Advertisement

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿ

03:40 PM Jan 23, 2022 | Team Udayavani |

“ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯ ಎಂಬುದು ಯಾರೂ ಕೊಡುವಂಥ ಸರಕಲ್ಲ. ಅದು ನಾವು ಪಡೆದುಕೊಳ್ಳಬೇಕಾದದ್ದು” ಎನ್ನುತ್ತಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಲ್ಲೊಬ್ಬರು.

Advertisement

ಎಳವೆಯಿಂದಲೇ ಪ್ರತಿಭಾವಂತ, ರಾಷ್ಟ್ರಭಕ್ತ: 1897ರ ಜ. 23ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದರು. ತಂದೆ ಜಾನಕೀನಾಥ ಬೋಸ್‌, ತಾಯಿ ಪ್ರಭಾವತಿ ದತ್‌ ಬೋಸ್‌. ಇವರ 14 ಮಕ್ಕಳಲ್ಲಿ ಸುಭಾಷ್‌ 9ನೆಯವರು. ಕಟಕ್‌ನಲ್ಲಿ ಸುಪ್ರಸಿದ್ಧ ಲಾಯರ್‌ ಆಗಿದ್ದ ಜಾನಕೀನಾಥ್‌ ಬೋಸ್‌ ಅವರು ರಾಯ್‌ ಬಹದ್ದೂರ್‌ ಎನ್ನುವ ಬಿರುದನ್ನೂ ಪಡೆದಿದ್ದರು. ಕಟಕ್‌ನಲ್ಲಿರುವ ಪ್ರೊಟೆಸ್ಟಂಟ್‌ ಯುರೋಪಿಯನ್‌ ಶಾಲೆಯಲ್ಲಿ (ಪ್ರಸ್ತುತ ಸ್ಟೀವರ್ಟ್‌ ಹೈಸ್ಕೂಲ್) ಪ್ರಾಥಮಿಕ ಶಿಕ್ಷಣವನ್ನು ಪಡೆದ ಸುಭಾಷ್‌ ಚಂದ್ರ ಬೋಸ್‌, ತಣ್ತೀಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಪ್ರಸಿಡೆನ್ಸಿ ಕಾಲೇಜಿನಿಂದ ಪಡೆದರು. 16ನೇ ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣರ ಬೋಧನೆಗಳಿಂದ ಪ್ರಭಾವಿತರಾದ ಸುಭಾಷ್‌ ಅವರನ್ನು ಅವರ ಪೋಷಕರು ಇಂಗ್ಲೆಂಡ್‌ನ‌ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಭಾರತೀಯ ನಾಗರಿಕ ಸೇವೆಗೆ ಸಿದ್ಧಪಡಿಸಲು ಕಳುಹಿಸಿದರು. 1920ರಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉತ್ತೀರ್ಣರಾದರು. ವಿದೇಶದಲ್ಲಿ ಸಿಕ್ಕಿದ ನೌಕರಿಯನ್ನು ಬೇಡವೆಂದು, 1921ರ ಎಪ್ರಿಲ್‌ 22ರಂದು ಬ್ರಿಟಿಷ್‌ ಸರಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್‌ ಮಾಂಟೆಗುಗೆ ತಮ್ಮ ಪದವಿಯನ್ನು ಮರಳಿಸಿದ್ದರು.

