ನವದೆಹಲಿ:ಹಿಮಾಲಯದ ಪರ್ವತಶ್ರೇಣಿಯಲ್ಲಿರುವ 29 ಸಾವಿರ ಅಡಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದ ಪರ್ವತಾರೋಹಿ 50ರ ಹರೆಯದ ಕಾಮಿ ರಿಟಾ ಶೆರ್ಪಾ ಅವರು 23 ಬಾರಿ ಮೌಂಟ್ ಎವರೆಸ್ಟ್ ನ ತುತ್ತ ತುದಿಯನ್ನು ಹತ್ತಿದ ಮೊದಲ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
ಮಾರ್ಚ್ ನಿಂದ ಮೇ ತಿಂಗಳವರೆಗೆ ಮೌಂಟ್ ಎವರೆಸ್ಟ್ ಪರ್ವತ ಹತ್ತುವ ಕಾಲವಾಗಿದೆ. ಕಾಮಿ ರಿಟಾ ಶೆರ್ಪಾ ಅವರು ನೇಪಾಳ ಭಾಗದಿಂದ ಪರ್ವತ ಹತ್ತಿದ್ದರು. ಮೌಂಟ್ ಎವರೆಸ್ಟ್ ತುತ್ತ ತುದಿಗೇರಲು ಎರಡು ಮಾರ್ಗಗಳಿವೆ. ಒಂದು ನೇಪಾಳ, ಇನ್ನೊಂದು ಟಿಬೆಟ್ ಭಾಗದಿಂದ ಎಂದು ವರದಿ ತಿಳಿಸಿದೆ.
ನೇಪಾಳದಲ್ಲಿ ಶೆರ್ಪಾಗಳು ಬಹು ಜನಪ್ರಿಯ. ಯಾಕೆಂದರೆ ಹಿಮಾಲಯ ಪರ್ವತ ಹತ್ತುವ ವಿದೇಶಿಯರಿಗೆ ಗೈಡ್ ಆಗಿ ಕಾರ್ಯನಿರ್ವಹಿಸುವವರು ಇವರೇ. ಕಾಮಿ ರಿಟಾ ಶೆರ್ಪಾ ಸೇರಿದಂತೆ ಎಂಟು ಮಂದಿ ನೇಪಾಳಿ ಪರ್ವತಾರೋಹಿಗಳು ಮಂಗಳವಾರ ಮೌಂಟ್ ಎವರೆಸ್ಟ್ ತುದಿಯನ್ನು ಏರಿದ್ದರು.
“ನಮಗೆ ಈ ವರ್ಷ ತುಂಬಾ ಕಷ್ಟವಾಯ್ತು. ಇದರಿಂದಾಗಿ ನಮಗೆ ಚಿಂತೆಯಾಗಿತ್ತು. ಆದರೆ ಕೊನೆಗೂ ಹವಾಮಾನ ನಿಧಾನಕ್ಕೆ ನಮಗೆ ಅನುಕೂಲವಾಗಿದ್ದರಿಂದ ನಾವು ಎಂಟು ಮಂದಿ ಮೌಂಟ್ ಎವರೆಸ್ಟ್ ತುತ್ತ ತುದಿ ತಲುಪಲು ಸಾಧ್ಯವಾಯಿತು ಎಂದು ಹಿಮಾಲಯ ಗೈಡ್ ಐಶ್ವರಿ ಪೌಡೆಲ್ ಎಎಫ್ ಪಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಹಲವು ತಂಡಗಳು ಮೌಂಟ್ ಎವರೆಸ್ಟ್ ತುತ್ತ ತುದಿ ಏರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೌಡೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮೌಂಟ್ ಎವರೆಸ್ಟ್ ಏರಲು ನೇಪಾಳ 378 ಪರ್ವತಾರೋಹಿಗಳಿಗೆ ಅನುಮತಿ ನೀಡಿದೆ. ಪ್ರತಿಯೊಬ್ಬ ಪರ್ವತಾರೋಹಿ 11 ಸಾವಿರ ಡಾಲರ್ ಹಣ ಪಾವತಿಸಬೇಕಾಗಿದೆ.