ಕಲಬುರಗಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ( ವಿಎಸ್ಎಸ್ಎನ್) ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ಮೇಲೆ ನಿಯಂತ್ರಣ ಹೊಂದಲು ಹೊಸ ಕಾಯ್ದೆ ಜಾರಿ ತರಲಾಗುತ್ತಿದೆ ಎಂದು ಸಹಕಾರಿ ಸಚಿವ ಎಸ್. ಟಿ ಸೋಮಶೇಖರ್ ಹೇಳಿದರು.
ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ಹಾಗೂ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕಾಯದರ್ಶಿ ಹಾಗೂ ಸಿಬ್ಬಂದಿ ಯಾವುದಾದರೂ ಅವ್ಯವಹಾರ ಮತ್ತು ಕರ್ತವ್ಯ ಲೋಪ ಎಸಗಿದಲ್ಲಿ ಕ್ರಮ ಕೈಗೊಳ್ಳಲು ಜತೆಗೆ ಒಂದು ಸಂಘದಿಂದ ಮತ್ತೊಂದು ಸಂಘಕ್ಕೆ ವರ್ಗಾಯಿಸುವ ಅಂಶಗಳು ಸೇರಿ ಇತರ ಕ್ರಮಗಳನ್ನು ಕೈಗೊಳ್ಳಲು ಈಗ ಡಿಸಿಸಿ ಬ್ಯಾಂಕ್ ಗಳಿಗೆ ಅಧಿಕಾರವಿಲ್ಲ. ಹೀಗಾಗಿ ಆಡಳಿತ ಚುರುಕುಗೊಳಿಸಲು ಹಾಗೂ ಆರ್ಥಿಕ ನಿರ್ವಹಣೆ ಯಲ್ಲಿ ನಿಗಾ ವಹಿಸಲು ಬಹು ಮುಖ್ಯವಾಗಿ ಡಿಸಿಸಿ ಬ್ಯಾಂಕುಗಳ ಆಡಳಿತ ಮಂಡಳಿ ಒತ್ತಾಯ ಹಾಗೂ ಅಭಿಪ್ರಾಯ ಮೇರೆಗೆ ಹೊಸ ಕಾಯ್ದೆ ಜಾರಿ ತರಲಾಗುತ್ತಿದೆ. ಹೊಸ ಕಾಯ್ದೆಯು ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಅಂಗೀಕಾರಗೊಂಡು ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವರು ವಿವರಣೆ ನೀಡಿದರು.
ಅದೇ ರೀತಿ ಫ್ಯಾಕ್ಸ್ ಸಿಬ್ಬಂದಿ ಗಳ ವರ್ಗಾವಣೆಗೂ ಈ ಕಾಯ್ದೆ ಅನ್ವಯವಾಗಲಿದ್ದು, ಒಟ್ಟಾರೆ ಸಹಕಾರಿ ಕ್ಷೇತ್ರ ಬಲವರ್ದನೆಗೆ 18 ಬದಲಾವಣೆ ಅಂಶಗಳೊಂದಿಗೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ನ್ನು ತಿದ್ದುಪಡಿ ಮುಖಾಂತರ ಹೊಸ ಸಹಕಾರಿ ಕಾಯ್ದೆ ಜಾರಿ ತರಲಾಗುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಸಹಕಾರಿ ಸಚಿವರು ಸ್ಪಷ್ಟಪಡಿಸಿದರು.
ಆತ್ಮ ನಿರ್ಭರ ಭಾರತ ಯೋಜನೆ ಅಡಿ ಸಹಕಾರಿ ಸಂಘಗಳಿಗೆ ಹೆಚ್ಚುವರಿ ಸಾಲ ದೊರಕಲಿದೆ ಎಂದ ಸಚಿವರು, ಎಲ್ಲ ಸಹಕಾರಿ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಬೇಕೆಂಬುದು ಚಾಲನೆಯಲ್ಲಿದೆ ಎಂದರು. ರಾಜ್ಯದ 21 ಡಿಸಿಸಿ ಬ್ಯಾಂಕ್ ಗಳಲ್ಲಿ ಕೊನೆ ಸ್ಥಾನದಲ್ಲಿರುವ ಡಿಸಿಸಿ ಬ್ಯಾಂಕ್ ನ್ನು ಮೇಲೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ 10 ಕೋ ರೂ ಷೇರು ನೀಡಲಾಗಿದೆ. ಅದೇ ರೀತಿ ಅಪೆಕ್ಸ್ ದಿಂದ 200 ಕೋ ರೂ ಸಾಲ ನೀಡಲಾಗಿದೆಯಲ್ಲದೇ ನಬಾರ್ಡ್ ದಿಂದಲೂ ಆರ್ಥಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ ಚಿದಾನಂದ ನಿಂಬಾಳ, ಪ್ರಕಾಶಕುಮಾರ ಹಾಗೂ ಆಡಳಿತ ಮಂಡಳಿ ನಿರ್ದೆಶಕರು ಹಾಜರಿದ್ದರು.