ಆತ್ಮಾಭಿಮಾನಿ ಹೋರಾಟಗಾರ: ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದು ಎನ್ನುವ ದಿಟ್ಟ ನಿಲುವು ಹೊಂದಿದ್ದ ಸುಭಾಷ್‌ ಚಂದ್ರ ಬೋಸ್‌ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲ ತುಂಬಿದ್ದರು. ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್‌. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರÂ ಸಂಗ್ರಾಮಕ್ಕೆ ಧುಮುಕಿದ ಬೋಸ್‌ ಅವರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್‌, ಜರ್ಮನಿ, ಜಪಾನ್‌ ಸಹಿತ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸ್‌ ಅವರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿದವರಲ್ಲ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನಂಟು:  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅನ್ನು ಪ್ರಬಲ ಅಹಿಂಸಾತ್ಮಕ ಸಂಘಟನೆಯನ್ನಾಗಿ ಮಾಡಿದ ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಅಸಹಕಾರ ಚಳವಳಿಗೆ ಸೇರಿದ ಸುಭಾಷ್‌ ಚಂದ್ರ ಬೋಸ್‌, ಆಂದೋಲನದ ಸಮಯದಲ್ಲಿ ಮಹಾತ್ಮಾ ಗಾಂಧಿಯವರು ತಮ್ಮ ರಾಜಕೀಯ ಗುರುವಾದ ಚಿತ್ತರಂಜನ್‌ ದಾಸ್‌ ಅವರೊಂದಿಗೆ ಕೆಲಸ ಮಾಡಲು ಸಲಹೆ ನೀಡಿದರು. ಅನಂತರ ಅವರು ಯುವ ಶಿಕ್ಷಣ ತಜ್ಞಮತ್ತು ಬಂಗಾಲ ಕಾಂಗ್ರೆಸ್‌ ಸ್ವಯಂ ಸೇವಕರ ಕಮಾಂಡೆಂಟ್‌ ಆದರು. ಇದೇ ವೇಳೆ ಅವರು ಸ್ವರಾಜ್‌ ಪತ್ರಿಕೆಯನ್ನು ಆರಂಭಿಸಿದರು. 1927ರಲ್ಲಿ ಜೈಲಿನಿಂದ ಬಿಡುಗಡೆಯಾದ ಅನಂತರ ಬೋಸ್‌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಸ್ವಾತಂತ್ರ್ಯಕ್ಕಾಗಿ ಜವಾಹರಲಾಲ್‌ ನೆಹರೂ ಅವರೊಂದಿಗೆ ಕೆಲಸ ಮಾಡಿದರು.

ಎರಡು ಬಾರಿ ಕಾಂಗ್ರೆಸ್‌ ಅಧ್ಯಕ್ಷ: 1938ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ರಾಷ್ಟ್ರೀಯ ಯೋಜನಾ ಸಮಿತಿಯನ್ನು ರಚಿಸಿದರು. ಇದು ವಿಶಾಲವಾದ ಕೈಗಾರಿಕೀಕರಣದ ನೀತಿಯನ್ನು ರೂಪಿಸಿತು. ಆದರೂ ಇದು ಗಾಂಧಿಯವರ ಆರ್ಥಿಕ ಚಿಂತನೆಯೊಂದಿಗೆ ಹೊಂದಿಕೆಯಾಗಲಿಲ್ಲ. 1939ರಲ್ಲಿ ಮರುಚುನಾವಣೆಯಲ್ಲಿ ಗಾಂಧಿವಾದಿ ಪ್ರತಿಸ್ಪರ್ಧಿಯನ್ನು ಬೋಸ್‌ ಸೋಲಿಸಿದ್ದರೂ ಗಾಂಧಿಯವರ ಬೆಂಬಲದ ಕೊರತೆ ಉಂಟಾಗಿತ್ತು.

Advertisement

ಶೀಘ್ರ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹನೀಯವಾಗಿತ್ತು. ಭಾರತ ವಿಭಜನೆಯ ಬಗ್ಗೆ ಅವರು ಎಚ್ಚರಿಸಿದ್ದರೂ ಅದು ಮಂದಗಾಮಿಗಳಿಗೆ ಕೇಳಿಸಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯನಿರ್ವಹಿಸಿದ ಬೋಸ್‌ ಅವರು ಮಹಾತ್ಮಾ ಗಾಂಧಿ ಅವರ ಅಹಿಂಸಾತ್ಮಕ ತಣ್ತೀಗಳನ್ನು ಒಪ್ಪದೆ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸಜ್ಜುಗೊಳಿಸಲು  ಪ್ರಾರಂಭಿಸಿದರು.

