ನವಿಮುಂಬಯಿ: ನೆರೂಲ್ ಶ್ರೀ ಶನಿಮಂದಿರದ ಮಹಿಳಾ ವಿಭಾಗ ಮತ್ತು ಯುವ ಬ್ರಿಗೇಡ್ ನವಿ ಮುಂಬಯಿ ಇವರ ಜಂಟಿ ಆಯೋಜನೆಯಲ್ಲಿ ರಕ್ತದಾನ ಶಿಬಿರವು ನ. 4ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಕಾಮೋಟೆ ಎಂ. ಜಿ. ಎಂದು ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಗ್ಗೆ 10 ಕ್ಕೆಪ್ರಾರಂಭಗೊಂಡಿದ್ದು, ಸ್ಥಾನೀಯ ನಗರ ಸೇವಕಿ ಮೀರಾ ಪಾಟೀಲ್ ಅವರು ಮಂದಿರದ ಪ್ರಧಾನ ಅರ್ಚಕ ಸೂರಜ್ ಭಟ್ ಅವರು ಶಿಬಿರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಕರುಣಾಕರ ಎಸ್. ಆಳ್ವ, ವಿಶ್ವಸ್ಥರುಗಳಾದ ಪುನೀತ್ ಶೆಟ್ಟಿ, ಅನಿಲ್ ಕುಮಾರ್ ಹೆಗ್ಡೆ, ಕೃಷ್ಣ ಎಂ. ಪೂಜಾರಿ, ಎನ್. ಡಿ. ಶೆಣೈ, ತಾರಾನಾಥ ಶೆಟ್ಟಿ, ದಾಮೋದರ ಶೆಟ್ಟಿ, ದಯಾನಂದ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ವಿಶ್ವನಾಥ ಪೂಜಾರಿ, ಉಪಾಧ್ಯಕ್ಷೆ ಸ್ವರ್ಣಲತಾ ದಾಮೋದರ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯೆಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರು, ತುಳು-ಕನ್ನಡಿಗ ಸದಸ್ಯೆಯರು ಯುವ ಬ್ರಿಗೇಡ್‌ನ ಸಂಚಾಲಕ ಜಗದೀಶ್ ಶೆಟ್ಟಿ ಬೆಳ್ಕಲೆ, ಸಂದೀಪ್ ಪೂಜಾರಿ, ರಾಜೇಶ್ ಗೌಡ ಹಾಗೂ ಸಂಸ್ಥೆಯ ಸದಸ್ಯರ ಉಪಸ್ಥಿತಿಯಲ್ಲಿ ಎಂ. ಜಿ. ಎಂ. ಆಸ್ಪತ್ರೆಯ ಬ್ಲಿಡ್ ಬ್ಯಾಂಕ್‌ನ ಮುಖ್ಯಸ್ಥೆ ಶಾರದಾ ಎ. ಅಂಚನ್ ಅವರ ಮುಂದಾಳತ್ವದಲ್ಲಿ ರಕ್ತದಾನ ಶಿಬಿರವು ನೆರವೇರಿತು.
ಅಪರಾಹ್ನ 3ರವರೆಗೆ ನಡೆದ ಶಿಬಿರದಲ್ಲಿ ಸುಮಾರು 70 ಕ್ಕೂ ಅಧಿಕ ಮಂದಿ ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಶಿಬಿರಾರ್ಥಿಗಳಿಗೆ ಬಾಲಾಜಿ ಕ್ಯಾಟರರ್ನಮಾಲಕ ದಾಮೋದರ ಶೆಟ್ಟಿ ಅವರ ವತಿಯಿಂದ ಲಘು ಉಪಹಾರದ ವ್ಯವಸ್ಥೆಯನ್ನು ಹಾಗೂ ಸೆವೆನ್ ಡೇಸ್ ಸೇವೆನ್ ಕುಕ್ ಇದರ ಮಾಲಕ ರಾಜೇಶ್ ಗೌಡ ಅವರ ವತಿಯಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಕಾರ್ಯಕರ್ತರು, ಹೊಟೇಲ್ ಉದ್ಯಮಿಗಳು, ಕಾರ್ಮಿಕರು, ತುಳು-ಕನ್ನಡಿಗರು, ಹಿತೈಷಿಗಳು ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.