ಚಿತ್ರರಂಗವೆಂದರೆ ಹಾಗೇ, ಇಲ್ಲಿ ಪ್ರತಿನಿತ್ಯ ನೂರಾರು ಹೊಸ ಪ್ರತಿಭೆಗಳು ಕಲಾವಿದರಾಗಿ, ನಿರ್ಮಾಪಕ – ನಿರ್ದೇಶಕರಾಗಿ, ತಂತ್ರಜ್ಞರಾಗಿ ಚಿತ್ರರಂಗದಕದ ತಟ್ಟುತ್ತಲೇ ಇರುತ್ತಾರೆ. ಆದರೂ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರಿಗೆಕೊರತೆ ಅನ್ನೋ ಮಾತು ಇಂದು ನಿನ್ನೆಯದ್ದಲ್ಲ, ಅದಕ್ಕೆ ದಶಕಗಳ ಇತಿಹಾಸವಿದೆ! ಇಂಥ ಮಾತುಗಳ ನಡುವೆಯೇ ಪ್ರತಿವರ್ಷ ಒಂದಷ್ಟು ನವನಟಿಯರು ನಾಯಕಿಯರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೇ ಕೆಲವು ನಟಿಯರು ತಮ್ಮದೇ ಆದ ಛಾಪು ಮೂಡಿಸಿ ಸಿನಿಪ್ರಿಯರ ಮತ್ತು ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿ “ಸ್ಟಾರ್ ಹೀರೋಯಿನ್’ ಪಟ್ಟವನ್ನೂ ಗಿಟ್ಟಿಸಿಕೊಳ್ಳುತ್ತಾರೆ.
ಚಿತ್ರರಂಗದಲ್ಲಿ ಹುಡುಕುತ್ತ ಹೋದರೆ ಪ್ರತಿವರ್ಷ ಇಂಥ ಒಂದಷ್ಟು “ಸ್ಟಾರ್ ಹೀರೋಯಿನ್ಸ್’ ಹೆಸರುಗಳು ಸಿಗುತ್ತಲೇ ಹೋಗುತ್ತದೆ.ಆದರೆ ಹೀಗೆ “ಸ್ಟಾರ್ ಹೀರೋಯಿನ್’ ಪಟ್ಟ ಗಿಟ್ಟಿಸಿಕೊಂಡ ಅನೇಕನಟಿಯರು ಆನಂತರ ನಿಧಾನವಾಗಿ ಬಿಗ್ ಬಜೆಟ್, ದೊಡ್ಡ ಸ್ಟಾರ್ ನಟರು, ನಿರ್ದೇಶಕರ ಚಿತ್ರಗಳಕಡೆಗೆ ಹೆಚ್ಚಾಗಿ ಮುಖಮಾಡುವುದರಿಂದ, ಹೊಸಬರು ಮತ್ತು ಸಣ್ಣ-ಮಧ್ಯಮ ಬಜೆಟ್ ಚಿತ್ರಗಳನ್ನು ಮಾಡುವವರಿಗೆ ಇವರು ಚಂದನವನದಲ್ಲಿಕೈಗೆಟುಕದ “ಗಗನಕುಸುಮ’ದಂತಾಗಿ ಬಿಡುತ್ತಾರೆ. ಇನ್ನು ಇತ್ತೀಚೆಗೆ ಬಹುತೇಕ ಸ್ಟಾರ್ ನಟರ ಸಿನಿಮಾಗಳ ನಿರ್ದೇಶಕ, ನಿರ್ಮಾಪಕರು ಹೆಚ್ಚಾಗಿ ಹೊಸ ನಟಿಮಣಿಯರನ್ನು ತಮ್ಮ ಚಿತ್ರಕ್ಕೆಕರೆತರುತ್ತಿದ್ದಾರೆ. ಹೀಗಾಗಿ ಅಲ್ಲೂ ಹೊಸ ನಟಿಯರಿಗೆ ಸ್ಟಾರ್ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಸಾಕಷ್ಟು ಹೊಸ ನಟಿಯರು ಈಗ ಸ್ಟಾರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಕುರಿತು ಒಂದು ರೌಂಡಪ್..
ಯಶಾ :
“ಪದವಿಪೂರ್ವ’ ಚಿತ್ರದ ಮೂಲಕ ನಾಯಕ ನಟಿಯಾಗಿಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ನವ ನಟಿ ಯಶಾ ಫಸ್ಟ್ ಲುಕ್‌ನಲ್ಲೇ ಸಿನಿಮಂದಿಯ ಗಮನ ಸೆಳೆದಾಕೆ. ಮೊದಲ ಚಿತ್ರ “ಪದವಿಪೂರ್ವ’ ಬಿಡುಗಡೆಗೂ ಮೊದಲೇ ಯಶಾ, ಶಿವರಾಜ ಕುಮಾರ್ ಅಭಿನಯದ “ಶಿವಪ್ಪ’ ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಮೇಘಾ ಶೆಟ್ಟಿ :
ಕಿರುತೆರೆಯ “ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಮೇಘಾ ಶೆಟ್ಟಿ, ಈಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ಹಿರಿತೆರೆಗೆ ಪರಿಚಯವಾಗುತ್ತಿದ್ದಾರೆ. ಇದರೊಂದಿಗೆ ಇನ್ನೂ ಎರಡು – ಮೂರು ಹೊಸಚಿತ್ರಗಳಲ್ಲಿ ಮೇಘಾ ಶೆಟ್ಟಿ ಹೆಸರು ಕೇಳಿ ಬರುತ್ತಿದೆ.