ಆಜಾದ್‌ ಹಿಂದ್‌ ಫೌಜ್‌ : ಎರಡನೇ ಮಹಾಯುದ್ಧದ ವೇಳೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಪ್ರಮುಖ ಬೆಳವಣಿಗೆ ಎಂದರೆ ಆಜಾದ್‌ ಹಿಂದ್‌ ಫೌಜ್‌ನ ರಚನೆ. ಇದನ್ನು ಇಂಡಿಯನ್‌ ನ್ಯಾಷನಲ್‌ ಆರ್ಮಿ ಅಥವಾ ಐಎನ್‌ಎ ಎಂದೂ ಕರೆಯಲಾಗುತ್ತದೆ. ಭಾರತದಿಂದ ತಪ್ಪಿಸಿಕೊಂಡು ಜಪಾನ್‌ನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಭಾರತೀಯ ಕ್ರಾಂತಿಕಾರಿ ರಾಶ್‌ ಬಿಹಾರಿ ಬೋಸ್‌ ಅವರು ಆಗ್ನೇಯ ಏಷ್ಯಾದ ದೇಶಗಳಲ್ಲಿ ವಾಸಿಸುವ ಭಾರತೀಯರ ಬೆಂಬಲದೊಂದಿಗೆ ಭಾರತೀಯ ಸ್ವಾತಂತ್ರ್ಯ ಲೀಗ್‌ ಅನ್ನು ಸ್ಥಾಪಿಸಿದರು.

ಜಪಾನ್‌ ಬ್ರಿಟಿಷ್‌ ಸೈನ್ಯವನ್ನು ಸೋಲಿಸಿ, ಆಗ್ನೇಯ ಏಷ್ಯಾದ ಬಹುತೇಕ ಎಲ್ಲ ದೇಶಗಳನ್ನು ವಶಪಡಿಸಿಕೊಂಡಾಗ ಭಾರತವನ್ನು ಬ್ರಿಟಿಷ್‌ ಆಳ್ವಿಕೆಯಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಲೀಗ್‌ ಭಾರತೀಯ ಯುದ್ಧ ಕೈದಿಗಳ ನಡುವೆ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ರಚಿಸಿತು. ಬ್ರಿಟಿಷ್‌ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಜನರಲ್‌ ಮೋಹನ್‌ ಸಿಂಗ್‌ ಈ ಸೇನೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಮಧ್ಯೆ, ಸುಭಾಷ್‌ ಚಂದ್ರ ಬೋಸ್‌ ಅವರು 1941ರಲ್ಲಿ ಭಾರತದಿಂದ ತಪ್ಪಿಸಿಕೊಂಡು ಜರ್ಮನಿಯಲ್ಲಿ ಭಾರತದ ಸ್ವಾತಂತ್ರÂಕ್ಕಾಗಿ ಕೆಲಸ ಪ್ರಾರಂಭಿಸಿದ್ದರು. 1943ರಲ್ಲಿ ಅವರು ಇಂಡಿಯನ್‌ ಇಂಡಿಪೆಂಡೆನ್ಸ್ ಲೀಗ್‌ ಅನ್ನು ಮುನ್ನಡೆಸಲು ಸಿಂಗಾಪುರಕ್ಕೆ ಬಂದರು  ಮತ್ತು ಭಾರತೀಯ ರಾಷ್ಟ್ರೀಯ ಸೈನ್ಯವನ್ನು (ಆಜಾದ್‌ ಹಿಂದ್‌ ಫೌಜ್‌) ಭಾರತದ ಸ್ವಾತಂತ್ರ್ಯಕ್ಕಾಗಿ ಪರಿಣಾಮಕಾರಿ ಸಾಧನವನ್ನಾಗಿ ಮಾಡಲು ಮರುನಿರ್ಮಾಣ ಮಾಡಿದರು. ಆಜಾದ್‌ ಹಿಂದ್‌ ಫೌಜ್‌ ಸುಮಾರು 45,000 ಸೈನಿಕರನ್ನು ಒಳಗೊಂಡಿತ್ತು. ಅವರಲ್ಲಿ ಭಾರತೀಯ ಯುದ್ಧ ಕೈದಿಗಳು ಮತ್ತು ಆಗ್ನೇಯ ಏಷ್ಯಾದ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರಿದ್ದರು.

