ಹುಬ್ಬಳ್ಳಿ: ಕೋವಿಡ್ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಧಾರವಾಡ ಜಿಲ್ಲಾಡಳಿತ ತಂತ್ರಾಂಶ ಆಧಾರಿತ ಸುಸಜ್ಜಿತ ಆ್ಯಂಬ್ಯುಲೆನ್ಸ್ ಸೇವೆ ಆರಂಭಿಸಿದೆ.
ಕೋವಿಡ್ ದೃಢಪಟ್ಟ ರೋಗಿಗಳಿಗೆ ತುರ್ತು ಚಿಕಿತ್ಸೆ ಅವಶ್ಯವಿದ್ದರೆ ಮಾಹಿತಿ ಬಂದ 15 ನಿಮಿಷಕ್ಕೆ ಆ್ಯಂಬ್ಯುಲೆನ್ಸ್ ರೋಗಿಯ ಮನೆಯ ಮುಂದೆ ಇರಲಿದೆ.
ತಹಶಿಲ್ದಾರ ಕಚೇರಿಯಲ್ಲಿ ಇದಕ್ಕಾಗಿ ವಾರ್ ರೂಂ ಆರಂಭಿಸಲಾಗಿದ್ದು, 10 ಜನ ವೈದ್ಯರು ಇರಲಿದ್ದು, ಸೋಂಕಿತ ಪ್ರಕರಣ ವರದಿ ಬರುತಿದ್ದಂತೆಯೇ ಸೋಂಕಿತರನ್ನು ಸಂಪರ್ಕಿಸಿ ಕೌನ್ಸಲಿಂಗ್ ಆರಭಿಸುತ್ತಿದ್ದು, ತಕ್ಷಣಕ್ಕೆ ಆ್ಯಂಬ್ಯುಲೆನ್ಸ್ ಕಳುಹಿಸಿ ರೋಗಿಗಳು ಬಯಸಿದಲ್ಲಿ ಖಾಸಗಿ ಆಸ್ಪತ್ರೆ ಇಲ್ಲವೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆ್ಯಂಬ್ಯುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು ವಾಹದ ಚಲನೆ ಮಾಹಿತಿ ವಾರ್ ರೂಂ ಗೆ ರವಾನೆಯಾಗುತ್ತದೆ. ಆ್ಯಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್, ನರ್ಸ್, ಇನ್ನಿತರ ಸೌಲಭ್ಯಗಳು ಇರಲಿವೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಆ್ಯಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಿದರು.