Advertisement

ಅಡವಿ ಮಕ್ಕಳ ಕಲಿಕೆಗೆ ನೆಟ್‌ವರ್ಕ್‌ ಅಡಚಣೆ

08:12 PM Oct 05, 2021 | Team Udayavani |

ಬೆಳ್ತಂಗಡಿ: ನಾವಿಂದು 5ಜಿ ತಂತ್ರಜ್ಞಾನದತ್ತ ಮುನ್ನುಗುತ್ತಿದ್ದೇವೆ ಯಾದರೂ ಅನೇಕ ಹಳ್ಳಿಗಳು ಇಂದಿಗೂ ತಂತ್ರಜ್ಞಾನ ಹೊರತಾದ ಮೂಲ ಸೌಕರ್ಯವನ್ನೇ ಸಂಪೂರ್ಣ ಹೊಂದಿಲ್ಲ. ಇದಕ್ಕೆ ಬೆಳ್ತಂಗಡಿ ತಾಲೂಕಿನ ಅರಣ್ಯದಂಚಿನ ಪುಟ್ಟ ಪುಟ್ಟ ಗ್ರಾಮಗಳೇ ಸಾಕ್ಷಿ.

Advertisement

ಬಾಂಜಾರು ಮಲೆಯಲ್ಲಿ ಕೆ.ಜಿ.ಯಿಂದ ಪದವಿ ವರೆಗಿನ 20ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಚಾರ್ಮಾಡಿ ಶಾಲೆಗೆ ಬರುವವರು 18 ಕಿ.ಮೀ. ದೂರ ಕ್ರಮಿಸಬೇಕು. ಕಾಲ್ನಡಿಗೆ ಇಲ್ಲವೇ ಒಂದು ಮಗುವಿಗೆ ತಲಾ 200 ರೂ.ನಂತೆ ಕನಿಷ್ಠ 11 ಮಂದಿಗೆ 1,200 ರೂ.ಗಳಿಂದ 1,500 ರೂ. ನೀಡಿ ಜೀಪು ಕಾದಿರಿಸಬೇಕು. ಪ್ರಸಕ್ತ ಆನ್‌ಲೈನ್‌ ತರಗತಿ ನಡೆಯುತ್ತಿರುವುದರಿಂದ ಮಕ್ಕಳಿಗೆ ನೆಟ್‌ವರ್ಕ್‌ನದ್ದೇ ಚಿಂತೆಯಾಗಿದೆ. ಈ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣಕ್ಕಾಗಿ ಅಡವಿ ದಾರಿಯಲ್ಲಿ ಸಾಗಿ ಬೆಟ್ಟದ ತುದಿಯಲ್ಲಿ ಟೆಂಟ್‌ ನಿರ್ಮಿಸಿ ನೆಟ್‌ವರ್ಕ್‌ ಶೋಧಿಸಿ ಪಾಠ ಪ್ರವಚನ ಕೇಳುತ್ತಿದ್ದಾರೆ.

ಮನೆಯಿಂದ 2 ಕೀ.ಮೀ. ದೂರದ ಕಲ್ಲರ್ಬಿಯಲ್ಲಿ ಟೆಂಟ್‌ ನಿರ್ಮಿಸಿದ್ದು, ಬೆಳಗ್ಗೆ 8.30ಕ್ಕೆ ಅಲ್ಲಿಗೆ ತೆರಳಿ ತರಗತಿಯ ಪಾಠಗಳನ್ನು ಆಲಿಸಿ ಮರಳುವುದು ದಿನನಿತ್ಯದ ಕೆಲಸವಾಗಿದೆ.

ಚಾರ್ಮಾಡಿ ಕನ್ನಡ ಮಾಧ್ಯಮ ಶಾಲೆ, ಮುಂಡಾಜೆ ಪ್ರೌಢ ಶಾಲೆ ಸೇರಿದಂತೆ ಆಂಗ್ಲ ಮಾಧ್ಯಮ ಕಲಿಯುವ ನಾಲ್ವರು ಮಕ್ಕಳು, ಕಾಲೇಜು ವಿದ್ಯಾರ್ಥಿನಿ ಸೇರಿ 20 ಮಂದಿ ತಂಡದಲ್ಲಿದ್ದಾರೆ. ಎಲ್‌ಎಲ್‌ಬಿ ವ್ಯಾಸಂಗ ಮಾಡಿರುವ ಸ್ಥಳೀಯರಾದ ಮಲ್ಲಿಕಾ ಬಿ. ಮಕ್ಕಳಿಗೆ ಹತ್ತಾರು ತಿಂಗಳು ಟ್ಯೂಶನ್‌ ನೀಡಿ ಶಿಕ್ಷಣಕ್ಕೆ ನೆರವಾಗಿದ್ದಾರೆ.

ಇದನ್ನೂ ಓದಿ:ಈ ಬಾರಿಯೂ ದಾಂಡೇಲಿಯಲ್ಲಿ ದಾಂಡಿಯಾ ನಡೆಯುವುದು ಡೌಟ್

Advertisement

ಕಾಡಾನೆಯಿಂದ ಪಾರು
ಎರಡು ತಿಂಗಳ ಹಿಂದೆ ಟೆಂಟ್‌ ಪ್ರದೇಶಕ್ಕೆ ಕಾಡಾನೆ ದಾಳಿ ನಡೆಸಲು ಮುಂದಾಗಿತ್ತು. ಓಡಿ ತಪ್ಪಿಸಿಕೊಳ್ಳುವ ವೇಳೆ ಹೆಚ್ಚಿನ ಮಕ್ಕಳು ಬಿದ್ದು ಗಾಯ ಮಾಡಿಕೊಂಡಿದ್ದರು. ಆದರೂ ಶಿಕ್ಷಣದ ಅನಿವಾರ್ಯದಿಂದಾಗಿ ಮತ್ತೆ ಟೆಂಟ್‌ ಸಹವಾಸ ಮುಂದುವರಿಸಿದ್ದಾರೆ. ದೇವಗಿರಿಯಲ್ಲಿ ನೆಟ್‌ವರ್ಕ್‌ ಸೌಲಭ್ಯ ಕಲ್ಪಿಸಿದಲ್ಲಿ ನಾಲ್ಕಾರು ಹಳ್ಳಿಗಳಿಗೆ ಪ್ರಯೋಜನ ವಾಗುತ್ತಿತ್ತು ಎನ್ನುವುದು ಸ್ಥಳೀಯರ ಆಗ್ರಹ. ಶಿಕ್ಷಣ ಮಾತ್ರವಲ್ಲ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಇದೇ ದುಸ್ಥಿತಿ. ತಾಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಈ ಪ್ರದೇಶವು ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ 9 ಕಿ.ಮೀ. ದೂರದಲ್ಲಿದೆ. 48 ಮಲೆಕುಡಿಯ ಸಮುದಾಯದ ಕುಟುಂಬಗಳು ಇಲ್ಲಿವೆ. ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ಕುಸಿ ದರೆ ಇವರಿಗೆ ದಿಗ್ಬಂಧನ. ಗ್ರಾ.ಪಂ.ಗೆ, ಸರಕಾರಿ ಆಸ್ಪತ್ರೆಗೆ ಬರಲು 24 ಕಿ.ಮೀ. ಕ್ರಮಿಸ ಬೇಕು. ಕೊರೊನಾ ಲಸಿಕೆಯನ್ನು ಡಿಸಿ ಮುತುವರ್ಜಿ ಯಿಂದ ಸ್ಥಳದಲ್ಲೇ ಕೊಡಿಸ ಲಾಗಿತ್ತು.

ಜಮೀನು ಪ್ರಕರಣ ಕೋರ್ಟ್‌ನಲ್ಲಿ
ಸರಕಾರ, ಖಾಸಗಿ ಎಸ್ಟೇಟ್‌ ಮಧ್ಯೆ 40 ವರ್ಷಗಳಿಂದ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿ ಜಮೀನಿನ ತಕರಾರು ವಾದ ನಡೆಯುತ್ತಿದೆ. 1982ರಲ್ಲಿ ಅಂದಿನ ಡಿಸಿ ಭೇಟಿ ನೀಡುತ್ತಾರೆ ಎಂದು ಡಿಸಿ ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು 2016ರಲ್ಲಿ ಎ.ಬಿ. ಇಬ್ರಾಹಿಂ. ಸಂಸದರು, ಸಚಿವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದಾದ ಮೇಲೆ ಅವರಿದ್ದೇನು ಪ್ರಯೋಜನ? ಬಡ ಮಕ್ಕಳ ಶಿಕ್ಷಣಕ್ಕೆ ಅವರ ಕೊಡುಗೆಯಾದರೂ ಏನು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಇತ್ತ ಗಮನ ಹರಿಸಲಿ
ಬಾಂಜಾರು ಮಲೆ ಸೇರಿದಂತೆ ಬೆಳ್ತಂಗಡಿ ತಾ| ಎಲ್ಲ ಗ್ರಾಮೀಣ ಪ್ರದೇಶಗಳ ಮಕ್ಕಳ ಪರಿಸ್ಥಿತಿ ಒಂದೇ ಎಂಬಂತಾಗಿದೆ. ಜೀವದ ಹಂಗುತೊರೆದು ಶಿಕ್ಷಣಕ್ಕಾಗಿ ಗುಡ್ಡಗಾಡು ಅಲೆಯುಂತಾಗಿದೆ. ಸಂಸದರು, ಸಚಿವರು ಇತ್ತ ಗಮನ ಹರಿಸಲಿ.
-ಮಲ್ಲಿಕಾ ಬಿ.,ಬಾಂಜಾರು ಮಲೆ ನಿವಾಸಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next