ಇದನ್ನೂ ಓದಿ:21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು 

1943ರಲ್ಲೇ ಸ್ವತಂತ್ರ ಸರಕಾರ ರಚಿಸಿದ್ದ ಬೋಸ್‌!:  1943ರ ಅಕ್ಟೋಬರ್‌ ನಲ್ಲಿ ಸುಭಾಷ್‌ ಚಂದ್ರ ಬೋಸ್‌ ಸಿಂಗಾಪುರದಲ್ಲಿ ಆಜಾದ್‌ ಹಿಂದ್‌ ಭಾರತದ ತಾತ್ಕಾಲಿಕ ಸರಕಾರ ರಚನೆಯನ್ನು ಘೋಷಿಸಿತ್ತು. ಜಪಾನೀಯರ ವಶದಲ್ಲಿದ್ದ ಅಂಡಮಾನ್‌ನಲ್ಲಿ ಸುಭಾಷ್‌ ಚಂದ್ರ ಬೋಸ್‌ ಭಾರತದ ಧ್ವಜವನ್ನು ಹಾರಿಸಿದರು. 1944ರ ಆರಂಭದಲ್ಲಿ ಆಜಾದ್‌ ಹಿಂದ್‌ ಫೌಜ್‌ನ ಮೂರು ಘಟಕಗಳು ಭಾರತದಿಂದ ಬ್ರಿಟಿಷರನ್ನು ಹೊರಹಾಕಲು ಭಾರತದ ಈಶಾನ್ಯ ಭಾಗಗಳ ಮೇಲೆ ದಾಳಿ ನಡೆಸಿದವು. ಆದರೆ ಭಾರತವನ್ನು ಸ್ವತಂತ್ರಗೊಳಿಸುವ ಪ್ರಯತ್ನ ವಿಫ‌ಲವಾಯಿತು.

ಬ್ರಿಟಿಷರ ವಿರುದ್ಧ ಯುವಶಕ್ತಿಯನ್ನು ಒಗ್ಗೂಡಿಸಿದ್ದ ಬೋಸ್‌: ಜಪಾನ್‌ನಿಂದ ಬೆಂಬಲಿತವಾದ ಆಜಾದ್‌ ಹಿಂದ್‌ ಫೌಜ್‌ ಮತ್ತು ಭಾರತದೊಳಗೆ ನಡೆಯುವ ದಂಗೆಯ ಸಹಾಯದಿಂದ ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಯನ್ನು ಕೊನೆಗೊಳಿಸಬಹುದು ಎಂದು ನೇತಾಜಿ ನಂಬಿದ್ದರು. ಇದಕ್ಕಾಗಿ ಅವರು ಆಗ್ನೇಯ ಏಷ್ಯಾದಲ್ಲಿ ವಾಸಿಸುವ ಎಲ್ಲ ಧರ್ಮಗಳು ಮತ್ತು ಪ್ರದೇಶಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ತಮ್ಮ ಪ್ರಖರ ಭಾಷಣದ ಮೂಲಕ ಯುವಕರ ರಕ್ತವನ್ನು ಕುದಿಯುವಂತೆ ಮಾಡುತ್ತಿದ್ದ ಬೋಸ್‌ ಆ ಮೂಲಕ ಬ್ರಿಟಿಷರ ವಿರುದ್ಧ ಯುವಶಕ್ತಿಯ ದೊಡ್ಡ ಪಡೆಯನ್ನು ಕಟ್ಟುವಲ್ಲಿ ಯಶಸ್ವಿಯೂ ಆದರು.

ಗಡಿಗಳಲ್ಲಿ ಸೈನ್ಯ ಸಜ್ಜು: ಕ್ಯಾಪ್ಟನ್‌ ಲಕ್ಷ್ಮೀ ಸ್ವಾಮಿನಾಥನ್‌ ನೇತೃತ್ವದಲ್ಲಿ ಆಜಾದ್‌ ಹಿಂದ್‌ ಫೌಜ್‌ನ ಮಹಿಳಾ ರೆಜಿಮೆಂಟ್‌ ಅನ್ನು ರಚಿಸಿದರು. ಇದು ಭಾರತದ ಜನರಿಗೆ ಏಕತೆ ಮತ್ತು ವೀರತ್ವದ ಸಂಕೇತವಾಯಿತು. ಜರ್ಮನ್‌ ಸೇನಾ ಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್‌ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್‌ ಭೇಟಿ, ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್‌ ಇಂಡಿಪೆಂಡೆನ್ಸ್‌ ಲೀಗ್‌ ಮೂಲಕ ಅವಿರತ ಚಟುವಟಿಕೆಗಳಲ್ಲಿ ಸುಭಾಷ್‌ ಚಂದ್ರ ಬೋಸ್‌ ತೊಡಗಿಸಿಕೊಂಡಿದ್ದರು.

