ಶಿರ್ವ : ಲೋಫ್ಲೋರ್ ಬಸ್ ಗಳಾಗಿ ಗ್ರಾಮೀಣ ಭಾಗದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದ್ದ ನರ್ಮ್ ಬಸ್ ಲಾಕ್‌ಡೌನ್ ತೆರವಾದ ಬಳಿಕ ಉಡುಪಿಯಿಂದ ಶಿರ್ವಕ್ಕೆ ಸೋಮವಾರದಿಂದ ಪ್ರಾರಂಭಗೊಂಡಿದೆ.
ಉಡುಪಿಯಿಂದ ಬೆಳಗ್ಗೆ 7 ಗಂಟೆಗೆ ಹೊರಟ ಬಸ್ ಶಂಕರಪುರ,ಬಂಟಕಲ್‌ಗಾಗಿ 8 ಗಂಟೆಗೆ ಶಿರ್ವ ತಲುಪಲಿದೆ. ಸಂಜೆ 5-30ಕ್ಕೆ ಉಡುಪಿಯಿಂದ ಹೊರಟು 6-25ಕ್ಕೆ ಶಿರ್ವ ತಲುಪಲಿದ್ದು ಒಟ್ಟಾರೆ ದಿನಕ್ಕೆ 6 ಟ್ರಿಪ್ ನಡೆಸಲಿದೆ ಎಂದು ನರ್ಮ್ ಬಸ್ ನಿರ್ವಾಹಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವಾರದಿಂದ ಅನ್‌ಲಾಕ್ ಪ್ರಾರಂಭವಾಗಿದ್ದು,ಜಿಲ್ಲಾಡಳಿತ ಬಸ್ ಓಡಾಟಕ್ಕೆ ಅನುಮತಿ ನೀಡಿತ್ತು. ಆದರೆ ಖಾಸಗಿ ಬಸ್ ಮಾಲಕರು ಡಿಸೇಲ್ ದರ ಏರಿಕೆಯಿಂದಾಗಿ ಖಾಸಗಿ ಬಸ್‌ಗಳಲ್ಲಿ ಶೇ. 50 ಪ್ರಯಾಣಿಕರನ್ನು ತುಂಬಿಸಿ ಓಡಾಟ ನಡೆಸಲು ಕಷ್ಟಸಾಧ್ಯವಾದುದರಿಂದ ಟಿಕೆಟ್ ದರ ಏರಿಸದೆ ಬಸ್ ಓಡಾಟ ನಡೆಸಿರಲಿಲ್ಲ.
ಲಾಕ್ ಡೌನ್‌ಗಿಂತ ಮೊದಲೇ ಉಡುಪಿ-ಶಿರ್ವ ಬಸ್ ರೂಟುಗಳಲ್ಲಿ ಕಲೆಕ್ಷನ್ ಇಲ್ಲವೆಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನರ್ಮ್ ಬಸ್ ಸಂಚಾರ ಸ್ಥಗಿತಗೊಳಿಸಿದ್ದರು.ಇದೀಗ ಖಾಸಗಿ ಬಸ್ ಸಂಚಾರ ಇಲ್ಲದೆ ನರ್ಮ್ ಬಸ್ ಪ್ರಾರಂಭಗೊಂಡಿದೆ. ಗ್ರಾಮೀಣ ಭಾಗದ ದಿನಗೂಲಿ ನೌಕರರ,ಕೂಲಿ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾದ ನರ್ಮ್ ಬಸ್ ಸೇವೆ ಇನ್ನೂ ಹೆಚ್ಚು ಓಡಾಟ ನಡೆಸಲಿ ಎಂಬುದು ನಾಗರಿಕರ ಆಶಯವಾಗಿದೆ.
ಕೊರೊನಾ ಲಾಕ್‌ಡೌನ್ ಬಳಿಕ ಬಸ್ ಸಂಚಾರವಿರದೇ ಇದ್ದುದರಿಂದ ಹೆಚ್ಚಿನ ಪ್ರಯಾಣಿಕರು ದ್ವಿಚಕ್ರ ವಾಹನಕ್ಕೆ ಮೊರೆಹೋಗಿದ್ದಾರೆ. ಡಿಸೇಲ್ ದರ ಏರಿಕೆಯಿಂದ ರೂಟ್‌ಗಳಲ್ಲಿ ಕಲೆಕ್ಷನ್ ಕಡಿಮೆಯಾಗಿದ್ದು,ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಒಂದೆರಡು ತಿಂಗಳು ಬೇಕಾಗಬಹುದು ಎಂದು ಖಾಸಗಿ ಬಸ್ ನಿರ್ವಾಹಕ ರಾಜೇಶ್ ಹೇಳಿದರು.