Advertisement

ಅನ್ನಭಾಗ್ಯಕ್ಕೆ ನೆಟ್‌ವರ್ಕ್‌ ಪ್ರಾಬ್ಲಿಂ

06:05 AM Feb 08, 2018 | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿಯ “ಅನ್ನಭಾಗ್ಯ’ ಯೋಜನೆ ಯಡಿ ಶೇ.20 ರಿಂದ 25ರಷ್ಟು ಬಿಪಿಎಲ್‌ ಕುಟುಂಬಗಳಿಗೆ ಪಡಿತರವೇ ಸಿಗುತ್ತಿಲ್ಲ! ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಹಾಗೂ ಸರ್ವರ್‌ ಸಮಸ್ಯೆಯಿಂದ ಬಿಪಿಎಲ್‌ ಕಾರ್ಡ್‌ ಇದ್ದರೂ ಪಡಿತರ ಸಿಗದೇ ಪರದಾಡುವಂತಾಗಿದೆ. ಪಡಿತರ ಪಡೆಯಬೇಕಾದರೆ ಕುಟುಂಬದಲ್ಲಿ ಸದಸ್ಯರೊಬ್ಬರು ಬಯೋಮೆಟ್ರಿಕ್‌ (ಬೆರಳಚ್ಚು) ನೀಡುವುದು ಕಡ್ಡಾಯ. ಆದರೆ, ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಜತೆಗೆ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್‌ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಡಿತರವೂ ಕೈಸೇರುತ್ತಿಲ್ಲ.

Advertisement

ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 1.08 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಪಡಿತರ ವಿತರಿಸಲಾಗುತ್ತಿದ್ದು, ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ರಾಜ್ಯಾದ್ಯಂತ ಶೇ.20 ರಿಂದ 25ರಷ್ಟು ಕುಟುಂಬಗಳಿಗೆ ಪಡಿತರ ವಿತರಿಸಲು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಇಂಟರ್‌ನೆಟ್‌ ಹಾಗೂ ಸರ್ವರ್‌ ಸಮಸ್ಯೆ ಪ್ರಮುಖ ಕಾರಣವಾಗಿದೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿ ಮಾಲೀಕರು ಅವಲತ್ತುಕೊಳ್ಳುತ್ತಾರೆ.

ಈ ಹಿಂದೆ ಪಡಿತರದಾರರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತಿತ್ತು. ನಂತರ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆ ವ್ಯವಸ್ಥೆಯಡಿ ದುರುಪಯೋಗದ ದೂರುಗಳು ಕೇಳಿ ಬಂದಿದ್ದರಿಂದ ಬಯೋಮೆಟ್ರಿಕ್‌ ಕಡ್ಡಾಯಗೊಳಿಸಲಾಗಿತ್ತು.

