Advertisement

ವೈಯಕ್ತಿಕ ವಿಷಯಕ್ಕೆ ಎಂದಿಗೂ ರಾಜಕೀಯ ಮಾಡಿಲ್ಲ

07:50 PM Mar 06, 2018 | Team Udayavani |

ಹೊಸಪೇಟೆ: ನನ್ನ ಹತ್ತು ವರ್ಷಗಳ ರಾಜಕೀಯ ಜೀವನದಲ್ಲಿ ವೈಯಕ್ತಿಕ ವಿಷಯಗಳಿಗಾಗಿ ನಾನು ಎಂದಿಗೂ ರಾಜಕೀಯ ಮಾಡಿಲ್ಲ. ಪವಿತ್ರ ಭಗವದ್ಗೀತೆ, ಬೈಬಲ್‌, ಕುರಾನ್‌ ಗ್ರಂಥದ ಮೇಲೆ ಪ್ರಮಾಣ ಮಾಡಿ ಹೇಳುವೆ ಎಂದು ಮಾಜಿ ಶಾಸಕ ಆನಂದಸಿಂಗ್‌ ಹೇಳಿದರು. ನಗರದಲ್ಲಿ ಸೋಮವಾರ ಆಯೋಜಿದ್ದ ಆನಂದಲಕ್ಷ್ಮೀ ಆಟೋ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸ್ವಾರ್ಥ ರಾಜಕಾರಣಿಯಾಗಿದ್ದರೆ, ನಾನು ಪಕ್ಷದ ತತ್ವ ಸಿದ್ಧಾಂತ ಗಾಳಿಗೆ ತೂರಿ ಬಿಜೆಪಿ ಪಕ್ಷದಲ್ಲಿ ಇರುತ್ತಿದ್ದೆ. ಜಾತ್ಯತೀತ ನಿಲುವು ಹೊಂದಿರುವ ನನಗೆ ಮಾನವ ಧರ್ಮದ ವಿರುದ್ಧವಾದ ಪಕ್ಷದಲ್ಲಿ ಇರಲು ಮನಸ್ಸು ಬರಲಿಲ್ಲ. ಜಾತಿ, ಧರ್ಮ ಒಡೆಯುವ ಪಕ್ಷದಲ್ಲಿ ಇರಬಾರದು ಎಂದು ನಾನು ತೀರ್ಮಾನಿಸಿ ಪಕ್ಷದಿಂದ ಹೊರ ಬಂದೆ. ಬಿಜೆಪಿ ಏಕೆ ಬಿಟ್ಟ ಹೋದರಿ? ನೀವೂ ಪಕ್ಷ ದ್ರೋಹಿ ಎಂದು ಶೋಭಾ ಕರಂದಾಜ್ಞೆ ಅವರು, ಇತ್ತೀಚಿಗೆ ನಗರದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು. ಶೋಭಾ ಮೇಡಂ ಕೂಡ ಬಿಜೆಪಿ ಪಕ್ಷವನ್ನು ಮುಗಿಸಲು ಪಕ್ಷ ಬಿಟ್ಟು ಹೋದಾಗ ಪಕ್ಷ ದ್ರೋಹವಾಗಲಿಲ್ವ ಎಂದು ಪ್ರಶ್ನೆ ಮಾಡಿದ ಅವರು, ರಾಜ್ಯದ 6 ಕೋಟಿ ಜನರಿಗೆ ಉತ್ತರ ನೀಡಿಬೇಕಿದೆ. ಬಿಜೆಪಿಯಲ್ಲಿದ್ದಾಗ ನನ್ನನ್ನೂ ಶೋಭಾ ಕರಂದಾಜ್ಞೆಯಾಗಲಿ, ಯಡಿಯೂರಪ್ಪ ಸೇರಿ ಯಾರೊಬ್ಬರೂ ನನ್ನನ್ನು ಸಚಿವರನ್ನಾಗಿ ಮಾಡಲಿಲ್ಲ. ಇಡೀ ಜಿಲ್ಲೆಯಲ್ಲಿ ಬಿಜೆಪಿಯಿಂದ ನಾನೊಬ್ಬನೇ ಗೆದ್ದಿದ್ದೆ. ಭಗವಂತನೇ ಸಚಿವ ಸ್ಥಾನ ಕರುಣಿಸಿದ ಎಂದು ಮಾರ್ಮಿಕವಾಗಿ ನುಡಿದರು.

