ನವಿ ಮುಂಬಯಿ: ಸುಸಂಸ್ಕೃತಿ ಎಲ್ಲಿ ಇರುತ್ತದೋ ಅಲ್ಲಿ ದೇವರು ಇರುತ್ತಾರೆ. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪಾಲಕರಿಂದಾಗಬೇಕು. ಕೇವಲ ವಿದ್ಯೆಯನ್ನು ನೀಡಿದರೆ ಸಾಲದು, ಅವರಿಗೆ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಕಲಿಸಿ ಆ ಮೂಲಕ ಅವರ ಬದುಕನ್ನು ಶ್ರೀಮಂತಗೊಳಿಸಬೇಕು. ಆಧುನಿಕ ತಂತ್ರಜ್ಞಾನ ನಮಗೆ ಬೇಕು. ಆದರೆ ಅದು ಅತಿಯಾಗಬಾರದು. ಇಂದಿನ ಯುವಪೀಳಿಗೆಯು ಸಾಮಾಜಿಕ ಜಾಲತಾಣಗಳ ಮುಖಾಂತರ ದುಶ್ಚಟಗಳಿಗೆ ಬಲಿಯಾಗದಂತೆ ಹೆತ್ತವರು ಜಾಗೃತರಾಗಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರು ಇಲ್ಲಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.
ಜು. 29 ರಂದು ನೆರೂಲ್‌ನ ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ಅಯಪ್ಪ ಮಂದಿರದ ಶ್ರೀ ಗುರುದೇವಾನಂದ ಸ್ವಾಮಿ ಸಭಾಗೃಹದಲ್ಲಿ ನವಿಮುಂಬಯಿಯ ಗುರುಭಕ್ತರು ಆಯೋಜಿಸಿದ ಗುರುವಂದನ ಕಾರ್ಯಕ್ರಮದ ಆಶೀರ್ವಚನ ನೀಡಿದ ಶ್ರೀಗಳು, ಶಾಂತಿ, ಸಂತೃಪ್ತಿಗಾಗಿ ನಾವು ಎಲ್ಲೂ ಹೋಗಬೇಕಾಗದ ಅಗತ್ಯವಿಲ್ಲ. ಅದು ನಮ್ಮೊಳಗಿದೆ. ಅದು ಆತ್ಮಾನಂದವಾಗಿದೆ. ದಾನ ಧರ್ಮದ ಮೂಲಕ ಸಂತೃಪ್ತಿ ಜೀವನ ನಡೆಸಲು ಸಾಧ್ಯವಾಗಿದೆ. ಮನುಷ್ಯನ ಹೃದಯದಲ್ಲಿ ಸಾಧಿಸುವ ಸಂಕಲ್ಪ ಶಕ್ತಿಯಿದ್ದರೆ ಯಾವುದೇ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಆದರೆ ಒಳ್ಳೆಯ ಮನಸ್ಸು, ಒಳ್ಳೆಯ ಸಂಕಲ್ಪ ಇರಬೇಕು ಎಂದು ನುಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ರಂಗಭೂಮಿ ಫೈನ್‌ಆರ್ಟ್ಸ್ ಮುಂಬಯಿ ಅಧ್ಯಕ್ಷ ತಾರಾನಾಥ್ ಶೆಟ್ಟಿ ಪುತ್ತೂರು ಮತ್ತು ವಿನೋದಾ ತಾರಾನಾಥ್ ಶೆಟ್ಟಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದಾಮೋದರ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಹನುಮಾನ್ ಚಾಲೀಸ್ ಹಿಂದಿ ಆವೃತ್ತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಸಾಧ್ವಿ ಮಾತಾನಂದಮಯೀ ಅವರು ಉಪಸ್ಥಿತರಿದ್ದು ಶ್ರೀಗಳ ಪಾದಪೂಜೆಯ
ವಿಧಿ-ವಿಧಾನಗಳನ್ನು ನೆರವೇರಿಸಿದರು. ಶ್ರೀಗಳು ದೀಪಪ್ರಜ್ವಲಿಸಿ ಗುರುವಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್, ಶ್ರೀ ಮಹಾಗಣಪತಿ ಶ್ರೀ ದುರ್ಗಾದೇವಿ, ಶ್ರೀ ಅಯ್ಯಪ್ಪ ಮಂದಿರದ ವಿಶ್ವಸ್ತರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ನೆರೂಲ್ ಶ್ರೀ ಶನೀಶ್ವರ ಮಂದಿರದ ವಿಶ್ವಸ್ತರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ ವಿಶ್ವಸ್ತರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನವಿಮುಂಬಯಿಯ ಗುರುಭಕ್ತರು ಶ್ರೀ ಕ್ಷೇತ್ರ ಒಡಿಯೂರಿನ ಗೋಶಾಲೆಗೆ ದೇಣಿಗೆ ಅರ್ಪಿಸಿದರು. ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗುರುಭಕ್ತರಿಂದ ಭಜನ ಕಾರ್ಯಕ್ರಮ ನಡೆಯಿತು. ಪ್ರಸಾದ ರೂಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀಗಳು ಭಕ್ತಾದಿಗಳನ್ನು ಫಲ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