ಹುಬ್ಬಳ್ಳಿ: ರವಿವಾರ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಯಲ್ಲಿ ಪ್ರಶ್ನೆ ಪತ್ರಿಕೆ ಅದಲು-ಬದಲು ಆಗಿದ್ದರಿಂದ ಮರು ಪರೀಕ್ಷೆ ನಡೆಸಲು ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ (ಎನ್‌ಟಿಎ) ನಿರ್ಧರಿಸಿದೆ.
ಬೆಳಗ್ಗೆ 9ಗಂಟೆಗೆ ಆನ್‌ಲೈನ್ ಮೂಲಕ ಆರಂಭವಾದ ಎನ್‌ಇಟಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕುರಿತು ಪರೀಕ್ಷೆ ತೆಗೆದುಕೊಂಡಿದ್ದ ಪರೀಕ್ಷಾರ್ಥಿಗಳಿಗೆ ಹಿಂದಿ ಭಾಷೆಯ ಪ್ರಶ್ನೆ ಪತ್ರಿಕೆ ಕೊಟ್ಟಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾದರು. ಕೆಲ ಪರೀಕ್ಷಾರ್ಥಿಗಳಿಗೆ ಸುಮಾರು 60ಕ್ಕೂ ಹೆಚ್ಚು ಹಿಂದಿ ಪ್ರಶ್ನೆಗಳನ್ನೆ ಕೊಡಲಾಗಿತ್ತು. ಇನ್ನು ಕೆಲ ಪರೀಕ್ಷಾರ್ಥಿಗಳಿಗೆ ಎರಡ್ಮೂರು ಬಾರಿ ಪುನರಾವರ್ತಿತ ಪ್ರಶ್ನೆಗಳನ್ನೆ ಕೊಡಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಕೆಲವರಿಗೆ ಮಧ್ಯಾಹ್ನ 12:00ಗಂಟೆಯಾದರೂ ಪ್ರಶ್ನೆ ಪತ್ರಿಕೆ ಕೊಡದೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರಲಿಲ್ಲ.
ಇದರಿಂದ ನೂರಾರು ವಿದ್ಯಾರ್ಥಿಗಳು ಮತ್ತಷ್ಟು ಆತಂಕಕ್ಕೊಳಗಾಗಿ ಪರೀಕ್ಷಾ ಕೇಂದ್ರದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ತೆರಳಿ, ಪರೀಕ್ಷಾರ್ಥಿಗಳಿಗೆ ಸರ್ವರ್‌ನಲ್ಲಿ ಉಂಟಾದ ಸಮಸ್ಯೆ ಬಗ್ಗೆ ತಿಳಿಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ನಾವು ಕನ್ನಡ ವಿಷಯ ಆಯ್ಕೆ ಮಾಡಿದ್ದೇವು.
ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಕನ್ನಡ ವಿಷಯ ಬದಲು 100 ಪ್ರಶ್ನೆಗಳಲ್ಲಿ ಶೇ. 90ರಷ್ಟು ಹಿಂದಿ ಭಾಷೆಯ ಪ್ರಶ್ನೆಗಳೇ ಬಂದಿದ್ದವು. ಪರೀಕ್ಷಾ ಕೇಂದ್ರದವರು ಕಂಪ್ಯೂಟರ್ ಶಟ್‌ಡೌನ್ ಮಾಡಿಸಿ ಪುನರಾರಂಭಿಸಿದಾಗಲೂ ಕೆಲವರಿಗೆ ಕನ್ನಡ ಭಾಷೆ ಬಂದರೆ, ಇನ್ನು ಕೆಲವರಿಗೆ ಬರಲೇ ಇಲ್ಲ. ಬಂದವರಲ್ಲಿ 10 ಪ್ರಶ್ನೆಗಳು ಪುನರಾವರ್ತಿತವಾಗಿ ಸಮಸ್ಯೆಯಾಯಿತು. ಇದರಿಂದ ಪರೀಕ್ಷಾರ್ಥಿಗಳೆಲ್ಲ ತೀವ್ರ ಗೊಂದಲಕ್ಕಿಡಾಗಬೇಕಾಯಿತು ಎಂದು ಪರೀಕ್ಷಾರ್ಥಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ರವಿವಾರ ಬೆಳಗ್ಗೆ ನಡೆದ ನೆಟ್ ಪರೀಕ್ಷೆಯಲ್ಲಿ ಸರ್ವರ್/ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಶ್ನೆ ಪತ್ರಿಕೆ ಅದಲು-ಬದಲು ಆಗಿದೆ. ಹೀಗಾಗಿ ಎನ್‌ಟಿಎದವರು ಮರು ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇಂತಹ ಸಮಸ್ಯೆ ರಾಜ್ಯಾದ್ಯಂತದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆಗಿದೆ. ಮಧ್ಯಾಹ್ನದ ಪರೀಕ್ಷೆಯು ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ನಡೆಯಿತು ಎಂದು ಪರೀಕ್ಷಾ ಕೇಂದ್ರವೊಂದರ ಮುಖ್ಯಸ್ಥರು “ಉದಯವಾಣಿ’ಗೆ ತಿಳಿಸಿದರು. ರವಿವಾರ ನಗರದ ಚೇತನ ಬಿಸಿನೆಸ್ ಸ್ಕೂಲ್,
ಕೆಎಲ್‌ಇ ಐಟಿ ಹಾಗೂ ಧಾರವಾಡದ ಜೆಎಸ್ ಎಸ್ ಕಾಲೇಜ್‌ನ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಇಟಿ ಪರೀಕ್ಷೆಗಳಿದ್ದವು.