ನೋಡಿದಷ್ಟು ದೂರಕ್ಕೂ ತಿಳಿ ನೀಲ ನೀಲ ಸಮುದ್ರ. ಕಣ್ಣಳತೆಗೂ ಸಿಗದ, ಕೂಗಳತೆಗೂ ದಕ್ಕದ ದೂರ ದೂರ ಕಾಣುವ ನೀಲಿ ಸಮುದ್ರ. ಎತ್ತ ನೋಡಿದರೂ, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಅಲ್ಲಿ ಕಾಣುವುದು ಬರೀ ನೀರು, ನೀರು. ಚಲಿಸುವ ದೋಣಿಯಲ್ಲಿ ಮೌನಿಯಾಗಿ ಕುಳಿತು ಸಮುದ್ರವನ್ನು ಎದೆಯಾಳಕ್ಕೆ ಇಳಿಸಿಕೊಳ್ಳುವುದು ಮಾತ್ರ ಪ್ರವಾಸಿಗನಿಗೆ ಇರುವ ಅವಕಾಶ. ಮುಖ ಮೇಲೆತ್ತಿದರೆ ನೀಲಾಕಾಶ. ನೇರ ಮಾಡಿದರೆ ಯಾವ ದಿಕ್ಕಿಗೆ ತಿರುಗಿದರೂ ಕಾಣುವುದು ನೀಲಿ ಸಮುದ್ರ ಮಾತ್ರ. ಮನುಷ್ಯನ ಕುಬ್ಜತನ ಅರಿವಿಗೆ ಬರುವುದು ಸಮುದ್ರ ಪಯಣದಲ್ಲಿ ಎಂಬಂತೆ ಸಮುದ್ರ ರಾಜನ ಶಾಲ ಹರವು ತಿಳಿಯಲು ಒಮ್ಮೆ ನೇತ್ರಾಣಿಗೆ ಬರಬೇಕು.
ಮುರುಡೇಶ್ವರದಿಂದ 90 ನಿಮಿಷ ಸಮುದ್ರದಲ್ಲಿ ಪಯಣಿಸಿದರೆ ಮೊದಲ ಕಣ್ಣೋಟಕ್ಕೆ ಈಕೆಯ ದರ್ಶನವಾದೀತು. ನೇತ್ರಾಣಿಯ ಸುತ್ತ ಸ್ಪಟಿಕದಂತೆ ತಿಳಿ ನೀರು. ನೀರಲ್ಲಿ ಕಾಣುವ ಆಳ ಸಮುದ್ರದಲ್ಲಿ ಹವಳದ ಬಂಡೆಗಳು ಕಂಗೊಳಿಸುತ್ತವೆ. ನೀಲಿ ಸಮುದ್ರದೊಳಗಿನ ಜೀವ ಜಗತ್ತು ಕಾಣುವುದೇ ಒಂದು ದಿವ್ಯ ಅನುಭವವಾದರೆ, ನೇತ್ರಾಣಿಯೆಂಬ ನುಡುಗಡ್ಡೆಯನ್ನು ಸುತ್ತಿದರೆ ಸಿಗುವ ಅನುಭವ ಭಿನ್ನವೋ ಭಿನ್ನ. ಚಾರಣದ ಅನುಭವದ ಜೊತೆ ಕಾಡು ಮತ್ತು ಅಲ್ಲಿ ಕಾಣ ಸಿಗುವ ಸ್ವಿಫ್ಟ್ ಎಂಬ ಹಕ್ಕಿಯ ದರ್ಶನ, ನಿಸರ್ಗದ ರುದ್ರರಮಣೀಯ ನೋಟ ಮುದಗೊಳಿಸದೇ ಇರಲಾರದು. ಭಾರತೀಯ ಸೇನಾ ಪಡೆಯ ಪ್ರಾಯೋಗಿಕ ನೆಲೆಯೂ ಆಗಿರುವ ನೇತ್ರಾಣಿ ಮತ್ತು ಅದರ ಪಕ್ಕವೇ ನೇತ್ರಾಣಿಯ ಸಹೋದರಿಯಂತಿರುವ ಪುಟ್ಟ ನಡುಗಡ್ಡೆಯಲ್ಲಿ ಸಿಡಿಯದ ಶೆಲ್‌ಗಳು ಸಹ ಇವೆ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದ ಮೀನುಗಾರರು ಪೂಜಿಸುವ ದೇವರುಗಳು ಸಹ ನೇತ್ರಾಣಿಯ ನೆತ್ತಿಯ ಮೇಲೆ ಬೀಡು ಬಿಟ್ಟಿವೆ. ಕುರಿ, ಮೇಕೆ ಮತ್ತು ಕೋಳಿಗಳು ಸಹ ನೇತ್ರಾಣಿ ನಡುಗಡ್ಡೆಯ ಅರಣ್ಯದಲ್ಲಿ ಕಾಣಸಿಗುವುದುಂಟು.
