ಹೊಸದಿಲ್ಲಿ:“ನೇತಾಜಿ ಭಾರತದ ಮೊದಲ ಪ್ರಧಾನ ಮಂತ್ರಿ” ಹೇಳಿಕೆಗಾಗಿ ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ತರಾಟೆಗೆ ತೆಗೆದುಕೊಂಡಿದೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಭಾಸ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್, “ಯಾರೂ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇತಿಹಾಸವನ್ನು ತಿರುಚಬಾರದು” ಎಂದು ಕಂಗನಾಗೆ ತಿರುಗೇಟು ನೀಡಿದ್ದಾರೆ.
“ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರಾಜಕೀಯ ಚಿಂತಕ, ಸೈನಿಕ, ರಾಜನೀತಿಜ್ಞ, ದೂರದೃಷ್ಟಿ ಮತ್ತು ಅವಿಭಜಿತ ಭಾರತದ 1 ನೇ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಭಾರತೀಯರಾಗಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿದ ಏಕೈಕ ನಾಯಕ. ನಾಯಕನಿಗೆ ನಿಜವಾದ ಗೌರವವು ಅವರ ಸಿದ್ಧಾಂತದ ಒಳಗೊಳ್ಳುವಿಕೆಯನ್ನು ಅನುಸರಿಸುತ್ತದೆ. ” ಎಂದು ಚಂದ್ರಕುಮಾರ್ ಬೋಸ್ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನನ್ನ ತತ್ವಗಳು ಬಿಜೆಪಿ ಪಕ್ಷದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿ ಚಂದ್ರಕುಮಾರ್ ಬೋಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಇಂಡಿಯಾ ಮತ್ತು ಭಾರತ್ ವಿಚಾರದ ತಾರಕ್ಕೇರಿದ ಚರ್ಚೆಯ ನಡುವೆಯೇ ಅವರು ರಾಜೀನಾಮೆ ನೀಡಿದ್ದರು.
ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್, ನೇತಾಜಿ ಕುರಿತು ನೀಡಿದ ಹೇಳಿಕೆಗೆ ಸಾಮಾಜಿಕ ಮಾಧ್ಯಮದ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದು, ಎಕ್ಸ್‌ನಲ್ಲಿನ ಸುದ್ದಿ ಲೇಖನದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ತನ್ನನ್ನು ಟ್ರೋಲ್ ಮಾಡುವವರಿಗೆ ಇತಿಹಾಸದ ತುಣುಕನ್ನು ಓದುವಂತೆ ಕೇಳಿಕೊಂಡು,”ನೇತಾಜಿ ಅವರು 1943 ರಲ್ಲಿ ಸಿಂಗಾಪುರದಲ್ಲಿ ಆಜಾದ್ ಹಿಂದ್ ಸರ್ಕಾರವನ್ನು ರಚಿಸಿದರು ಮತ್ತು ಸ್ವತಃ ಮೊದಲ ಪ್ರಧಾನಿ ಎಂದು ಘೋಷಿಸಿದರು” ಎಂದು ಲೇಖನ ಹೇಳಿದೆ.