Advertisement
ಶಾಲಾ ಪಠ್ಯದ ಭಾಗವಾಗಿದ್ದ ಈ ಪದ್ಯ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಗೆಳೆಯರು, ಅಕ್ಕ- ತಂಗಿ, ಅಣ್ಣ- ತಮ್ಮಂದಿರೊಂದಿಗೆ ಚೈತ್ರದ ತಿಳಿಗಾಳಿಯಲ್ಲಿ ಮಾವಿನ ಚಿಗುರಿನ ಸುವಾಸನೆಯನ್ನು ಸವಿಯುತ್ತ ಆಟದ ಮೈದಾನ, ಮನೆಯ ಅಂಗಳ, ಹಿತ್ತಲು, ತೋಟಗಳಲ್ಲಿ ಈ ಹಾಡು ಹಾಡಿಕೊಂಡು ಆಡಿದ ಆ ದಿನಗಳು ನೆನಪಿನಂಗಳದಲ್ಲಿ ಮತ್ತೆ ಚಿಗುರೊಡೆಯುತ್ತವೆ. ಚೈತ್ರ ತರುವ ಸಂಭ್ರಮವೇ ಹಾಗಿದೆ. ಕಣ್ಣ ಹಾಯಿಸಿದಲ್ಲೆಲ್ಲ ಹೊಸತನ ಕಂಡುಬರುತ್ತದೆ. ಆಂಗ್ಲ ಕವಿ ಥಾಮಸ್ ನಾಶ್ ಬರೆದಿರುವ “ಸ್ಪ್ರಿಂಗ್’ ಎಂಬ ಕವನವನ್ನು ಬಿ.ಎಂ. ಶ್ರೀಕಂಠಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದು ಹೀಗೆ. ಕೊನೆಯಲ್ಲಿ ಬಂದ ವಸಂತ – ನಮ್ಮ ರಾಜ ವಸಂತ! ಎನ್ನುತ್ತಾರೆ. ಪ್ರತಿವರ್ಷ ವಸಂತದಲ್ಲಿ ಮೊದಲಿಗೆ ನೆನಪಿನಲ್ಲಿ ಸುಳಿಯುವ ಪದ್ಯವಿದು.
Related Articles
Advertisement
ಖಳದುಶ್ಯಾಸನ ಹೇಮಂತ ಮರ- ಮರಗಳ ಹಸುರುಡೆಯ ಸೆಳೆದು ಹಾಕಿ ನಗ್ನಗೊಳಿಸಿ ಅವಮಾನ ಮಾಡಿದ, ಇಗೋ ಬಂದ ಋತು ವಸಂತ ಕೊಳಲೂದುತ ಎಲ್ಲೋ ನಿಂತು ಮರ ಮರಗಳ ಮೈಯ ತುಂಬ ಹೊಸ ಚಿಗುರನು ಉಡಿಸಿದ.. ಕವಿ “ವಸಂತ ಋತು’ವಿನ ಬಗ್ಗೆ ಪ್ರತಿಯೊಂದು ಕವನದಲ್ಲಿ ವೈವಿಧ್ಯಮಯವಾಗಿ ವರ್ಣಿಸಿದ್ದಾರೆ.
ಋತು ವಸಂತ ಬಂದನಿದೋ ಉಲ್ಲಾಸವ ತಂದನಿದೋ, ಮಬ್ಬು ಕವಿದ ಮೌನಗಳಲಿ ಹೊಸದನಿಗಳ ಹೊಮ್ಮಿಸಿ ಉದುರಿದೆಲೆಯ ಕೊಂಬೆಗಳಲಿ, ಬಣ್ಣದ ಹೊಳೆ ಹರಿಯಿಸಿ, ಬತ್ತಿದೆದೆಗೆ ಭರವಸೆಗಳ ಹೊಸಬಾವುಟವೇರಿಸಿ, ಹಳೆಗಾಡಿಗೆ ಹೊಸಕುದುರೆಯ ಹೊಸಗಾಲಿಯ ಜೋಡಿಸಿ..