ಸಮುದ್ರದೊಳಗಣ ನಡುಗಡ್ಡೆಯನ್ನು ಫಿಜನ್ ಐಲ್ಯಾಂಡ್ ಅಂತಲೂ ಕರೆಯಲಾಗುತ್ತಿತ್ತು. ಅಷ್ಟರಮಟ್ಟಿಗೆ ಇಲ್ಲಿ ಪಾರಿವಾಳಗಳು ನೆಲೆಸಿದ್ದವು. ಕಾಲ ಕ್ರಮೇಣ ಪಾರಿವಾಳಗಳು ವಾಸಸ್ಥಾನ ಬದಲಿಸಿದವು. ಖಾಲಿಯಾದ ಆ ಜಾಗಕ್ಕೆ ಬಂದು ಕೂತದ್ದು ಆಸ್ಟ್ರೇಲಿಯಾದ ಸ್ವಿಫ್ಟ್ ಎಂಬ ಹಕ್ಕಿಗಳು. ಈ ಐಲ್ಯಾಂಡ್, ದೇವಸ್ಥಾನ ಕೂಡ. ಮೀನುಗಾರರು ತಮ್ಮ ಇಷ್ಟದೇವರುಗಳನ್ನು ಇಲ್ಲಿ ಸ್ಥಾಪಿಸಿಕೊಂಡಿದ್ದಾರೆ. ವರ್ಷಕ್ಕೆ ಒಮ್ಮೆ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಹರಕೆಯ ಹೆಸರಲ್ಲಿ ಕುರಿ, ಕೋಳಿ ಬಲಿ ಇಲ್ಲ. ಕೋಳಿ ಕುರಿಯನ್ನು ಬಲಿಕೊಡುವ ಬದಲಿಗೆ ಹರಕೆಯ ರೂಪದಲ್ಲಿ ಜೀವಂತವಾಗಿ ಕೋಳಿಗಳನ್ನು ಬಿಡುವುದು ವಾಡಿಕೆ. ಹಿಂದೂ, ಕ್ರಿಶ್ವಿಯನ್ ಮತ್ತು ಮುಸ್ಲಿಂ ಸಂಕೇತದ ದೇವರುಗಳು ಇಲ್ಲಿ ಜೊತೆ ಜೊತೆಯಾಗಿ ಇರುವುದು ಮತ್ತು ಸೌಹಾರ್ದತೆಯನ್ನು ನೇತ್ರಾಣಿಯ ನೆತ್ತಿಯ ಮೇಲೆ ಕಾಪಾಡಿಕೊಂಡಿರುವುದು ವಿಶೇಷ.