ಕ್ರಾಂತಿಕಾರಿಯ ನಿಗೂಢ ಸಾವು:  1945ರ ಆಗಸ್ಟ್‌ 18ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದರು. ಆದರೆ ನೇತಾಜಿ ಅವರ ಸಾವಿನ ಕುರಿತಂತೆ ರಾಷ್ಟ್ರಾಭಿಮಾನಿಗಳಲ್ಲಿ ಇನ್ನೂ ಅನುಮಾನಗಳು ಕಾಡುತ್ತಲೇ ಇವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ನೇತಾಜಿ ಅವರ ಸಾವಿನ ಕುರಿತಂತೆ ಹಲವಾರು ಬಾರಿ ರಾಜಕೀಯ ಕೆಸರೆರಚಾಟಗಳು ನಡೆದಿವೆ.ಈ ಬಗ್ಗೆ ಹಲವಾರು ತನಿಖೆ, ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಲೇ ಬಂದಿದ್ದರೂ ಯಾವೊಂದೂ ತಾರ್ಕಿಕ ಅಂತ್ಯ ತಲುಪಿಲ್ಲ. ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ, ಕ್ರಾಂತಿಕಾರಿ ಮತ್ತು ದೂರದೃಷ್ಟಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸುಭಾಷ್‌ ಚಂದ್ರ ಬೋಸ್‌ ಅವರ ಅಂತ್ಯ ಕೂಡ ನಿಗೂಢವಾಗಿ ಉಳಿದುದು ಮಾತ್ರ ವಿಪರ್ಯಾಸವೇ ಸರಿ.

ತೈವಾನ್‌ನಲ್ಲಿ ಕೊನೆಯ ದಿನಗಳು…: 1920ರ ದಶಕದಲ್ಲಿ ತೈವಾನೀಸ್‌ ಬುದ್ಧಿಜೀವಿಗಳು ಭಾರತದ ಸ್ವದೇಶಿ ಚಳವಳಿಯ ಬಗ್ಗೆ ಸಾಕಷ್ಟು ಪರಿಚಿತರಾಗಿದ್ದರು. ಐರ್ಲೆಂಡ್‌ನಲ್ಲಿ ಸ್ವಾತಂತ್ರ್ಯಕ್ಕಾಗಿ ಸಿನ್‌ಫೀನ್‌ನ ಹೋರಾಟ ಮತ್ತು ಭಾರತದಲ್ಲಿ ಮಹಾತ್ಮಾ ಗಾಂಧಿ, ಜವಾಹರ್‌ಲಾಲ್‌ ನೆಹರೂ, ಸುಭಾಷ್‌ ಚಂದ್ರ ಬೋಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು.  ಸುಭಾಷ್‌ ಚಂದ್ರ ಬೋಸ್‌ ಅವರು ತೈವಾನ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಯಾಕೆಂದರೆ ಇವರು ಇಲ್ಲಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದರು.

