ಎಚ್.ಡಿ.ಕೋಟೆ: ನಾವು ಸತ್ತರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಕೋವಿಡ್ ಲಸಿಕೆ ಪಡೆಯುವುದಿಲ್ಲ ಎಂದು ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾಮಕ್ಕೆ ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ, ಲಸಿಕೆ ಪಡೆಯಲು ಮನವಿ ಮಾಡಿದಾಗ, ಗ್ರಾಮಸ್ಥರು ಈ ರೀತಿ ಪ್ರತಿಕ್ರಿಯಿಸಿದರು.
“ನೀವು ಪಿಂಚಣಿ ವೇತನ, ಪಡಿತರ ಮತ್ತಿತರ ಸೌಲಭ್ಯ ನಿರಾಕರಿಸಿದರೂ ನಾವು ಲಸಿಕೆ ಹಾಕಿಸಿಕೊಳ್ಳಲ್ಲ’ ಎಂದು ಹಠ ಹಿಡಿದರು. ಹೆಬ್ಬಲಗುಪ್ಪೆ ಗ್ರಾಮವು ಎಚ್.ಡಿ.ಕೋಟೆ ತಾಲೂಕಿನಿಂದ ಕೇವಲ 7-8 ಕಿ.ಮೀ. ಅಂತರದಲ್ಲಿ ಇದೆ.
ಈ ಹಳ್ಳಿಯಲ್ಲಿ ಸುಮಾರು 450 ಮಂದಿ ಲಸಿಕೆ ಪಡೆಯಲು ಅರ್ಹರಿದ್ದು, ಇನ್ನೂ 70 ಮಂದಿ ಲಸಿಕೆಯನ್ನೇ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನರಗುಂದ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ತಾಪಂ ಇಒ ಚಂದ್ರಕಾಂತ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಬ್ಬಲಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗಳಿಗೆ ತೆರಳಿ ಲಸಿಕೆ ಪಡೆಯಲು ಮನವೊಲಿಸುವ ಪ್ರಯತ್ನ ಮಾಡಿದರು.
ಈ ವೇಳೆ ಸಾಕಷ್ಟು ಮಂದಿ ಮನೆ ಒಳಗೆ ಸೇರಿಕೊಂಡು ಬಾಗಿಲು ಮುಚ್ಚಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಈ ವೇಳೆ ಬಾಗಿಲು ತೆರೆಯಲು ಸ್ವತಃ ಅಧಿಕಾರಿಗಳೇ ಪ್ರತ್ನಿಸಿದರೂ ಜನರು ಬಾಗಿಲು ತೆರೆಯಲೇ ಇಲ್ಲ. ಬಳಿಕ ಕೆಲವರನ್ನು ಮನವೊಲಿಸಿ ಹೊರಗೆ ಕರೆತರಲಾಯಿತು. ಕಡೆಗೆ ಗ್ರಾಮದಲ್ಲಿ ಐವರು ಮಾತ್ರ ಲಸಿಕೆ ಪಡೆದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಗ್ರಾಮಸ್ಥರು ವಿವಿಧ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.