ಮುಂಬೈ: ಜನಪ್ರಿಯ ಸ್ಟ್ರೀಮಿಂಗ್ ಆ್ಯಪ್ ನೆಟ್ ಫ್ಲಿಕ್ಸ್ ಭಾರತೀಯ ಬಳಕೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಡಿಸೆಂಬರ್ 5 ಮತ್ತು 6 ರಂದು 2 ದಿನಗಳ ಕಾಲ ನೆಟ್ ಫ್ಲಿಕ್ಸ್ ಸೇವೆ ಉಚಿತವಾಗಿರಲಿದ್ದು, ಬಳಕೆದಾರರು ಯಾವುದೇ ಕಾರ್ಯಕ್ರಮವನ್ನು ಸಬ್ ಸ್ಕ್ರಿಪ್ಷನ್ ಮಾಡದೆಯೇ ವೀಕ್ಷಿಸಬಹುದು.
ಕಳೆದ ಅಕ್ಟೋಬರ್ ನಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆ 2 ದಿನಗಳ ಸ್ಟ್ರೀಮ್ ಫೆಸ್ಟ್ (Stream Fest) ನಡೆಸುವುದಾಗಿ ಘೋಷಣೆ ಹೊರಡಿಸಿತ್ತು. ಇದೀಗ ದಿನಾಂಕ ಪ್ರಕಟಿಸಿದ್ದು, ಡಿಸೆಂಬರ್ 5 ಮತ್ತು 6ರಂದು ಯಾವುದೇ ದರಗಳಿಲ್ಲದೆ ಉಚಿತವಾಗಿ ನೆಟ್ ಫ್ಲಿಕ್ಸ್ ಆನಂದಿಸಬಹುದು.
ಬಳಕೆದಾರರು ತಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ನಮೂದಿಸಿ ಸುಲಭವಾಗಿ ನೆಟ್ ಫ್ಲಿಕ್ಸ್ ಗೆ ಪ್ರವೇಶ ಪಡೆಯಬಹುದು. ಮಾತ್ರವಲ್ಲದೆ ಸಿನಿಮಾ, ವೆಬ್ ಸೀರಿಸ್, ಸಾಕ್ಷ್ಯ ಚಿತ್ರ ಸೇರಿದಂತೆ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಎಲ್ಲಾ ಮಾದರಿಯ ಕಾರ್ಯಕ್ರಮಗಳನ್ನು ನೋಡಬಹುದು.
ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ಕಠಿನ ಕಾನೂನು: ಉತ್ತರಪ್ರದೇಶ ಸರ್ಕಾರದಿಂದ ಸಚಿವಾಲಯಕ್ಕೆ ಪ್ರಸ್ತಾಪ
ಈ ಕುರಿತು ಪ್ರತಿಕ್ರಿಯೆ ನೀಡಿದ ನೆಟ್ ಫ್ಲಿಕ್ಸ್ ಸಿಓಓ ಗ್ರೇಗ್ ಪೀಟರ್ಸ್, ಬಳಕೆದಾರರನ್ನು ಸೆಳೆಯಲು ಇದೊಂದು ಉತ್ತಮ ಯೋಜನೆಯಾಗಿದ್ದು, ವಾರಾಂತ್ಯದಲ್ಲಿ ಉಚಿತ ಸೇವೆ ನೀಡುತ್ತಿರುವುದು ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ ಎಂದಿದ್ದಾರೆ.
ಇದೀಗ ಬಳಕೆದಾರರು ಸ್ಮಾರ್ಟ್ ಟಿವಿ, ಐಓಎಸ್, ಆ್ಯಂಡ್ರಾಯ್ಡ್ ಗಳ ಮೂಲಕ ನೆಟ್ ಫ್ಲಿಕ್ಸ್ ಸೇವೆ ಪಡೆಯಬಹುದಾಗಿದೆ.