ಹೀಗೆ ನವೋಲ್ಲಾಸ ತರುವ ವಸಂತ ಋತುವಿನ ಬಗ್ಗೆ ಬರೆಯುವ ಕವಿ, ಚೈತ್ರ ಅನ್ನುವುದು ಕೇವಲ ಋತುವಲ್ಲ, ಅದು ಸೃಜನಶೀಲತೆಯ ಸಂಕೇತ. ಬದುಕಿಗೆ ಅಗತ್ಯವಾದ ಚಲನಶೀಲತೆಯನ್ನು ಪ್ರಕೃತಿ ಕಾಯ್ದುಕೊಂಡು ಬರುತ್ತಿದೆ. ಇದುವೇ ನಿಜವಾದ ಸೃಜನಶೀಲತೆಯ ಲಕ್ಷಣ ಎನ್ನುತ್ತಾರೆ.
ಚೈತ್ರ ಮಾಸದ ಮೊದಲ ದಿನದಂದು ಆಚರಿಸಲ್ಪಡುವ “ಯುಗಾದಿ’ ಹಬ್ಬವೂ ಹೊಸ ಆರಂಭವೆನ್ನುವ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರೊ| ಎಂ.ವಿ. ಸೀತಾರಮಯ್ಯ ಅವರು ತಮ್ಮ “ಚೈತ್ರಾರಂಭದ ಈ ದಿನ’ ಎನ್ನುವ ಕವನದಲ್ಲಿ..
ನೋವೋ ನಲಿವೋ ಸೋಲೋ ಗೆಲುವೋ ಎರಡಕು ಸಮಬೆಲೆ ಎನುವ ದಿನ; ಬೇವು ಬೆಲ್ಲ ಬೆಳದಿಂಗಳು ಬಿಸಿಲು ಎರಡು ಸಮ ಸೇವಿಸುವ ದಿನ.. ಜೀವನದ ನೋವು-ನಲಿವುಗಳನ್ನು ಸಮನಾಗಿ ತೂಗಿ ನೋಡಿ, ಎರಡಕ್ಕೂ ಸಮನಾದ ಬೆಲೆ ಕೊಡಬೇಕೆಂಬ ಮಾತನ್ನು ಸರಳವಾಗಿ, ಸುಂದರವಾಗಿ ಇಲ್ಲಿ ಹೇಳುತ್ತಾರೆ ಕವಿ. ಡಾ| ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ತಮ್ಮ ಕವನದಲ್ಲಿ “ಹೊಸ ವರ್ಷ ಬಂದಂತೆ ಯಾರು ಬಂದಾರು?’ ಕವನದಲ್ಲಿ ಗಿಡ ಮರಕೆ ಹೊಸ ವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು? ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಎಂದು ಪ್ರಶ್ನಿಸುತ್ತಾ ಕವನವನ್ನು ಮುಂದುವರೆಸುತ್ತಾರೆ.
ಹೊಸ ವರ್ಷ ಬಂದಂತೆ ಯಾರು ಬಂದಾರು ಏನೋ ನಿರೀಕ್ಷೆ ಸೃಷ್ಟಿಯಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ… ಮನುಷ್ಯನೆಂದರೆ ಹಿಡಿ-ಹಿಡಿ ನೆನಪುಗಳು ಎನ್ನುವಂತೆ ನೆನಪುಗಳಿಂದಲೇ ರೂಪುಗೊಳ್ಳುವ ಜೀವನ ಕಾಣುವ ಕನಸುಗಳನ್ನು, ಅವುಗಳ ಮಹತ್ವವನ್ನು ಅರ್ಥಪೂರ್ಣವಾಗಿ ಕವನದ ಸಾಲುಗಳನ್ನಾಗಿಸಿದ್ದಾರೆ.
