Advertisement

ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರ ವಿರೋಧವಿಲ್ಲ

06:05 AM Nov 17, 2017 | Team Udayavani |

ಲಕ್ನೋ: “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿ ಸುವುದಕ್ಕೆ ಮುಸ್ಲಿಮರ ವಿರೋಧವಿಲ್ಲ. ಕೆಲವೊಮ್ಮೆ ಕೆಲವು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಕಾಣುತ್ತದೆ. ಆದರೆ, ನಮ್ಮ ಜನ, ಯುವಜನತೆ ಮತ್ತು ಎರಡೂ ಸಮುದಾಯಗಳ ನಾಯಕರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.’ಹೀಗೆಂದು ಹೇಳಿರುವುದು ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಗುರೂಜಿ. 

Advertisement

ಹಲವು ವರ್ಷಗಳಿಂದಲೂ ಹಿಂದೂ - ಮುಸ್ಲಿಮರ ನಡುವಿನ ಸಂಘ ರ್ಷದ ಬೆಂಕಿಗೆ ತುಪ್ಪ ಸುರಿಯುತ್ತಾ ಬಂದಿರುವ ಅಯೋಧ್ಯೆ ರಾಮ ಮಂದಿರ ವಿವಾದ ವನ್ನು ಪರಸ್ಪರ ಸಂಧಾನ ಮಾತು ಕತೆಯ ಮೂಲಕ ಬಗೆ ಹರಿಸಲು ಹೊರಟಿ ರುವ ರವಿ ಶಂಕರ್‌ ಗುರೂಜಿ ಗುರುವಾರ ಅಯೋಧ್ಯೆಯಲ್ಲಿ ಆಡಿರುವ ಮಾತಿದು.

ವಿವಿಧ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಶ್ರೀ ಶ್ರೀ ಗುರುವಾರ ಮಾತನಾಡಿ, “ಸದ್ಯದ ವಾತಾವರಣವು ಧನಾತ್ಮಕವಾಗಿದೆ. ಜನರು ಈ ವಿವಾದದಿಂದ ಮುಕ್ತರಾಗಲು ಬಯಸುತ್ತಿದ್ದಾರೆ. ಎರಡೂ ಸಮುದಾಯಗಳು ಸದ್ಭಾವನೆಯಿಂದಾಗಿ ಒಂದಾಗಬೇಕಾದ ಅಗತ್ಯವಿದೆ. ಇದು ಸುಲಭದ ಮಾತಲ್ಲ. ಆದರೆ, ಇದರಲ್ಲಿ ನಾವು ಯಶಸ್ವಿಯಾದರೆ ಇಡೀ ಜಗತ್ತಿಗೇ ಮಾದರಿ ಯಾಗುತ್ತೇವೆ. ರಾಜಕೀಯ ಮತ್ತು ಕಾನೂನನ್ನು ಇದರಿಂದ ಹೊರಗಿಡಬೇಕು. ನನ್ನ ಮಾತು ಕೆಲವರಿಗೆ ರುಚಿಸಲಿಕ್ಕಿಲ್ಲ. ಆದರೆ, ಬಹುತೇಕ ಮುಸ್ಲಿಮರು ರಾಮಮಂದಿರ ನಿರ್ಮಾಣ  ವನ್ನು ವಿರೋಧಿಸುತ್ತಿಲ್ಲ’ ಎಂದಿದ್ದಾರೆ.

ಗುರುವಾರ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನ್ಯಾಸ್‌ ಮುಖ್ಯಸ್ಥ ನೃತ್ಯ ಗೋಪಾಲ್‌ ದಾಸ್‌, ರಾಮ್‌ವಿಲಾಸ್‌ ವೇದಾಂತಿ, ದಿಗಂಬರ ಅಖಾಡದ ಮಹಾಂತ ಸುರೇಶ್‌ ದಾಸ್‌, ಮಹಾಂತ ಗ್ಯಾನ್‌ದಾಸ್‌, ವಿವಾದದ ಅರ್ಜಿ ದಾರರಾದ ಇಕ್ಬಾಲ್‌ ಅನ್ಸಾರಿ, ಹಾಜಿ ಮೆಹಬೂಬ್‌ ಮತ್ತಿತರರನ್ನು ಗುರೂಜಿ ಭೇಟಿಯಾಗಿದ್ದಾರೆ.

ಬಹಳ ವಿಳಂಬವಾಯ್ತು ಎಂದ ಯೋಗಿ: ಇದೇ ವೇಳೆ, ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, “ರಾಮಮಂದಿರ ವಿವಾದದ ಕುರಿತು ಸಂಧಾನ ಮಾತುಕತೆ ಪ್ರಕ್ರಿಯೆಯು ತುಂಬಾ ವಿಳಂಬ ವಾಯಿತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ವಿವಾದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಕಾಯು ವುದೇ ಒಳ್ಳೆಯದು. ಆದರೂ, ಸಂಧಾನಕ್ಕೆ ಯಾರಾದರೂ ಯತ್ನಿಸಿದರೆ ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ. 

