲೇ ಕೆಲವು ಸಣ್ಣ ಪುಟ್ಟ ಕಟ್ಟಡವನ್ನು ತೆರವುಗೊಳಿಸಲಾಗಿದ್ದು, ಮುಂದೆ ಹತ್ತಿರದ ಕಟ್ಟಡ ತೆರವಿನ ಬಗ್ಗೆ ಇಲಾಖೆ ನಿರ್ಧರಿಸಿದೆ ಎಂದು ರೈಲ್ವೇ ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಪಾರ್ಕಿಂಗ್‌ ಸ್ಥಳ ವಿಸ್ತರಣೆ
ನೂತನ ಕಟ್ಟಡ ನಿರ್ಮಾಣವಾದ ಬಳಿಕ ಅದರ ಸುತ್ತಮುತ್ತ ಪಾರ್ಕಿಂಗ್‌ಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ರಿಸರ್ವೆಶನ್‌ ಟಿಕೆಟ್‌ಗೆ ಆಗಮಿಸುವವರು ಹಾಗೂ ರೈಲು ನಿಲ್ದಾಣಕ್ಕೆ ಆಗಮಿಸುವವರಿಗೆ ಇಲ್ಲಿ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ರಿಸರ್ವೆಶನ್‌ ಟಿಕೆಟ್‌ ಪಡೆಯುವವರು ರೈಲು ನಿಲ್ದಾಣದವರೆಗೂ ತೆರಳುವ ಪ್ರಮೇಯ ತಪ್ಪಲಿದೆ.

‘ಈಗ ರಿಸರ್ವೆಶನ್‌ ಕೌಂಟರ್‌ ಮುಂಭಾಗ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಆದರೆ, ಇದು ತಿಳಿಯದೆ ವಾಹನವನ್ನು ಕೌಂಟರ್‌ ಮುಂಭಾಗ ತಂದರೆ ಪೊಲೀಸರು ಕೇಸ್‌ ಹಾಕುತ್ತಾರೆ’ ಎಂದು ಪ್ರಯಾಣಿಕ ಕಿಶೋರ್‌ ಆರೋಪಿಸಿದ್ದಾರೆ.

ರೈಲ್ವೇ ಜನರಲ್‌ ಟಿಕೆಟ್‌ ಕೌಂಟರ್‌ ಬಾಗಿಲು!
ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಸುಸಜ್ಜಿತ ರಿಸರ್ವೇಶನ್‌ ಕೌಂಟರ್‌ನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗುತ್ತಿದ್ದಂತೆ, ಪುರಭವನದ ಮುಂಭಾಗ ರಸ್ತೆಯಲ್ಲಿ ಆರಂಭವಾಗಿದ್ದ ‘ರೈಲ್ವೇ ಜನರಲ್‌ ಟಿಕೆಟ್‌ ಕೌಂಟರ್‌’ ಬಹುತೇಕ ದಿನ ಶಟರ್‌ ಎಳೆದುಕೊಂಡಿದೆ. ಸಮರ್ಪಕವಾಗಿ ಸರ್ವರ್‌ ಸಿಗದ ಕಾರಣದಿಂದ ಜನರಲ್‌ ಟಿಕೆಟ್‌ ಕೌಂಟರ್‌ ಬಳಕೆಗೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಮಧ್ಯೆ ರೈಲು ನಿಲ್ದಾಣದ ಸಮೀಪದಲ್ಲಿದ್ದ ಟಿಕೆಟ್‌ ಕೌಂಟರ್‌ ಕೂಡ ಸರ್ವರ್‌ ಸಮಸ್ಯೆ ಎದುರಿಸುತ್ತಿದೆ. 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next