ಆಶಾ ಭಟ್ :
ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿರುವ ಆಶಾ ಭಟ್ ಈಗ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದಲ್ಲಿ ನಾಯಕಿಯಾಗಿಕಾಣಿಸಿಕೊಂಡಿರುವ ಆಶಾ ಭಟ್ ಹೆಸರು ಕೂಡ ಮುಂಬರುವ ಎರಡು-ಮೂರು ಚಿತ್ರಗಳಲ್ಲಿಕೇಳಿ ಬರುತ್ತಿದೆ.
ಮೋಕ್ಷಿತಾ ಪೈ :
ಕಿರುತೆರೆಯ “ಪಾರು’ ಧಾರಾವಾಹಿಯ ಮೂಲಕ ಗುರುತಿಸಿಕೊಂಡಿದ್ದ ನಟಿಮೋಕ್ಷಿತಾ ಪೈ ಈಗ ಹೀರೋಯಿನ್ ಪಟ್ಟಕ್ಕೆ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ದುನಿಯಾವಿಜಯ್ ನಿರ್ದೇಶನದ ಲಕ್ಕಿ ನಾಯಕನಾಗಿರುವ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಮೋಕ್ಷಿತಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಶರಣ್ಯಾ ಶೆಟ್ಟಿ :
ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡು ನಂತರ “ಗಟ್ಟಿಮೇಳ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದವರು ನಟಿ ಶರಣ್ಯಾ ಶೆಟ್ಟಿ. ಈಗಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿದ್ದಾರೆ. ಸದ್ಯ ಶರಣ್ಯಾ “ಸ್ಫೂಕಿಕಾಲೇಜ್’, “1980′, “31 ಡೇಸ್’ , “14 ಫೆಬ್’ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಎರಡೂ ಹೊಸ ಚಿತ್ರಗಳಲ್ಲಿ ಶರಣ್ಯಾ ಹೆಸರು ಕೇಳಿಬರುತ್ತಿದ್ದು, ಈ ಚಿತ್ರಗಳು ಇನ್ನಷ್ಟೇ ಅನೌನ್ಸ್ ಆಗಬೇಕಿದೆ.
ಇವರೊಂದಿಗೆ “ಯುವರತ್ನ’ ಚಿತ್ರದ ಮೂಲಕ ತಮಿಳು ನಟಿ ಸಯೇಷಾ ಸೈಗಲ್, “ಎಂ.ಆರ್’ ಚಿತ್ರದ ಮೂಲಕ ಮಲೆಯಾಳಿ ನಟಿ ಸೌಮ್ಯ ಮೆನನ್, “ಲಂಕಾಸುರ’ ಮೂಲಕ ಪಾರ್ವತಿ, “ವಿಷ್ಣುಪ್ರಿಯಾ’ ಚಿತ್ರದ ಮೂಲಕ ಪ್ರಿಯಾ ವಾರಿಯರ್, ಹೀಗೆ ಸಾಲು ಸಾಲು ಪರಭಾಷಾ ನಟಿಯರು ನಾಯಕಿಯರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಸ್ಟಾರ್ ನಟಿಯರ ಬೇಡಿಕೆ ಕುಸಿಯಿತೇ? : ಕೆಲವೇ ಕೆಲವು ವರ್ಷಗಳ ಹಿಂದೆ ಕೇವಲ ಸ್ಟಾರ್ ಸಿನಿಮಾಗಳಷ್ಟೇ ನಟಿಸುತ್ತಾ, ಹೊಸಬರ ಕೈಗೆ ಸಿಗದೇ ದೂರವೇ ಉಳಿದಿದ್ದ ಕೆಲವು ನಟಿಯರು ಈಗ ಸ್ಟಾರ್ ನಟರ ಸಿನಿಮಾಗಳಿಂದ ಬೇಡಿಕೆ ಕಳೆದುಕೊಂಡಂತಿದೆ.ಅದಕ್ಕೆ ಕಾರಣ ಆ ನಟಿಯರು ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು. “ಸ್ಟಾರ್‌ಗಳ ಸಿನಿಮಾ ಬಿಟ್ಟು ಬೇರೆ ಸಿನಿಮಾ ನಾನು ಮಾಡಲ್ಲ’
ಎನ್ನುತ್ತಿದ್ದ ಕೆಲವು ನಟಿಯರುಈಗ ಹೊಸಬರ, ನಾಯಕಿ ಪ್ರಧಾನ ಹಾಗೂ ಸ್ಟಾರ್ ಅಲ್ಲದ ಕೆಲವು ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಅದಕ್ಕೆ ಪೂರಕವಾಗಿ ಆ ನಟಿಯರ ಕೈಯಲ್ಲಿ ಯಾವುದೇ ಸ್ಟಾರ್ ಸಿನಿಮಾಗಳಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ.
-ಜಿ.ಎಸ್.ಕಾರ್ತಿಕ ಸುಧನ್