Advertisement

ಬುಧವಾರವಷ್ಟೇ ಶ್ರೀ ಶ್ರೀ ಅವರು ಸಿಎಂ ಯೋಗಿ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದರು. ಆ ಬಗ್ಗೆ ಪ್ರಸ್ತಾಪಿಸಿದ ಯೋಗಿ, ನಾನು ಆಧ್ಯಾತ್ಮಿಕ ಗುರು ಶ್ರೀ ಶ್ರೀ ಅವರೊಂದಿಗೆ ದೇಗುಲದ ವಿಚಾರವನ್ನು ಮಾತನಾಡಿಲ್ಲ ಎಂದಿದ್ದಾರೆ.

20 ಕೋಟಿ ರೂ. ಆಮಿಷದ ಆರೋಪ!
ಇದೇ ವೇಳೆ, ಪ್ರಕರಣದಿಂದ ಹಿಂದೆ ಸರಿಯಲು ಸುನ್ನಿ ಮುಸ್ಲಿಂ ವಕ್ಫ್ ಬೋರ್ಡ್‌ಗೆ 20 ಕೋಟಿ ರೂ.ಗಳ ಆಮಿಷವೊಡ್ಡಲಾಗಿದೆ ಎಂದು ನಿರ್ಮೋಹಿ ಅಖಾಡದ ಮಹಾಂತ ದಿನೇಂದ್ರ ದಾಸ್‌ ಆರೋಪಿಸಿದ್ದಾರೆ. ಆದರೆ, ವಕ್ಫ್ ಬೋರ್ಡ್‌ನ ಹಾಜಿ ಮೆಹಬೂಬ್‌ ಅವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಇನ್ನೊಂದೆಡೆ, ರಾಮಮಂದಿರದ ಹೆಸರಲ್ಲಿ ವಿಶ್ವ ಹಿಂದೂ ಪರಿಷತ್‌ 1,400 ಕೋಟಿ ರೂ.ಗಳನ್ನು ಪಡೆದಿದೆ ಎಂದು ಮಹಾಂತ ಶ್ರೀ ಸೀತಾರಾಂ ದಾಸ್‌ ಆರೋಪಿಸಿದ್ದಾರೆ. ಶ್ರೀ ಶ್ರೀ ಅಯೋಧ್ಯೆ ಭೇಟಿಯ ಅವಧಿಯಲ್ಲೇ ಇಂತಹ ಆರೋಪಗಳು ಕೇಳಿಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಅಯೋಧ್ಯೆ ವಿಚಾರದಲ್ಲಿ ಸಂಧಾನಕ್ಕೆ ಹೋಗುವ ಬದಲು ಶ್ರೀ ಶ್ರೀ ಅವರು ಯಮುನಾ ನದಿಯ ಸುಧಾರಣೆಗಾಗಿ ಶ್ರಮಿಸಿದ್ದರೆ ಚೆನ್ನಾಗಿರುತ್ತಿತ್ತು.
– ರಣದೀಪ್‌ ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

ಸಂಧಾನ ನಡೆಸಲು ಶ್ರೀ ಶ್ರೀ ರವಿಶಂಕರ್‌ ಯಾರು? ಅವರು ಎನ್‌ಜಿಒ ನಡೆಸಿ ಕೊಂಡು, ವಿದೇಶಿ ದೇಣಿಗೆ ಪಡೆಯುತ್ತಿರಲಿ. ಅವರು ಸಾಕಷ್ಟು ಸಂಪತ್ತು ಮಾಡಿಕೊಂಡಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳಲು ರಾಮಮಂದಿರ ವಿಚಾರ ಕೈಗೆತ್ತಿಕೊಂಡಿದ್ದಾರೆ ಎಂದನಿಸುತ್ತಿದೆ.
– ರಾಮ್‌ ವಿಲಾಸ್‌ ವೇದಾಂತಿ, 
ಬಿಜೆಪಿ ಮಾಜಿ ಸಂಸದ

ಸಂಧಾನ ಮಾತುಕತೆ ಹೆಸರಲ್ಲಿ ತಮಾಷೆ ನಡೆಯುತ್ತಿದೆ. ಶ್ರೀ ಶ್ರೀ ಅವರು ಮೊದಲಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಹಾಕಿರುವ ದಂಡದ ಮೊತ್ತವನ್ನು ಪಾವತಿಸಲಿ.
– ಅಸಾದುದ್ದೀನ್‌ ಒವೈಸಿ, ಎಐಎಂಐಎಂ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next