ಹೊಸದಿಲ್ಲಿ/ಕಠ್ಮಂಡು: ಹಿಮಾಚ್ಛಾದಿತ ರಾಷ್ಟ್ರ ನೇಪಾಲದ ಜಾಜರ್‌ಕೋಟ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗುಡ್ಡ ಗಾಡು ಪ್ರದೇಶಗಳಿಂದ ಕೂಡಿದ ಜಿಲ್ಲೆಯಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಗಾಯಗೊಂಡವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗಾಯಗೊಂಡವರ ಪೈಕಿ ಕೆಲವರಿಗೆ ಹೆಚ್ಚಿನ ಚಿಕಿತ್ಸೆ ನೀಡುವುದು ಅಗತ್ಯವಾಗಿ ರುವುದರಿಂದ ಅವರನ್ನು ಭಾರತದ ಆಸ್ಪತ್ರೆಗಳಿಗೆ ಕಳುಹಿಸುವ ಸಾಧ್ಯತೆಗಳು ಇವೆ. ಅವಶೇಷಗಳ ಎಡೆಯಲ್ಲಿ ಇರುವ ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ಮಕ್ಕಳು ಸೇರಿದಂತೆ 30 ಮಂದಿಯನ್ನು ಭೇರಿ ಎಂಬಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಕೆಲವರನ್ನು ಲಕ್ನೋದಲ್ಲಿರುವ ಆಸ್ಪತ್ರೆಗೆ ಕಳುಹಿಸಿ ಕೊಡಲು ಚಿಂತನೆ ನಡೆಸಲಾಗಿದೆ ಎಂದು ಭೇರಿ ನಗರದ ಮೇಯರ್ ಹೇಳಿದ್ದಾರೆ.
ನೆಲದ ಮೇಲೆ ಮಲಗಿಸಿ ಚಿಕಿತ್ಸೆ: ಇಲ್ಲಿನ ಆಸ್ಪತ್ರೆಗೆ ತಂಡೋಪತಂಡವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ರಕ್ಷಣಾ ಕಾರ್ಯಕರ್ತರು ಕರೆ ತರುತ್ತಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೆಲದ ಮೇಲೆ ಮಲಗಿಸಿ ಅಥವಾ ಹಾಸಿಗೆ ಹಾಕಿ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯ ಕರ್ತರು, ಸೇನಾ ಸಿಬ್ಬಂದಿ ತಲುಪದೇ ಇರುವ ಕುಗ್ರಾಮಗಳು ಇನ್ನೂ ಹಲವಾರು ಇವೆ. ಹೀಗಾಗಿ, ಗಾಯಗೊಂಡವರ ಸಂಖ್ಯೆಯೂ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.
ನೆರವು ನೀಡಲು ಸಿದ್ಧ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ನೇಪಾಲ ಭೂಕಂಪದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. “ಇಂಥ ಸಂಕ ಷ್ಟದ ಸ್ಥಿತಿಯಲ್ಲಿ ಭಾರತವು ನೇಪಾಲದ ಜತೆ ನಿಲ್ಲುತ್ತದೆ. ಎಲ್ಲ ರೀತಿಯ ಅಗತ್ಯ ನೆರವನ್ನು ನೀಡಲು ನಾವು ಸಿದ್ಧರಿ ದ್ದೇವೆ’ ಎಂದು ಹೇಳಿದ್ದಾರೆ.
ನೇಪಾಲದಲ್ಲಿ ನಡೆದ ಭೀಕರ ಭೂಕಂಪವು ಅಮೂಲ್ಯ ಜೀವಗಳನ್ನು ಬಲಿಪಡೆದುಕೊಂಡಿದೆ. ಇದು ಅತ್ಯಂತ ನೋವಿನ ಸಂಗತಿ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ. ನಾವೆಲ್ಲರೂ ನೇಪಾಲದ ಹೆಗಲಿಗೆ ಹೆಗಲಾಗಿ ನಿಲ್ಲುತ್ತೇವೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