ಸಮರ ತಾಣ
ನೇತ್ರಾಣಿ ನಡುಗಡ್ಡೆ ಭಾರತಿಯ ನೌಕಾಪಡೆಯ ಸಮರಭ್ಯಾಸದ ತಾಣವು ಹೌದು. ಸ್ವಾತಂತ್ರ್ಯಾನಂತರ ಗೋವಾ ಮತ್ತು ಕೊಚ್ಚಿಯ ನೌಕಾನೆಲೆಯ ಸಮರ ನೌಕೆಗಳು ವರ್ಷದಲ್ಲಿ ಎರಡು ಬಾರಿ ನೌಕೆಗಳಿಂದ ನಡುಗಡ್ಡೆಯನ್ನು ಗುರಿಯಾಗಿಸಿಕೊಂಡು ಬಾಂಬ್ ಮತ್ತು ಕ್ಷಿಪಣಿ, ಶೆಲ್ ದಾಳಿಯನ್ನು ಪ್ರಯೋಗಾತ್ಮಕವಾಗಿ ಮಾಡುತ್ತಾ ಬಂದಿವೆ. ಇದು ನೇತ್ರಾಣಿ ಹಾಗೂ ಅದರ ಪಕ್ಕದ ಪುಟ್ಟ ನಡುಗಡ್ಡೆಯ ಮೇಲೆ ಸಹ ನಡೆಯುತ್ತಿದೆ. ಪುಟ್ಟ ನಡುಗಡ್ಡೆ ಕಲ್ಲುಬಂಡೆಯಿಂದ ಕೂಡಿದ್ದು, ಅಲ್ಲಿ ಸಸ್ಯ ಸಂಪತ್ತು ಇಲ್ಲ. ಹಾಗಾಗಿ ಕಲ್ಲು ಬಂಡೆಯ ನಡುಗಡ್ಡೆಯನ್ನೇ ಕೇಂದ್ರವಾಗಿರಿಸಿ ಕೊಂಡು ಸಮರಾಭ್ಯಾಸ ನಡೆಯುತ್ತಿದೆ. ಜೊತೆಗೆ ನೇತ್ರಾಣಿ ಈಗ ಜಲಸಾಹಸಿಗರ ತಾಣವೂ ಹೌದು. ಸ್ಕೂಬಾ ಡೈವಿಂಗ್‌ನ್ನು ಅಧಿಕೃತವಾಗಿ 2017ರಿಂದ ಜಿಲ್ಲಾಡಳಿತ ಆರಂಭಿಸಿದೆ. ಅನುಭವಿ ಸ್ಕೂಬಾ ತರಬೇತಿ ಸಂಸ್ಥೆಗಳು ಆಸಕ್ತ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಮಾಡಿಸುತ್ತವೆ. 45ಕ್ಕೂ ಹೆಚ್ಚು ಜಾತಿಯ, ಅಳಿವಿನಂಚಿನಲ್ಲಿರುವ ಸಮುದ್ರ ಜೀವಿಗಳ ಅಡಗು ತಾಣ ನೇತ್ರಾಣಿ.
ಕಹಿ ಘಟನೆ
1980ರ ದಶಕ. ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾಪಡೆಯ ಗೋವಾ ಸೆಕ್ಟರ್‌ನವರು ಶೆಲ್ ದಾಳಿ ಸಮರಾಭ್ಯಾಸ ನಡೆಸಿ ನಾಲ್ಕಾರು ದಿನಗಳಾಗಿದ್ದವು. ನಾಲ್ಕಾರು ತಲೆ ಸಿಡಿಯದ ಶೆಲ್‌ಗಳು ನೇತ್ರಾಣಿಯ ದ್ವೀಪದಲ್ಲಿ ಉಳಿದುಕೊಂಡಿದ್ದವು. ಈ ಸಂದರ್ಭದಲ್ಲಿ ಹೊನ್ನಾವರದ ಮೀನುಗಾರರು ನೇತ್ರಾಣಿಯಲ್ಲಿನ ದೇವರ ಪೂಜೆಗೆ ತೆರಳಿ, ವಿಶ್ರಾಂತಿ ಪಡೆಯಲು ಹೋದವರು ಕುತೂಹಲಕ್ಕೆ ತಾಮ್ರದ ಆವರಣದಿಂದ ಕೂಡಿದ ಶೆಲ್‌ಗಳನ್ನು ಓಪನ್ ಮಾಡುವ ಸಾಹಸಕ್ಕೆ ಇಳಿದರು. ಆಗ ಶೆಲ್ ಸಿಡಿದು 9 ಜನ ಮೀನುಗಾರರು ಮೃತಪಟ್ಟರು. ಈ ಕಹಿ ಘಟನೆಯ ನಂತರ ಸಿಡಿಯದ ಶೆಲ್‌ಗಳನ್ನು ಮುಟ್ಟುವ ಸಾಹಸಕ್ಕೆ ಮೀನುಗಾರರಾಗಲಿ, ಪ್ರವಾಸಿಗರಾಗಲಿ ಹೋಗುವುದಿಲ್ಲ. ನೇತ್ರಾಣಿಯಲ್ಲಿ ಅವು ಬಿದ್ದ ಸ್ಥಳದಲ್ಲೇ ಈಗಲೂ ಬಿದ್ದುಕೊಂಡಿವೆ.
