Advertisement

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

04:52 PM Jun 21, 2021 | Team Udayavani |

ಬೆಂಗಳೂರು: ಕೋವಿಡ್ ಕಾಲಘಟ್ಟದಲ್ಲಿ ಶಾಲಾ ಕಾಲೇಜು ತರಗತಿಗಳು ಆನ್‍ಲೈನ್ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇಂಟರ್ನಟ್ ನೆಟ್-ವರ್ಕ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೊಳಗಾಗಿದ್ದು, ಈ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Advertisement

ಗ್ರಾಮೀಣ ಪ್ರದೇಶದಲ್ಲಿ ನೆಟ್-ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್-ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನೆಟ್ ವರ್ಕ್ ಸಮಸ್ಯೆಗೆ ಕೊನೆ ಹಾಡಲು ಆಪರೇಟರ್‌ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕೆಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಇಂದಿನ ಸಂದರ್ಭವನ್ನು ಗಮನಿಸಿದರೆ ಈ ಕೋವಿಡ್ ಕಾಲಘಟ್ಟದಲ್ಲಿ ಆನ್ ಲೈನ್‌ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೋವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯದಾರಿ ಇಲ್ಲವಾದ್ದರಿಂದ ನಾವು ಅಂತರ್ಜಾಲ ನೆಟ್ ವರ್ಕ್ ಸಮಸ್ಯೆಯನ್ನು ಪರಿರಿಸಿಕೊಳ್ಳಲೇಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೊಬೈಲ್ ನೆಟ್-ವರ್ಕ್ ಸಿಗದೇ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಕಲಿಕಾ ಪ್ರಯತ್ನದಲ್ಲಿ ಮೊಬೈಲ್ ನೆಟ್ ವರ್ಕ್ ದೊರೆಯದೇ ಗುಡ್ಡದ ಮೇಲೆ ಮಳೆ ಹನಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಹಿಡಿದು ಹತಾಶಳಾಗಿ ಕುಳಿತ ದೃಶ್ಯವೊಂದನ್ನು ಉಲ್ಲೇಖಿಸಿರುವ ಸಚಿವರು, ಆನ್-ಲೈನ್ ಶಿಕ್ಷಣ ಅನಿವಾರ್ಯವಾಗುತ್ತಿರುವ ಈ ದಿನಮಾನಗಳಲ್ಲಿ ವಿಶೇಷ ನೀತಿನಿರೂಪಣೆ ಮಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೆಟ್ ವರ್ಕ್ ಆಪರೇಟರ್ ಗಳ ಸಭೆಯನ್ನು ಶೀಘ್ರವೇ ಆಯೋಜಿಸಿ ಸಮರೋಪಾದಿಯಲ್ಲಿ ನೆಟ್-ವರ್ಕ್ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next