ತಿರುವನಂತಪುರ: ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪಕ್ಕೆ ತಾವು ಬೆಂಬಲ ಸೂಚಿಸಿದ್ದೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತಿರಸ್ಕರಿಸಿದ್ದಾರೆ. ಈ ಬಗ್ಗೆ ತಿರುವನಂತಪುರದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇರಳದಲ್ಲಿ ಇರುವ ಜೆಡಿಎಸ್ ಘಟಕ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಈಗಾಗಲೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ, ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಾವು ಬೆಂಬಲ ಸೂಚಿಸಿದ್ದೆ ಎಂಬ ಹೇಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.
2006ರಲ್ಲಿ ಕೂಡ ಕರ್ನಾಟಕದಲ್ಲಿ ಬಿಜೆಪಿಗೆ ಜತೆಗೆ ದೇವೇಗೌಡರು ಮೈತ್ರಿಯ ಹಸ್ತ ಚಾಚಿದ್ದರು. ತಮ್ಮ ಪುತ್ರನಿಗೆ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೂ ಮರೆತು ಕೈಜೋಡಿಸಿದ್ದರು ಎಂದು ಕೇರಳ ಸಿಎಂ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಜೆಡಿಎಸ್ ಕೂಡ ಮಾಜಿ ಪ್ರಧಾನಿಗಳ ಪ್ರಸ್ತಾಪಕ್ಕೆ ಅಸಮ್ಮತಿ ವ್ಯಕ್ತಪಡಿಸಿ, ನಮ್ಮ ಮೈತ್ರಿ ಕೂಟದಲ್ಲಿಯೇ ಮುಂದುವರಿಯುವ ಮಾತುಗಳನ್ನಾಡಿದೆ ಎಂದು ವಿಜಯನ್ ಹೇಳಿದ್ದಾರೆ.
ಸಿಪಿಎಂ ಮತ್ತು ಬಿಜೆಪಿ ನಡುವೆ ನಿಕಟ ಸಂಬಂಧವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳ ಸಿಎಂ “ಕೇರಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನಿಜವಾದ ಹಿಂಬಾಗಿಲ ಮೈತ್ರಿ ಇದೆ’ ಎಂದು ಟೀಸಿದ್ದಾರೆ.
ಕೇರಳ ಜೆಡಿಎಸ್ ಘಟಕ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಜತೆಗೂಡಿ ನಾನು ದೇವೇಗೌಡರನ್ನು ಭೇಟಿಯಾಗಿದ್ದೆ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪಕ್ಕೆ ನಮ್ಮ ಆಕ್ಷೇಪ ತಿಳಿಸಿದ್ದೇವೆ. ಎಡಪಕ್ಷಗಳ ಜತೆಗೆ ಇರುವ ಮೈತ್ರಿ ಮುಂದುವರಿಸುವ ಬಗ್ಗೆ ಒತ್ತಾಯ ಮಾಡಿದ್ದೇವೆ.
ಕೃಷ್ಣನ್ ಕುಟ್ಟಿ, ಕೇರಳ ಸಚಿವ