ಹೊಸದಿಲ್ಲಿ : ‘ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಎಂದೂ ಪ್ರೀತಿ-ಪ್ರೇಮಕ್ಕೆ ಬಲಿ ಬೀಳದಿರಿ’ ಎಂದು ಪಾಕಿಸ್ಥಾನದ ಹುಡುಗಿಯನ್ನು ಫೇಸ್ ಬುಕ್‌ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂದ ಶಂಕೆಯಲ್ಲಿ ಜೈಲು ಪಾಲಾಗಿ ಆರು ವರ್ಷ ಕಾರಾಗೃಹ ವಾಸ ಅನುಭವಿಸಿ ಇದೀಗ ಭಾರತಕ್ಕೆ ಮರಳಿರುವ ಭಾರತೀಯ ಪ್ರಜೆ, 33ರ ಹರೆಯದ ಸಾಫ್ಟ್ ವೇರ್ ಇಂಜಿನಿಯರ್, ಹಮೀದ್ ನಿಹಾಲ್ ಅನ್ಸಾರಿ ಯುವ ಜನರಿಗೆ ಕಿವಿ ಮಾತು ಹೇಳಿದ್ದಾರೆ.
ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸ್ವಾತಂತ್ರ್ಯದ ಅಲೆಯನ್ನು ಅನುಭವಿಸುತ್ತಾ ನರಕ ದರ್ಶನ ಮಾಡಿ ಬಂದಿರುವ ಹಮೀದ್ ನಿಹಾಲ್ ಅನ್ಸಾರಿಯ ಕಥೆ ಎಲ್ಲ ಯುವ ಜನರಿಗೆ ಒಂದು ಪಾಠವಾಗಿದೆ.
ಎರಡು ದಿನಗಳ ಹಿಂದೆ ಪಾಕ್ ಸರಕಾರದಿಂದ ಬಿಡುಗಡೆಗೊಂಡು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿ ಮುಂಬಯಿ ಯಲ್ಲಿನ ತನ್ನ ನಿವಾಸದಲ್ಲಿ ಸುದ್ದಿ ಗಾರರೊಂದಿಗೆ ಇಂದು ಗುರುವಾರ ಮಾತನಾಡಿದ ಅನ್ಸಾರಿ, ತನ್ನ ಫೇಸ್ ಬುಕ್ ಪ್ರಣಯ ಪ್ರಸಂಗ ಪ್ರಮಾದದಿಂದ ಕಲಿತ ಮೂರು ಬಹುದೊಡ್ಡ ಪಾಠಗಳು ಮತ್ತು ಅತ್ಯಂತ ಕಹಿ ಅನುಭವವವನ್ನು ಭಾರವಾದ ಹೃದಯದಿಂದ ವಿವರಿಸಿದರು.
‘ನಾನು ಕಲಿತ ಪಾಠವೆಂದರೆ – 1. ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಯಾವತ್ತೂ ಪ್ರೀತಿ-ಪ್ರೇಮದ ಬಲೆಗೆ ಬೀಳದಿರುವ ಎಚ್ಚರಿಕೆಯನ್ನು ತೋರಬೇಕು; 2. ಹೆತ್ತವರ ಬಳಿ ಯಾವತ್ತೂ ಸುಳ್ಳು ಹೇಳಬಾರದು; 3. ಯಾವುದೇ ಸ್ಥಳಕ್ಕೆ ಹೋಗುವುದಕ್ಕೆ ಅಕ್ರಮ ವಿಧಾನ/ಮಾರ್ಗ ಬಳಸಬಾರದು’ ಎಂದು ಅನ್ಸಾರಿ ಯುವ ಜನರಿಗಾಗಿ ಹೇಳಿದರು.
‘ನಿಮ್ಮ ಹೆತ್ತವರಿಂದ ಏನನ್ನೂ ಮುಚ್ಚಿಡಬೇಡಿ; ನಿಮ್ಮ ಕಷ್ಟಕಾಲಕ್ಕೆ ಕೊನೆಗೂ ನಿಮ್ಮ ಜತೆಗೆ ಇರುವವರು ನಿಮ್ಮ ಹೆತ್ತವರು ಮಾತ್ರ ಎನ್ನುವುದನ್ನು ಮರೆಯಬೇಡಿ; ವಿದೇಶಕ್ಕೆ, ಅಥವಾ ಯಾವುದೇ ಸ್ಥಳಕ್ಕೆ ಹೋಗಲು ಅಕ್ರಮ ವಿಧಾನ/ಮಾರ್ಗ ಬಳಸಬೇಡಿ’ ಎಂದು ಅನ್ಸಾರಿ ಹೇಳಿದರು.
ಅನ್ಸಾರಿ 2012ರಲ್ಲಿ ತನ್ನ ಪಾಕ್ ಫೇಸ್ ಬುಕ್ ಪ್ರಿಯತಮೆಯನ್ನು ಕಾಣಲು ಅಫ್ಘಾನಿಸ್ಥಾನವಾಗಿ ಪಾಕಿಸ್ಥಾನಕ್ಕೆ ಅಕ್ರಮವಾಗಿ ಹೋಗಿದ್ದರು. ಅಲ್ಲಿ ಪಾಕ್ ಅಧಿಕಾರಿಗಳ ಕೈಗೆ ಸಿಕ್ಕಿ ಜೈಲು ಪಾಲಾಗಿದ್ದರು. 2015ರಲ್ಲಿ ಅವರಿಗೆ ಪಾಕ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಭಾರತ ಮತ್ತು ಪಾಕಿಸ್ಥಾನದ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರ ಅವಿರತ ಪ್ರಯತ್ನದ ಫಲವಾಗಿ ಅನ್ಸಾರಿಗೆ ಭಾರತಕ್ಕೆ ಮರಳಲು ಸಾಧ್ಯವಾಯಿತು. ಸಾಫ್ಟ್ ವೇರ್ ಇಂಜಿನಿಯರ್ ಅನ್ಸಾರಿ ವಿರುದ್ಧ ಪಾಕ್ ಅಧಿಕಾರಿಗಳು ಬೇಹುಗಾರಿಕೆಯ ಆರೋಪವನ್ನು ಹೊರಿಸಿದ್ದರು.