Advertisement

ಸ್ಥಳೀಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಸ್ಥಗಿತವಾದ ವಿಚಾರಕ್ಕೆ ಸಂಬಂಧಪಟ್ಟಂತೆ ರೈತರು, ಬಿಜೆಪಿ ನಾಯಕರ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಕಾರ್ಖಾನೆ ಮುಚ್ಚಿ ನಾನು ವೈಯಕ್ತಿಕವಾಗಿ ರಿಯಲ್‌ ಎಸ್ಟೇಟ್‌ ದಂಧೆ ಮಾಡಲು ನಾನು ಹೋಗಿಲ್ಲ. ದಾಖಲೆ ಇದ್ದರೆ ಬಹಿರಂಗಪಡಿಸಲಿ. ಕಾಂಗ್ರೆಸ್‌ನಲ್ಲಿ ನಾನೊಬ್ಬ ಸಾಮಾನ್ಯ ಸದಸ್ಯನಾಗಿದ್ದೇನೆ. ನಾನು ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್‌ಗೆ ಸೇರಿದ್ದೇನೆ. ಇವತ್ತು ಬಿಜೆಪಿಗೆ ಮಾಜಿ ಶಾಸಕ ಗವಿಯಪ್ಪ ಸೇರಿದ್ದಾರೆ. ಅವರಿಗೆ ಟಿಕೆಟ್‌ ಕೂಡ ಖಚಿತವಾಗಿದೆ. ಗವಿಯಪ್ಪ ಮತ್ತೆ ಕಾಂಗ್ರೆಸ್‌ಗೆ ಬರಲಿ, ಅವರಿಗಾಗಿ ನಾನು ಕೆಲಸ ಮಾಡುವೆ ಎಂದು ಭರವಸೆ ನೀಡಿದರು. 

ಶ್ರೀಜಗದ್ದುರು ಕೊಟ್ಟೂರುಸ್ವಾಮಿ ಮಠದ ಡಾ| ಸಂಗನ ಬಸವ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ರತನ್‌ ಸಿಂಗ್‌, ರೈತ ಸಂಘದ ಅಧ್ಯಕ್ಷ ಗೋಸಲ ಭರಪ್ಪ, ಮಾಜಿ ಹೂಡಾ ಅಧ್ಯಕ್ಷ ಆರ್‌.ಕೊಟ್ರೇಶ್‌, ಎಲ್‌. ಸಿದ್ದನಗೌಡ ಇದ್ದರು. ಲಕ್ಕಿ ಡಿಪ್‌ ಮೂಲಕ ಮೂವರು ಆಟೋ ಚಾಲಕರನ್ನು ಆಯ್ಕೆ ಮಾಡಿ ಆಟೋಗಳನ್ನು ವಿತರಿಸಲಾಯಿತು.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಕೂಡಲೇ ನನ್ನ ಮೇಲಿನ ಪ್ರಕರಣಗಳನ್ನು ಕೆದುಕುವ ಹುನ್ನಾರ ನಡೆಯುತ್ತಿದ್ದು, ನಾನು
ಯಾವುದಕ್ಕೂ ಹೆದರುವನಲ್ಲ. ಸಿಬಿಐ, ಇಡಿ, ಆದಾಯ ತೆರಿಗೆ ಮುಂತಾದ ಇಲಾಖೆಗಳಲ್ಲಿ ನನ್ನ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ.

 ಮಾಜಿ ಶಾಸಕ ಆನಂದಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next