ಬೆಂಗಳೂರು: ಕೋವಿಡ್-19 ಕಾರಣದಿಂದ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಬೀದರ್ ನ 82 ವರ್ಷದ ವೃದ್ಧರ ವರದಿ ಬಂದಿದ್ದು, ಕೋವಿಡ್-19 ಸೋಂಕಿನ ಕಾರಣದಿಂದ ಅವರು ಮೃತರಾಗಿರುವುದು ದೃಢವಾಗಿದೆ.
ರಾಜ್ಯದಲ್ಲಿ ಇಂದು ಒಂಬತ್ತು ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ. ಇದರಿಂದ ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.
ತುಮಕೂರು, ವಿಜಯಪುರದಲ್ಲಿ ತಲಾ ಎರಡು ಸೋಂಕು ಪ್ರಕರಣಗಳು ದೃಢವಾಗಿದ್ದರೆ, ಬೀದರ್, ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರದಲ್ಲಿ ತಲಾ ಒಂದು ಪ್ರಕರಣಗಳು ದೃಢವಾಗಿದೆ.
ತುಮಕೂರಿನಲ್ಲಿ ಸೋಂಕಿತ ಸಂಖ್ಯೆ 535 ಮತ್ತು553ರ ಸಂಪರ್ಕದಿಂದ 40 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆಗೆ ಸೋಂಕು ತಾಗಿದೆ. ವಿಜಯಪುರದಲ್ಲಿ ಸೋಂಕಿತ ಸಂಖ್ಯೆ 221ರ ಸಂಪರ್ಕದಿಂದ 22 ವರ್ಷ ಮತ್ತು 45 ವರ್ಷದ ಇಬ್ಬರು ಪುರುಷರಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಚಿಕ್ಕಬಳ್ಳಾಪುರದಲ್ಲಿ 54 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದರೆ, ಬೆಳಗಾವಿಯ 23 ವರ್ಷದ ಯುವಕನಿಗೆ ಸೋಂಕು ತಾಗಿರುವುದು ದೃಢವಾಗಿದೆ. ಬಾಗಲಕೋಟೆಯ 45 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದರೆ, ಬೆಂಗಳೂರಿನ 32 ವರ್ಷದ ಮಹಿಳೆಗೆ ಸೋಂಕಿತ ಸಂಖ್ಯೆ 444ರ ಸಂಪರ್ಕದಿಂದ ಸೋಂಕು ತಾಗಿರುವುದು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಇದರಲ್ಲಿ 25 ಜನರು ಮೃತರಾಗಿದ್ದು, 255 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಓರ್ವ ಸೋಂಕಿತ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.