ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾ.ಪಂ.ನ ಸವಣಾಲು ಗ್ರಾಮದ ಹಿರಿಯಾಜೆ ಕಾಲನಿಗೆ ರಿಂಗ್ ಮೂಲಕ ನಿರ್ಮಿಸಿದ ಬಾವಿಯೊಂದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವ ಸಮಸ್ಯೆಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದ್ದು, ಇದೀಗ ಕಾಲನಿಯಲ್ಲಿ ಹೊಸತೊಂದು ಕೊಳವೆ ಬಾವಿ ಕೊರೆಯಲಾಗಿದೆ. ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ನ. 28ರಂದು
ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದನೆ ನೀಡಿದ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ವಾರದೊಳಗೆ ಸ್ಥಳೀಯ ನಿವಾಸಿಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು.
ಪಂಪು ಅಳವಡಿಕೆ ಅಗತ್ಯ
ಹಿರಿಯಾಜೆಯಲ್ಲಿ ಈ ಹಿಂದೆಯೂ ಅನೇಕ ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದರೂ ಅದರಲ್ಲಿ ನೀರು ಲಭಿಸಿರಲಿಲ್ಲ. ಇದೀಗ ಹೊಸದಾಗಿ ಕೊರೆದಿರುವ ಕೊಳವೆಬಾವಿಯಲ್ಲಿ ಈಗ ನೀರಿದೆಯಾದರೂ ಮುಂದೆ ಅದೇ ನೀರು ಇರುತ್ತದೆ ಎಂದು ಹೇಳುವುದು ಕಷ್ಟ. ಆದರೂ ಶೀಘ್ರದಲ್ಲಿ ಪಂಪು ಅಳವಡಿಸಿದ್ದೇ ಆದಲ್ಲಿ, ಗ್ರಾಮಸ್ಥರ ನೀರಿನ ಬವಣೆ ತಪ್ಪಲಿದೆ.