ನೆನಪುಗಳ ಜೋಲಿಯಲಿ ತೂಗುವುದು ಮನಸು ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು ನನಸಾಗದಿದ್ದರೂ ಕನಸಿಗಿದೆ ಘನತೆ ತೈಲ ಯಾವುದೆ ಇರಲಿ ಉರಿಯುವುದು ಹಣತೆ ಕವಿ ಸುಮತೀಂದ್ರ ನಾಡಿಗ್ ಅವರು ತಮ್ಮ “ಯುಗಾದಿ’ ಕವನದಲ್ಲಿ ಹೇಗೊ ಏನೊ ಕಳೆಯಿತು ಹಿಂದಿನೊಂದು ಯುಗ! ಹಳೆಯದೆಲ್ಲ ಸುಟ್ಟುರಿಯಲಿ ಬೆಂಕಿಹಚ್ಚಿ ಧಗಧಗ ಎಂದು ಪ್ರಾರಂಭಿಸಿ ಅನಂತರದ ಸಾಲುಗಳಲ್ಲಿ ಹಬ್ಬದ ತಯಾರಿಯ ಕುರಿತು ಬರೆಯುತ್ತಾರೆ. ಡಾ| ಸಿದ್ಧಲಿಂಗಯ್ಯ ಅವರು ಯುಗಾದಿಯ ಶೀರ್ಷಿಕೆಯಡಿಯಲ್ಲಿ ಐದು ಕವನಗಳನ್ನು ಬರೆದಿದ್ದಾರೆ. ಎಲ್ಲ ಕವನಗಳ ವಿಷಯ ಯುಗಾದಿಯಾದರೂ, ಪ್ರತಿ ಕವನಗಳಲ್ಲಿನ ಭಾವ ಬೇರೆ, ಬೇರೆಯಾಗಿದೆ. ಯುಗಾದಿ-1 ಕವನದ ಸಾಲುಗಳು ಹೀಗಿವೆ.
ಬೇವು ಬೆಲ್ಲದ ಅದೇ ಹಳೆಯ ಪಾಠ ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ ಬದುಕೇ ಇಲ್ಲದ ಅನಾದಿಯ ಲೆಕ್ಕಕ್ಕೆ ನೀನೊಂದು ಶಬ್ದ ಮಾತ್ರ.
ಹಗಲಿರುಳು ಉರುಳಿ ಹೋಗಿ ವರ್ಷ, ವರ್ಷವೂ ಬರುವ ಯುಗಾದಿ ಬರೀ ಶಬ್ದವೇ? ಆಲೋಚಿಸುವಂತೆ ಮಾಡುತ್ತದೆ ಕವನದ ಈ ಸಾಲು. ಯುಗಾದಿ-2 ಕವನದಲ್ಲಿ ಯುಗಾದಿ ಎನ್ನುವುದು ಹಲವರಿಗೆ ಬರೀ ಶಬ್ದ ಮಾತ್ರ ಎನ್ನುವ ಕವಿಯ ಮಾತನ್ನು ಮನಸ್ಸು ಒಪ್ಪಿಕೊಳ್ಳುವಂತೆ ಮಾಡುತ್ತದೆ.
ಉಳ್ಳವರಿಗೆ ಹಬ್ಬವಾಯ್ತು ಕವಿಕುಲಕ್ಕೆ ಕಬ್ಬವಾಯ್ತು ಇಲ್ಲದವರಿಗೇನಾಯಿತು ಹೇಳೆ ಯುಗಾದಿ.. ಕವಿ ಚೆನ್ನವೀರ ಕಣವಿ ತಮ್ಮ “ಯುಗಾದಿ’ ಕವನದಲ್ಲಿ ಯುಗಾದಿಯನ್ನು “ಹಿರಿಯ’ನೆಂದು ಕರೆದು ಅವನೊಂದಿಗೆ ಮಾತುಕತೆ ನಡೆಸುವ ರೀತಿಯಂತೂ ವಿಶಿಷ್ಟವಾಗಿದೆ.