1943ರಲ್ಲಿ ಹಿಂದೂ ಮಹಾಸಾಗರದಲ್ಲಿ ಜಪಾನಿನ ಜಲಾಂತರ್ಗಾಮಿ ನೌಕೆಯನ್ನು ಸುಭಾಷ್‌ ಚಂದ್ರ ಬೋಸ್‌ ಹತ್ತಿದಾಗ ಅವರನ್ನು ಇಂಡೋನೇಷ್ಯಾಕ್ಕೆ ವರ್ಗಾಯಿಸಲಾಯಿತು. ಅನಂತರ ತೈವಾನ್‌ಗೆ ತೆರಳಿದ್ದು ತೈಹೋಕುದ ಲ್ಲಿ ವಿಮಾನ ಇಳಿಯತು. 1943ರ ಮೇ 14ರಂದು ಅವರು ಮೊದಲ ಬಾರಿಗೆ ಈ ದ್ವೀಪದಲ್ಲಿ ಕಾಲಿಟ್ಟಿದ್ದರು. 1945ರ ಆಗಸ್ಟ್‌ 18ರಂದು ಸುಭಾಷ್‌ ಚಂದ್ರ ಬೋಸ್‌ ಅವರು ಮತ್ತೆ ತೈವಾನ್‌ಗೆ ಹಾರಿದರು. ಆಗ ತೈಪೆಯಲ್ಲಿ ಇಂಧನ ತುಂಬುವುದಕ್ಕಾಗಿ ವಿಮಾನ ಇಳಿದಿತ್ತು. ಅನಂತರ ಅಲ್ಲಿಂದ ಹಾರುವಾಗ ವಿಮಾನ ಪತನವಾಗಿದೆ. ಈ ಸಂದರ್ಭದಲ್ಲಿ ಬೋಸ್‌ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸೌತ್‌ಗೇಟ್‌ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೇ ದಿನ ರಾತ್ರಿ ಅವರು ನಿಧನ ಹೊಂದಿದರು. ಬೋಸ್‌ ತಮ್ಮ ಕೊನೆಯ ಕ್ಷಣವನ್ನು ಕಳೆದ ಮಿಲಿಟರಿ ಆಸ್ಪತ್ರೆ ಇಂದು ತೈಪೆ ಮುನ್ಸಿಪಲ್‌ ಹೆಪಿಂಗ್‌ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ.

ಬೋಸ್‌ ತೈವಾನ್‌ಗೆ ಹಾರಿದಾಗ ಅವರೊಂದಿಗೆ ಜಪಾನಿನ ಲೆಫ್ಟಿನೆಂಟ್‌ ಜನರಲ್‌ ತ್ಸುನಾಮಾಸಾ ಶಿಡೆ, ಬೋಸ್‌ ಅವರ ಸಹಾಯಕ ಹಬೀಬ್‌ ಉರ್‌ ರೆಹಮಾನ್‌ ಕೂಡ ಇದ್ದರು. ಶಿಡೆ ಅವರು ತೀವ್ರ ಗಾಯಗೊಂಡು ಅದೇ ದಿನ ನಿಧನ ಹೊಂದಿದರೆ, ಹಬೀಬ್‌ ಉರ್‌ ಬದುಕುಳಿದರು ಮತ್ತು ಸಾವಿನವರೆಗೂ ಆಸ್ಪತ್ರೆಯಲ್ಲಿ ಬೋಸ್‌ ಅವರ ಜತೆಗಿದ್ದರು ಎನ್ನಲಾಗುತ್ತದೆ.

ಬೋಸ್‌ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ  ಸ್ವಾತಂತ್ರ್ಯಕ್ಕಾಗಿ ಸಾಗರೋತ್ತರ ಭಾರತೀಯರು ನೀಡಿದ ಅಪಾರ ಪ್ರಮಾಣದ ಚಿನ್ನಾಭರಣಗಳಿದ್ದವು ಎನ್ನಲಾಗಿದ್ದು  ವಮಾನ ಪತನದ ಬಳಿಕ ಈ ಎಲ್ಲ ನಿಧಿಗಳು ಮತ್ತು ಸಂಬಂಧಿತ ದಾಖಲೆಗಳು ಬೋಸ್‌ ಅವರ ಚಿತಾಭಸ್ಮದೊಂದಿಗೆ ತೈವಾನ್‌ ತನಿಖಾಧಿಕಾರಿಗಳ ಕೈ ಸೇರಿತ್ತು. ವಿಮಾನ ಅಪಘಾತದ ಅನಂತರ ಜಪಾನ್‌ನ ಮಿಲಿಟರಿ ಈ ವಿಮಾನ ನಿಲ್ದಾಣವನ್ನು ಮುಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next