ಹೇಗೆ ಹೋಗೋದು?
ಹೃದಯಾದಾಕಾರದಲ್ಲಿರುವ ನೇತ್ರಾಣಿ ದ್ವೀಪ ಕಾರವಾರದಿಂದ 130 ಕಿ.ಮೀ. ಮುರುಡೇಶ್ವರದಿಂದ ಹತ್ತು ನಾಟಿಕಲ್ ಮೈಲು (18 ಕಿ.ಮೀ.) ದೂರದಲ್ಲಿದೆ. ಮುರುಡೇಶ್ವರದಿಂದ 90 ನಿಮಿಷ ಸಮುದ್ರದಲ್ಲಿ ಬೋಟ್ ಮೂಲಕ ಪಯಣಿಸಬೇಕು. ನೇತ್ರಾಣಿ ಪರಿಸರ ಪ್ರಿಯರಿಗೆ, ಜೀವ ವೈವಿಧ್ಯ ಅಧ್ಯಯನಕಾರರಿಗೆ, ಚಾರಣಿಗರಿಗೆ, ಸ್ಕೂಬಾ ಡೈವಿಂಗ್ ಮಾಡುವವರಿಗೆ, ಮೀನುಗಾರರಿಗೆ, ಹಕ್ಕಿಗಳಿಗೆ, ಭಾರತೀಯ ನೌಕಾನೆಲೆ ಯೋಧರಿಗೆ ಬಲು ಪ್ರಿಯವಾದ ತಾಣ. ಈ ಎಲ್ಲರೂ ತಮಗೆ ಬೇಕಾದಂತೆ ನೇತ್ರಾಣಿಯನ್ನು ಬಳಸಿಕೊಂಡಿದ್ದಾರೆ. ಇಷ್ಟೆಲ್ಲಾ ಬಳಕೆಯ ನಂತರವೂ ನೇತ್ರಾಣಿ ತನ್ನ ಸಹಜ ಸೌಂದರ್ಯವನ್ನು, ಮಹತ್ವವನ್ನು ಕಳೆದುಕೊಂಡಿಲ್ಲ.
ನೇತ್ರಾಣಿ ಬದುಕುತ್ತದೆಯೇ?
ಪರಿಸರ ಪ್ರಿಯರನ್ನು ಹೀಗೆ ಕೇಳಿದರೆ ಮುಂದಿನ ಜನಾಂಗಕ್ಕೆ ಇದು ದಕ್ಕುವುದಿಲ್ಲ ಅಂತ ಖುಲ್ಲಂ ಖುಲ್ಲ ಹೇಳಿಯಾರು. ಈ ಹೇಳಿಕೆಯ ಹಿಂದೆ ಹಿಂಡು, ಹಿಂಡು ಕಾರಣಗಳು ಹರಿಯುತ್ತಿವೆ.
ಸುಮಾರು 64 ಎಕರೆ ವಿಸ್ತಾರದ ಈ ನೇತ್ರಾಣಿ ಈ ತನಕ ಬದುಕಿದ್ದೇ ಹೆಚ್ಚು. ನೌಕಾ ನೆಲೆಯ ತಾಲೀಮು ತಾಣವಾದ ಮೇಲೆ ಅಸಂಖ್ಯಾತ ಜೀವ ವೈವಿಧ್ಯಗಳು ಬಲಿಯಾದದ್ದು ಉಂಟು. ಇದು ಜಗತ್ತಿಗೆ ಗೊತ್ತಾದದ್ದೇ 2003ರಲ್ಲಿ.
