ಕಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಭಾನುವಾರ ಬೆಳಿಗ್ಗೆ ತುರ್ತು ಸಂಪುಟ ಸಭೆ ಕರೆದ ಬಳಿಕ ಕೈಗೊಂಡ ಸಂಸತ್ತನ್ನು ವಿಸರ್ಜಿಸುವ ಸಚಿವ ಸಂಪುಟದ ಪ್ರಸ್ತಾವನೆಯನ್ನು ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಂಗೀಕರಿಸಿದ್ದಾರೆ.
ಇಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಂಸತ್ ವಿಸರ್ಜಿಸಲು ನೇಪಾಳದ ಕ್ಯಾಬಿನೆಟ್ ಶಿಫಾರಸು ಮಾಡಿತ್ತು. ಅಲ್ಲದೆ ಶಿಫಾರಸ್ಸಿಗೆ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೇಪಾಳ ಸಂವಿಧಾನದ ಅನುಚ್ಛೇಧ 76, ವಿಧಿ 1 ಮತ್ತು 7, ಅನುಚ್ಛೇಧ 85ರ ಪ್ರಕಾರ ಅನುಮೋದನೆ ನೀಡಿ ಸರ್ಕಾರ ವಿಸರ್ಜಿಸಿದ್ದಾರೆ. ಅಲ್ಲದೆ ಮುಂದಿನ ವರ್ಷದ ಏಪ್ರಿಲ್ 30 ಮತ್ತು ಮೇ10ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ.
ವಿವಾದಾತ್ಮಕ ಆರ್ಡಿನೆನ್ಸ್ ಹಿಂತೆಗೆದುಕೊಳ್ಳುವಂತೆ ಆಡಳಿತರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದಲ್ಲಿ (ಎನ್‌ಸಿಪಿ) ತಮ್ಮ ವಿರೋಧಿಗಳ ಒತ್ತಡಕ್ಕೆ ಒಳಗಾಗಿದ್ದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಿತ್ತು. ಪ್ರಧಾನಿ ಒಲಿ ಮಂಗಳವಾರ ಹೊರಡಿಸಿದ ಸಾಂವಿಧಾನಿಕ ಮಂಡಳಿ ಕಾಯ್ದೆಯೊಂದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಒತ್ತಡದಲ್ಲಿದ್ದರು. ಇದನ್ನು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಒಂದು ಗಂಟೆಯೊಳಗೆ ಅಂಗೀಕರಿಸಿದ್ದರು. ಕೇವಲ ಮೂರು ಸದಸ್ಯರ ಹಾಜರಾತಿಯಲ್ಲಿ ಸಭೆಗಳನ್ನು ಕರೆಯುವ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.
2017ರಲ್ಲಿ ಚುನಾವಣೆ ನಡೆದಾಗ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಒಟ್ಟು 275 ಸ್ಥಾನಗಳ ಪೈಕಿ ನೇಪಾಳ್ ಕಮ್ಯೂನಿಷ್ಟ್ ಪಾರ್ಟಿ (ಎನ್ ಸಿ ಪಿ) 174 ಸ್ಥಾನ ಹೊಂದಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ವಿಪಕ್ಷ ಸ್ಥಾನದಲ್ಲಿರುವ ನೇಪಾಳ್ ಕಾಂಗ್ರೆಸ್ 63, ಪೀಪಲ್ಸ್ ಸೋಷಿಯಲಿಷ್ಟ್ ಪಾರ್ಟಿ 34, ಸ್ವತಂತ್ರ ಸದಸ್ಯರು 4 ಮಂದಿ ಇದ್ದರು.
ಆಡಳಿತರೂಢ ಎನ್ ಸಿಪಿ ಯಲ್ಲಿ 2 ಬಣಗಳಿದ್ದು, ಪ್ರಚಂಡ ನೇತೃತ್ವದ ಬಣ ಆರಂಭದಲ್ಲಿ ಆಡಳಿತ ನಡೆಸಿತ್ತು. 2018ರ ಮಾರ್ಚ್ ನಲ್ಲಿ ಕೆ. ಪಿ ಶರ್ಮಾ ಒಲಿ ನೇತೃತ್ವದ ಬಣ ಮೇಲುಗೈ ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದು ಇದೀಗ ದಿಢೀರ್ ಸಚಿವ ಸಂಪುಟ ವಿಸರ್ಜಿಸಿದ್ದಾರೆ.