ಹುಬ್ಬಳ್ಳಿ: ಎರಡು ಡೋಸ್ ಲಸಿಕೆ ತೆಗೆದುಕೊಂಡಾಗ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದ ರಿಂದ ಕೋವಿಡ್ ಯಾವುದೇ ಹೊಸ ತಳಿ ಪರಿಣಾಮ ಬೀರುವುದಿಲ್ಲ. ಲಸಿಕೆ ಪಡೆದ ಅನಂತರವೂ ದುಷ್ಪರಿಣಾಮ ಬೀರುವ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಇಲ್ಲಿಯವರೆಗೆ ಅಂತಹ ಅನುಮಾನಗಳಿಲ್ಲ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ ತಿಳಿಸಿದರು.
ಹೊಸ ತಳಿ ಸೇರಿದಂತೆ ಎಲ್ಲ ಪ್ರಯೋಗಕ್ಕೆ ರಾಜ್ಯದಲ್ಲಿ ಆರೇಳು ಪ್ರಯೋಗಾಲಯಗಳಿವೆ. ಯಾವುದೇ ಹೊಸ ತಳಿ ಬಂದರೂ ತತ್‌ಕ್ಷಣ ತಜ್ಞರ ಅಭಿಪ್ರಾಯ ಪಡೆಯಲಾಗುವುದು. ಯುಕೆ, ರಷ್ಯಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹೊಸ ತಳಿ ಕಂಡುಬಂದಿದೆ. ಈ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರ ಜತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಹೊಸ ತಳಿ ಕುರಿತು ರಷ್ಯಾ ಸೇರಿದಂತೆ ಕೆಲ ದೇಶಗಳಿಂದ ವರದಿ ತರಿಸಿಕೊಂಡಿದ್ದೇವೆ. ವರದಿ ಅವಲೋಕಿಸಿದಾಗ ಲಸಿಕೆ ಪಡೆಯದವರ ಮೇಲೆ ದುಷ್ಪರಿಣಾಮ ಬೀರಿರುವುದು ದೃಢಪಟ್ಟಿದೆ. ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಿಲ್ಲ ಎಂಬುದು ಗೊತ್ತಾಗಿದೆ. ಕೆಲ ರಾಜ್ಯಗಳಲ್ಲಿ ಡೆಲ್ಟಾ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ಆ ರಾಜ್ಯದಿಂದ ಆಗಮಿಸುವವರ ಮೇಲೆ ನಿಗಾ ವಹಿಸಲು ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದರು.
ಇದನ್ನೂ ಓದಿ:ಮನೆ ಸ್ವಚ್ಛವಿದ್ದರೆ ಟಿವಿ, ಮೊಬೈಲ್ ಗಿಫ್ಟ್!
ಈಗಾಗಲೇ ವಿದೇಶಗಳಲ್ಲಿ ಮೂರನೇ ಅಲೆ ಬಂದಿದೆ. ಆದರೆ ನಮ್ಮಲ್ಲಿ ಮೂರನೇ ಅಲೆ ಬಾರದಂತೆ ತಡೆಯಬೇಕಾಗಿದೆ. ಇದಕ್ಕೆ ಜನರ ಸಹಕಾರ ಬೇಕು. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ ಎನ್ನುವ ಉದಾಸೀನ ಮಾಡದೆ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.