“15 ವರ್ಷದ ಹಿಂದೆ ಬೆರಗು ಪಡುವಷ್ಟು ದಟ್ಟ ಜೀವ ವೈವಿಧ್ಯವಿತ್ತು. ಸಿಕ್ಕಾಪಟ್ಟೆ ಕಲರ್ ಫಿಶ್ ಇದ್ದವು. ಎಡಿಬಲ್ ನೆಸ್ಟ್ ಸಿಫ್ಟ್ಲೆಸ್ ಹಕ್ಕಿಗಳು. ಇವು ಹಳೇ ಚಿಮಣಿ, ಬ್ರಿಜ್ ಕೆಳಗೆ, ಮಣ್ಣಲ್ಲಿ ಒಣಗಿನ ಹುಲ್ಲು ಬಳಸಿ ಗೂಡು ಕಟ್ಟುತ್ತವೆ. ಅದಕ್ಕೆ ತಿನ್ನೋ ಗೂಡು ಎಂದು ಕರೆಯುತ್ತಾರೆ. ಚೀನಾದಲ್ಲಿ ಇದಕ್ಕೆ ಬಹಳ ಬೇಡಿ ಇದೆ. ಕೆ.ಜಿಗೆ 10-15ಸಾವಿರ ರೇಟಿದೆ. ಈ ಕಾರಣಕ್ಕೆ ಕದ್ದು ಮಾರ್ತಾರೆ. ಗುಡ್ಡದ ತುಂಬ ಇಂಥ ಸಾವಿರಾರು ಗೂಡುಗಳಿವೆ. ಆಮೇಲೆ ಬಿಳಿ ಕತ್ತಿನ ಸಮುದ್ರ ಹದ್ದಿತ್ತು. ಪಾರವಾಳಗಳದ್ದು ನೂರಾರು ಗೂಡು. ಒಂದೇ ಗುಂಡು ಹಾರಿದರೂ ಸಾವಿರಾರು ಪಕ್ಷಿಗಳು ದಿಕ್ಕಾಪಾಲಾಗಿ ಓಡಿಹೋಗಿಬಿಡುತ್ತಿದ್ದವು’ ಅಂತ ನೆನಪಿಸಿಕೊಳ್ಳುತ್ತಾರೆ ವಿ.ಎನ್. ನಾಯಕ್. ನಾಯಕರು ಅಮೂಲ್ಯ ಜೀವವೈವಿಧ್ಯತೆಯ ಉಳಿವಿಗಾಗಿ ಹೋರಾಟ ಶುರು ಮಾಡಿದವರು.
ಇದಕ್ಕಾಗಿ ಡಿಸಿಗೆ ಪತ್ರ ಬರೆದರು. ತಮಾಷಿ ಅಂದರೆ ಆಗಿನ ಕಾಲದ ಡಿ.ಸಿ ಅವರಿಗೆ ಇಲ್ಲಿನ ನಡುಗಡ್ಡೆ ಬಗ್ಗೆ ಮಾಹಿತಿಯೇ ಇರಲಿಲ್ಲ. ಅದಕ್ಕಾಗಿ – “ನಮ್ಮಲ್ಲಿ ಇಂಥ ನಡುಗಡ್ಡೆ ಇಲ್ಲವೇ ಇಲ್ಲ’ ಅಂತ ಉತ್ತರ ಬರೆದು ಕಳುಹಿಸಿದರಂತೆ. ಆಮೇಲೆ ನಾಯಕರು ಜೀವವೈವಿಧ್ಯ ಮಂಡಳಿಗೆ ಪತ್ರ ಬರೆದರು. ಪಕ್ಷಿ, ಉರಗ, ಮೀನು, ಪರಿಸರ ತಜ್ಞರು, ವಿಜ್ಞಾನಿಗಳ 18 ಜನರ ದಂಡು ಕಟ್ಟಿಕೊಂಡು ಹೋದರು. ಜೆಡಿಪಿ, ಸಿಇಓ ಎಲ್ಲರನ್ನು ಸೇರಿಸಿಕೊಂಡರು. ಜಿಪಿಆರ್‌ಎಸ್‌ನಲ್ಲಿ ಚೆಕ್ ಮಾಡಿದರೆ ಅದು ಉತ್ತರಕನ್ನಡದ ವ್ಯಾಪ್ತಿಗೆ ಬರುತ್ತಿದೆ ಅಂದರಂತೆ. ಆಮೇಲೆ ಇದು ಹೆರಿಟೇಜ್ ಸ್ಪಾಟ್ ಅಂತ ನೋಟಿಫಿಕೇಷನ್ ಆಯ್ತು. ಆಗ ಎದ್ದು ಬಂದದ್ದೇ ನೇವಿಯವರು ಅವರು ಇಲ್ಲಿಗೆ ಬಂದ ಕೆಲವೇ ದಿನಗಳ ನಂತರ- ನಾವು ಟಾರ್ಗೆಟ್ ಪ್ರಾಕ್ಟೀಸ್ ಮಾಡಬೇಕು ಅಂದರು.
