Advertisement
ನಟನೆಯ ಗಂಧಗಾಳಿ ಗೊತ್ತಿಲ್ಲದ ನಿರ್ಮಾಪಕರ ಮಗಳಿಗೆ ರಿಹರ್ಸಲ್ ಮೇಲೆ ರಿಹರ್ಸಲ್ ನಡೆಯತ್ತೆ. ಕೊನೆಗೂ ಸಿನಿಮಾದ ಮುಹೂರ್ತದ ದಿನ ಬರುತ್ತದೆ. ನಿರ್ದೇಶಕ ನಿಟ್ಟುಸಿರು ಬಿಡುತ್ತಾನೆ. ಅಷ್ಟರಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ನನ್ ಮಗಳೇ ಹೀರೋಯಿನ್’ ಚಿತ್ರ ನೋಡಿ. ಹೆಸರಿಗೆ ತಕ್ಕಂತೆ ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ.
Related Articles
Advertisement
ಅಂದಹಾಗೆ, ಈ ಸಿನಿಮಾ ನೋಡಿದಾಗ ನಿಮಗೆ ತಮಿಳಿನ “ಉಪ್ಪು ಕರುವಾಡು’ ಚಿತ್ರದ ನೆರಳು ಕಾಣಿಸಬಹುದು. ಅದೇನೇ ಆದರೂ ನಿರ್ದೇಶಕರು ಇಡೀ ಸಿನಿಮಾವನ್ನು ಲವಲವಿಕೆಯಿಂದ ಕಟ್ಟಿಕೊಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಇಲ್ಲಿ ಹೆಚ್ಚು ಪಾತ್ರಗಳಿಲ್ಲ, ಕೆಲವೇ ಪಾತ್ರಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಬರುವ ಗಡ್ಡಪ್ಪ ದೃಶ್ಯದ ಅವಶ್ಯಕತೆ ಸಿನಿಮಾಕ್ಕೆ ಇರಲಿಲ್ಲ. ಅದು ಸಿನಿಮಾದಿಂದ ಹೊರತಾಗಿ ಕಾಣುತ್ತದೆ.
ಬಹುತೇಕ ಕಥೆ ನಡೆಯೋದು ಮಂಗಳೂರಿನಲ್ಲಿ. ಜೊತೆಗೆ ಮಂಗಳೂರಿನ ಅಣ್ಣಪ್ಪ ರೈ ಎಂಬ ಪಾತ್ರ ಬೆಂಗಳೂರು ಕನ್ನಡ ಮಾತನಾಡುತ್ತದೆ. ಈ ಬಗ್ಗೆಯೂ ನಿರ್ದೇಶಕರು ಗಮನ ಹರಿಸಬೇಕಿತ್ತು.ಮುಖ್ಯವಾಗಿ ಸಿನಿಮಾದ ಆರಂಭದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆದರೆ, ಕ್ಲೈಮ್ಯಾಕ್ಸ್ ವೇಳೆಗೆ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ತೆರೆಎಳೆದಿದ್ದಾರೆ. ಆ ಮಟ್ಟಿಗೆ ಇದು ಗೊಂದಲಮುಕ್ತ ಸಿನಿಮಾ ಎನ್ನಬಹುದು.
ನಾಯಕ ಸಂಚಾರಿ ವಿಜಯ್‌ಗೆ ಈ ಪಾತ್ರ ಹೊಸದು. ಆದರೂ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಬ್ಬ ಯುವ ನಿರ್ದೇಶಕನ ಕನಸು, ತಲ್ಲಣ, ಅನಿವಾರ್ಯತೆಯ ಪಾತ್ರದಲ್ಲಿ ವಿಜಯ್ ಇಷ್ಟವಾಗುತ್ತಾರೆ. ನಾಯಕಿ ದೀಪಿಕಾ ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ. ಅಮೃತಾ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬಿ.ಸಿ.ಪಾಟೀಲ್, ತಬಲಾ ನಾಣಿ, ವಿಜಯ್ ಚೆಂಡೂರು, ಪವನ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ.
ಚಿತ್ರ: ನನ್ ಮಗಳೇ ಹೀರೋಯಿನ್ನಿರ್ಮಾಣ: ಪಟೇಲ್ ಆರ್. ಅನ್ನದಾನಪ್ಪ- ಎಸ್.ಬಿ.ಮೋಹನ್ ಕುಮಾರ್
ನಿರ್ದೇಶನ: ಬಾಹುಬಲಿ
ತಾರಾಗಣ: ಸಂಚಾರಿ ವಿಜಯ್, ದೀಪಿಕಾ, ಅಮೃತಾ ರಾವ್, ಬಿ.ಸಿ.ಪಾಟೀಲ್, ತಬಲಾ ನಾಣಿ, ವಿಜಯ್ ಚೆಂಡೂರು, ಪವನ್, ಬುಲೆಟ್ ಪ್ರಕಾಶ್ ಮತ್ತಿತರರು. * ರವಿಪ್ರಕಾಶ್ ರೈ