ಹೈಸ್ಕೂಲ್, ಪಿಯುಸಿ ಮುಗಿಸಿ ಡಿಗ್ರಿಗಾಗಿ, ಹುಟ್ಟಿದ ಊರು, ಆಡಿ ಬೆಳೆದ ಗೆಳೆಯರ ಬಿಟ್ಟು ಉನ್ನತ ವ್ಯಾಸಂಗಕ್ಕಾಗಿ ದೊಡ್ಡ ದೊಡ್ಡ ಕಾಲೇಜ್- ವಿಶ್ವವಿದ್ಯಾಲಯಗಳಿಗೆ ಸೇರಿ ಹೊಸ ಹೊಸ ಗೆಳೆಯರೊಂದಿಗೆ ಲೈಫ್ ಎಂಜಾಯ್ ಮಾಡುತ್ತೇವೆ. ಆಗ ನಮಗೆ ಬಾಲ್ಯದಿಂದ ಹಿಡಿದು ಪ್ರ„ಮರಿಯವರೆಗೆ ಜೊತೆಗಿದ್ದ ನಮ್ಮ ಚಡ್ಡಿ ದೋಸ್ತುಗಳ ನೆನಪೇ ಆಗುವುದಿಲ್ಲ.
ಬಡತನ ಮತ್ತು ಅಕ್ಷರಜಾnನದ ಅಭಾವದಿಂದ ಓದಲಾಗದೇ, ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಹಿಂದೆ ಸರಿದು, ನಮ್ಮಂತೆ ದಡ್ಡರಾಗದೇ, ಓದಿ ಒಳ್ಳೆ ಕೆಲಸ ತಗೋ ಎನ್ನುವ ದೊಡ್ಡ ಗುಣದ ದೋಸ್ತುಗಳನ್ನು ಕೆಲವೊಂದು ಸಲ ನಾವು ಮರೆತೆವೇನೋ.
ಅಂಗಳದಲ್ಲಿ ಗೋಲಿ. ಬುಗುರಿ. ಚಿನ್ನಿದಾಂಡು ಆಡುತ್ತಾ, ಕದ್ದು ತಂದ ಹಣ್ಣನ್ನು ಹಂಚಿಕೊಂಡು ತಿಂದವರು ನಾವು. ಶಾಲೆಗೆ ಹೋಗುವಾಗ ಯುದ್ಧಭೂಮಿಗೆ ಹೋಗುವ ಸೈನಿಕರಂತೆ ಜೊತೆಯಾಗಿ ಹೋಗುತ್ತಿದ್ದುದೆಲ್ಲ ಈಗ ನೆನಪುಗಳು. ನೆನೆದರೆ ಕಣ್ಣಂಚಲಿ ಕಣ್ಣೀರ ಮುತ್ತುಗಳು ಜಾರುತ್ತವೆ. ಕ್ಲಾಸ್ ಬಂಕ್ ಮಾಡಿ ಸಿನಿಮಾಗೆ ಹೋಗುವ ಈ ಕಾಲಕ್ಕಿಂತ ಮಧ್ಯಾಹ್ನ ಶಾಲೆ ತಪ್ಪಿಸಿ ಬೇರೆಯವರ ತೋಟದಲ್ಲಿ ಎಳನೀರು ಕುಡಿದು, ಮಾವಿನಕಾಯಿ ತಿಂದು, ಮೇಷ್ಟ್ರ ಕೈಯಲ್ಲಿ ಸಿಕ್ಕಾಗ ಒಬ್ಬರಿಗೊಬ್ಬರು ತಮ್ಮ ಗುಟ್ಟನ್ನು ಬಿಟ್ಟು ಕೊಡದ ದೋಸ್ತುಗಳು ನಿಜವಾಗು ಹೃದಯವಂತರೇ. ಹೊಸ ಬೈಕ್ ತಗೊಂಡು ನಾ ಮುಂದೆ ತಾ ಮುಂದೆ ಎಂದು ಹೋಗುವ ಕಾಲೇಜು ಗೆಳೆಯರಿಗಿಂತ, ಸೈಕಲ್ ಹಿಂದೆ ಕೈಹಿಡಿದು ಬೀಳದಂತೆ ಬ್ಯಾಲೆನ್ಸ್ ಮಾಡಿ ಸೈಕಲ್ ಹೊಡೆಯಲು ಕಲಿಸಿ ತಾವು ತಳ್ಳಿದವರು ಚಡ್ಡಿ ದೋಸ್ತುಗಳು. ಬಿದ್ದು ಗಾಯವಾದಾಗ ತಮ್ಮ ಉಗುಳನ್ನೇ ಹಚ್ಚಿ ಚಿಕಿತ್ಸೆ ನೀಡುತ್ತಿದ್ದ ಗೆಳೆಯ ದೇವರಿಗಿಂತ ದೊಡ್ಡವನು ಎಂದೆನಿಸುತ್ತಿತ್ತು.
ಡಿಗ್ರಿಗೆ ಬಂದಾಗ ಪಿಯುಸಿ ಫ್ರೆಂಡ್ಸ್ ಬಗ್ಗೆ, ಪೀಜಿಗೆ ಬಂದಾಗ ಡಿಗ್ರಿ ಫ್ರೆಂಡ್ಸ್ ಬಗ್ಗೆ ಹೇಳಿಕೊಳ್ಳುವ ನಮಗೆ ಚಡ್ಡಿ ದೋಸ್ತುಗಳ ಅರಿವೇ ಇರುವುದಿಲ್ಲ. ಅವರು ಮಾತ್ರ ತಮ್ಮ ಸಂಬಂಧಿಕರಲ್ಲಿ ಗೆಳೆಯರಲ್ಲಿ ನಮ್ಮ ಬಗ್ಗೆ ತಮಗಿಂತ ಹೆಚ್ಚಾಗಿ ಹೇಳುತ್ತಾರೆ. ಅಂತಹ ಹೃದಯ ವೈಶಾಲ್ಯತೆಯ ಮುಗ್ಧ ಮನಸ್ಸಿನ ನಿಷ್ಕಲ್ಮಶವಾದ ಚಡ್ಡಿ ದೋಸ್ತುಗಳು ಕಂಡಾಗೊಮ್ಮೆ ಕಣ್ಣರಳಿಸಿ ಒಂದು ಸಣ್ಣ ಮುಗುಳ್ನಗೆ ಬೀರಿದರೂ ಸಾಕು; ಸಾಯುವವರೆಗೆ ನಮ್ಮ ಗೆಳೆತನದ ನೆನಪು ಇಟ್ಟುಕೊಂಡಿರುತ್ತಾರೆ .ಅವರು ಬಯಸುವುದು ನಮ್ಮ ಸಂಪತ್ತನ್ನಲ್ಲ, ನಮ್ಮ ಗೆಳೆತನವನ್ನು. ಹಾಗಾಗಿ ಫ್ರೆಂಡ್ಸ್, ಯಾವತ್ತೂ ನಿಮ್ಮ ಬಾಲ್ಯದ ಗೆಳೆಯರನ್ನು ಎಂದೂ ಕಡೆಗಣಿಸದಿರಿ. ಹುಟ್ಟಿದ ಊರಿನಲ್ಲಿ ಆಡಿ ಬೆಳೆದ ಜಾಗಗಳಲ್ಲಿ ಒಮ್ಮೆಯಾದರೂ ಅವರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ.
– ಕಾಶಿನಾಥಗೌಡ.ಶಿ.ಪಾಟೀಲ, ಗೊಟಗೋಡಿ