“ಪರಿಸರ ಪ್ರಿಯರು, ನಾವೆಲ್ಲ ಸೇರಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆವು. ಕೋರ್ಟಿಗೆ ಅಲ್ಲಿರುವ ಜೀವವೈವಿಧ್ಯತೆಯ ಬಗ್ಗೆ ತಿಳಿಸಿದೆವು. ಇವರು ಪ್ರಾಕ್ಟೀಸು ಮಾಡಿದರೆ ಪ್ರಾಣಿ ಪಕ್ಷಿಗಳ ಬದುಕು ಹೇಗೆಲ್ಲಾ ಅಲುಗಾಡುತ್ತದೆ ಅನ್ನೋದನ್ನು ಮನವರಿಕೆ ಮಾಡಿಕೊಟ್ಟೆವು. ಆಗ ಕೋರ್ಟ್ ಸ್ಟೇ ಕೊಟ್ಟಿತು. ಒಂದು ವರ್ಷ ಯಾರೂ ಹೋಗಲಿಲ್ಲ. ಆಗ ಹೋಗಿ ನೋಡಿದೆ ಪ್ರಾಣಿ, ಪಕ್ಷಿಗಳು ಎಷ್ಟು ಸ್ವತ್ಛಂದವಾಗಿದ್ದವು ಗೊತ್ತಾ? ಆಮೇಲೆ- ನ್ಯಾಯಾಲಯ ಕೂಡ ದೇಶದ ರಕ್ಷಣೆ ಎಂದು ಹೇಳಿ ಅವರ ಪಾಲಿಗೆ ತೀರ್ಪು ಬರೆಯಿತು. ಆನಂತರ ಬಾಂಬೆ ಮೂಲದವರು ಸ್ಕೂಬಾ ಡೈವಿಂಗ್‌ಗೆ ಬಂದರು. ಪಕ್ಷಿಗಳು ಈಗಲೂ ಸದ್ದಿಗೆ ಹೆದರುವ ಸ್ಥಿತಿ ಇದೆ’ ನಾಯಕ್ ವಿಷಾದದಿಂದ ಹೇಳುತ್ತಾರೆ.
ಈಗ ನೇವಿ ಅವರು- ನಾವು ಇಂಥ ದಿನ. ಇಂಥ ಸಮಯದಿಂದ ಇಂಥ ಸಮಯಕ್ಕೆ ಪ್ರಾಕ್ಟೀಸ್ ಮಾಡ್ತೀವಿ – ಹೀಗಂತ ಪೂರ್ವಭಾವಿಯಾಗಿ ತಿಳಿಸುತ್ತಾರಂತೆ. ಆ ಸಮಯದಲ್ಲಿ ಯಾರೂ ಆ ಕಡೆ ತಲೆ ಕೂಡ ಹಾಕೋದಿಲ್ಲವಂತೆ. ಈ ನೋಟೀಸ್ ಅಕ್ಷರ ಕಲಿತವರಿಗೆ ಅರ್ಥವಾಗುತ್ತದೆ. ಆದರೆ ಏನೂ ಅರಿಯದ ನೇತ್ರಾಣಿಯ ಮೀನುಗಳು, ಅಪರೂಪದ ಪಕ್ಷಿಗಳಿಗೆ ಹೇಗೆ ಅರ್ಥವಾಗಬೇಕು? ಸುಖ ನಿದ್ದೆಯಲ್ಲಿದ್ದಾಗಲೇ ಅವು ಹುತಾತ್ಮರಾಗುವುದು ಉಂಟು.
ಇದು ಹೀಗೇ ಮುಂದುವರಿದರೆ ದಟ್ಟ ಜೀವವೈವಿಧ್ಯತೆಯಿಂದ ಕೂಡಿರುವ ನೇತ್ರಾಣಿ ಮುಂದಿನ ಜನಾಂಗಕ್ಕೆ ಇತಿಹಾಸವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ನಾಯಕ ಆತಂಕದ ಮಾತು.
ಲೇಖನ* ನಾಗರಾಜ್ ಹರಪನಹಳ್ಳಿ
ಪೋಟೋ-ರಾಧಕೃಷ್ಣ ಭಟ್.ಭಟ್ಕಳ