ಕಠ್ಮಂಡು: ಇತ್ತೀಚೆಗೆ ನೇಪಾಳದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮ್ ಚಂದ್ರ ಪೌಡೆಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ರಾತ್ರಿ ( ಏ.1 ರಂದು) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮ್ ಚಂದ್ರ ಪೌಡೆಲ್ ಅವರು ಹೊಟ್ಟೆ ನೋವು ಆಗುತ್ತಿತ್ತು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಅಪರಿಚಿತರಿಂದ ಪ್ರತಿಮೆ ಧ್ವಂಸ: ಮಹಾರಾಷ್ಟ್ರದಲ್ಲಿ ಮತ್ತೆ ಗುಂಪು ಘರ್ಷಣೆ
ನೇಪಾಳದ ಹಿರಿಯ ಕಾಂಗ್ರೆಸ್ ನಾಯಕ ರಾಮಚಂದ್ರ ಪೌಡೆಲ್ ಎರಡು ವಾರಗಳ ಹಿಂದಷ್ಟೇ ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಮ್ ಚಂದ್ರ ಪೌಡೆಲ್ ಅವರನ್ನು ಫೆಡರಲ್ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರು ಆಯ್ಕೆ ಮಾಡಿದರು.
ನೇಪಾಳದ ಚುನಾವಣಾ ಆಯೋಗದ ಪ್ರಕಾರ ಪೌಡೆಲ್ 33,802 ಚುನಾವಣಾ ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಸುಭಾಷ್ ಚಂದ್ರ ನೆಂಬ್ವಾಂಗ್ 15,518 ಚುನಾವಣಾ ಮತಗಳನ್ನು ಪಡೆದಿದ್ದರು.