ಬೆರಳಚ್ಚು ಸಾಧ್ಯವಾಗುತ್ತಿಲ್ಲ: ಗ್ರಾಮೀಣ ಭಾಗದಲ್ಲಿ ಬಯೋಮೆಟ್ರಿಕ್‌ನಲ್ಲಿ ತಂಬ್‌ ಪ್ರಿಂಟ್‌ ಪಡೆಯಲು ಕೈ ಚರ್ಮಗಳು ಒರಟಾಗಿರುವುದೂ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ನಿರಂತರ ಕೆಲಸ ಮಾಡುವ ರೈತರು ಹಾಗೂ ಕೂಲಿಗಳ ಕೈಗಳು ಒರಟಾಗಿರುತ್ತವೆ. ಅಲ್ಲದೆ, ರೇಖೆಗಳೂ ಸವೆದಿರುತ್ತವೆ. ಇದರಿಂದಾಗಿ ಬಯೋಮೆಟ್ರಿಕ್‌ ಯಂತ್ರ ತಂಬ್‌ ಪ್ರಿಂಟ್‌ ಸ್ವೀಕರಿಸುತ್ತಲೇ ಇಲ್ಲ ಎನ್ನುವ ದೂರುಗಳೂ ಇವೆ. ಹೀಗಾಗಿ ಸಮಸ್ಯೆ ಎದುರಾದಾಗಲೆಲ್ಲ ಪಡಿತರ ಪಡೆಯಲು ಆಹಾರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲೇಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಕಾಯುವ ಸ್ಥಿತಿ ಅನಿವಾರ್ಯ: ಜನಸಂಖ್ಯೆಗೆ ಅನುಗುಣವಾಗಿ 400-500 ಜನರಿಗೆ ಒಂದರಂತೆ ನ್ಯಾಯಬೆಲೆ ಅಂಗಡಿಯಿದ್ದು, ರಾಜ್ಯ ದಲ್ಲಿ ಒಟ್ಟು 22,503 ನ್ಯಾಯಬೆಲೆ ಅಂಗಡಿಗಳಿವೆ. ಆದರೆ, ನೆಟ್‌ವರ್ಕ್‌ ಸಮಸ್ಯೆ ಯಿಂದಾಗಿ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ ಪಡೆಯುವ ವ್ಯವಸ್ಥೆಯಿಲ್ಲ. 20-30 ಹಳ್ಳಿಗಳಿಗೆ ಸಮೀಪದ ಕೇಂದ್ರವೊಂದರಲ್ಲಿ ಬಯೋಮೆಟ್ರಿಕ್‌ ಕೇಂದ್ರ ತೆರೆಯಲಾಗಿದೆ. ಹೀಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಹೊಸ ವ್ಯವಸ್ಥೆ ಜಾರಿಗೊಳಿಸಿದಾಗ ಕೆಲವೊಂದು ಗೊಂದಲಗಳಾಗುವುದು ಸಾಮಾನ್ಯ. ಆದರೆ, ಇಂಟರ್‌ನೆಟ್‌, ಸರ್ವರ್‌ ಸಮಸ್ಯೆಯಿರುವ ಕಡೆಗಳಲ್ಲಿ ಬಯೋಮೆಟ್ರಿಕ್‌ ಪಡೆಯದೇ ಪಡಿತರ ನೀಡುವಂತೆ ತಿಳಿಸಲಾಗಿದೆ. ಆದರೆ, ಕೆಲವರು ವಿನಾಕಾರಣ ಸಮಸ್ಯೆ ನೆಪದಲ್ಲಿ ಜನರನ್ನು ಕಾಯಿಸುತ್ತಿದ್ದಾರೆ ಎನ್ನುವ ಆರೋಪ ಇದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
–  ಯು.ಟಿ.ಖಾದರ್‌, ಸಚಿವ

ಪಡಿತರ ಚೀಟಿಯಲ್ಲಿರುವ ಒಬ್ಬರು ಸದಸ್ಯರಿಂದ ಕಡ್ಡಾಯವಾಗಿ ಬಯೋಮೆಟ್ರಿಕ್‌ ಪಡೆದು ಪಡಿತರ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ, ಬೆರಳಚ್ಚು ಪಡೆಯಲು ಕೆಲವು ಸಮಸ್ಯೆಗಳಿವೆ. ಇದರಿಂದಾಗಿ ಬಯೋಮೆಟ್ರಿಕ್‌ ಪಡೆದು ಪಡಿತರ ನೀಡುವ ವ್ಯವಸ್ಥೆ ಜಾರಿಯಾದಾಗಿನಿಂದ ಶೇ.20ರಷ್ಟು ಕುಟುಂಬಗಳಿಗೆ ಪಡಿತರವೇ ಸಿಕ್ಕಿಲ್ಲ.
– ಟಿ.ಕೃಷ್ಣಪ್ಪ, ಅಧ್ಯಕ್ಷ, ಸರ್ಕಾರಿ ನ್ಯಾಯಬೆಲೆ
ಅಂಗಡಿ ಮಾಲೀಕರ ಸಂಘ

– ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next