ಕರೆಯದಿದ್ದರೂ ನಾವು, ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು ಬೆಲ್ಲ? ಹೀಗೆ ಯುಗಾದಿ ಎಂಬ “ಹಿರಿಯ’ನನ್ನು ಮಾತಿಗೆಳೆಯುತ್ತಾರೆ ಕವಿ. ಕವನವನ್ನು ಮುಂದುವರೆಸುತ್ತ ತಮ್ಮ ಮಾತುಕತೆಯನ್ನೂ ಮುಂದುವರಿಸುತ್ತ ಹೋಗುವ ಕವಿ, ಜಗದ ನಿಜಸ್ಥಿತಿಯ ಬಗ್ಗೆ ಆ ಹಿರಿಯನಲ್ಲಿ ಹೇಳಿಕೊಳ್ಳುತ್ತಾರೆ. ನಶ್ವರ ಬದುಕಿನ ಚಿಂತನೆಯನ್ನು ಆತನಲ್ಲಿ ಮಾತನಾಡುತ್ತಾರೆ.
ವರುಷಗಟ್ಟಲೆ ಎತ್ತಲೋ ಕಣ್ಮರೆಯಾಗಿ ಹೋಗುವ ನಿನಗೆ ಹೇಗೆ ಗೊತ್ತು- ಇಲ್ಲಿ, ಒಳಗೊಳಗೆ ನಡೆಯುತ್ತಿರುವ ಮಸಲತ್ತು, ನಿಮಿಷ ನಿಮಿಷಕ್ಕೆ ಹೊಸ ಹೊಸ ವೇಷಧರಿಸಿ ಓಡುವ ಜಗತ್ತು. ಹಾಗೆ ನೋಡಿದರೆ, ನಮಗಿಲ್ಲಿ ಏನಿದೆ ಹೇಳು ವಿಶೇಷ ಸವಲತ್ತು? ಇಂದೊ ನಾಳೆಯೊ ವಲಸೆ ಹೋಗುವರು ನಮ್ಮ ಜನ ಚಂದ್ರ ತಾರಾಲೋಕ ಹುಡುಕಿಕೊಂಡು ಬಹುಶಃ ಕವಿಗಳನ್ನೂ ಜತೆಗೆ ಕರೆದುಕೊಂಡು.
ಈ ಕವನದ ಸಾಲುಗಳಲ್ಲಿ ಯುಗಾದಿಯನ್ನು ಕವಿ ನೋಡುವ ನೋಟ ಅದೆಷ್ಟು ವಿಭಿನ್ನ ಎನಿಸುತ್ತದೆ. ಯುಗಾದಿಯ ಬಗ್ಗೆ ಹತ್ತಾರು ಕವನಗಳನ್ನು ಓದಿ, ನೂರಾರು ಭಾವಗಳನ್ನು ತಿಳಿದುಕೊಳ್ಳುವಂತಾದಾಗ, ನಾವೆಲ್ಲ ಬಾಲ್ಯದಿಂದ ಹಾಡಿಕೊಂಡು ಬಂದಿರುವ ವರಕವಿ ದ.ರಾ. ಬೇಂದ್ರೆ ಅವರ “ಯುಗಾದಿ’ ಕವನದ ಸಾಲುಗಳು ಕವಿ ಕೇಳುವ ಪ್ರಶ್ನೆಯನ್ನು ನಮ್ಮ ಮನಸ್ಸಿನಲ್ಲೂ ಮೂಡಿಸುತ್ತವೆ.
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ! ಒಂದೆ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೆ? .. ಈ ಕವನಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.
-ಅಹೀಶ್ ಭಾರದ್ವಾಜ, ನ್ಯೂಜೆರ್ಸಿ