ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನದ ನಂತರ ಮತ್ತೆ 22 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 149 ಕೋವಿಡ್-19 ಪ್ರಕರಣ ದೃಢವಾಗಿದೆ.
ಮಧ್ಯಾಹ್ನದ ವರದಿಯಲ್ಲಿ 62 ಸೋಂಕು ಪ್ರಕರಣ ಹೊಂದಿದ್ದ ಮಂಡ್ಯದಲ್ಲಿ ಮತ್ತೆ ಒಂಬತ್ತು ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಕೋಟೆಯಲ್ಲಿ ಐದು ಸೋಂಕು ಪ್ರಕರಣ, ಚಿಕ್ಕಮಗಳೂರಿನಲ್ಲಿ ಮೂರು ಪ್ರಕರಣ ದೃಢವಾಗಿದೆ. ಕಲಬುರಗಿಯಲ್ಲಿ ಎರಡು, ಬೀದರ್, ರಾಯಚೂರು ಮತ್ತು ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ. ಒಟ್ಟು 543 ಜನರು ಗುಣಮುಖರಾಗಿದ್ದು, 40 ಜನರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದಾರೆ. ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಐದಕ್ಕೇರಿದೆ.
ಈ ಮೂರು ಪ್ರಕರಣಗಳು ಮುಂಬೈನಿಂದ ಬಂದವರಿಗೆ ದೃಢವಾಗಿದೆ. 7 ವರ್ಷದ ಹುಡುಗ, 10 ವರ್ಷದ ಹುಡುಗ, 17 ವರ್ಷದ ಯುವತಿಗೆ ಸೋಂಕು ಪಾಸಿಟಿವ್ ಆಗಿದೆ. ಇವರೆಲ್ಲರೂ ಜಿಲ್ಲೆಯ ಎನ್.ಆರ್.ಪುರ ಮೂಲದವರು ಎನ್ನಲಾಗಿದೆ.
ಇದುವರೆಗೂ ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಿನಲ್ಲಿ ಇಂದು ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.